*   ಶತಾವಧಾನಿ ಗಣೇಶ್‌, ಧರಣೇಂದ್ರ, ಗೀತಾ ಶೆಣೈಗೂ ಗೌರವ*  ಅಕಾಡೆಮಿಯ ಅನುವಾದ ಪುಸ್ತಕ ಪ್ರಶಸ್ತಿಗಳಿಗೆ ಭಾಜನ*  ಎಲ್ಲ ಸಾಹಿತಿಗಳಿಗೆ ಅಭಿನಂದಿಸಿದ ಡಾ.ಚಂದ್ರಶೇಖರ ಕಂಬಾರ 

ಬೆಂಗಳೂರು(ಜೂ.25):  ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಅನುವಾದ ಪುಸ್ತಕ ಪ್ರಶಸ್ತಿಗೆ ಹಿರಿಯ ಲೇಖಕರಾದ ಡಾ.ಗುರುಲಿಂಗ ಕಾಪಸೆ, ಶತಾವಧಾನಿ ಗಣೇಶ್‌ ಸೇರಿದಂತೆ ನಾಲ್ವರು ಕನ್ನಡದ ಸಾಹಿತಿಗಳು ಭಾಜನರಾಗಿದ್ದಾರೆ.

ಡಾ.ಗುರುಲಿಂಗ ಕಾಪಸೆ ಅವರು ಮರಾಠಿ ಲೇಖಕ ವಿ.ಸ.ಖಾಂಡೇಕರ್‌ ಅವರ ಆತ್ಮಕಥೆ ‘ಏಕಾ ಪಾನಾಚಿ ಗೋಷ್ಠ’ ಕೃತಿಯನ್ನು ಕನ್ನಡಕ್ಕೆ (ಒಂದು ಪುಟದ ಕಥೆ) ಅನುವಾದಿಸಿದ್ದರು. ಅಂತೆಯೇ ಬಸವರಾಜ ಕಟ್ಟಿಮನಿ ಅವರ ‘ಜ್ವಾಲಾಮುಖಿಯ ಮೇಲೆ’ ಕಾದಂಬರಿಯನ್ನು ಹಿಂದಿಗೆ ಅನುವಾದಿಸಿದ ಡಾ.ಧರಣೇಂದ್ರ ಕುರಕುರಿ, ಕುವೆಂಪು ಅವರ ‘ವಿಚಾರ ಕ್ರಾಂತಿಗೆ ಆಹ್ವಾನ’ ಕೃತಿಯನ್ನು ಕೊಂಕಣಿಗೆ ಅನುವಾದಿಸಿದ ಗೀತಾಶೆಣೈ ಮತ್ತು ದೇವುಡು ಅವರ ಮಹಾಬ್ರಾಹ್ಮಣ ಕಾದಂಬರಿಯನ್ನು ಸಂಸ್ಕೃತಕ್ಕೆ ಅನುವಾದಿಸಿದ ಶತಾವಧಾನಿ ಗಣೇಶ್‌ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ವಿಭಾಗದ ಸಂಚಾಲಕ ಡಾ.ಸರಜೂ ಕಾಟ್ಕರ್‌ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

Hinduism: ನಾನು ಹಿಂದೂ ಅಲ್ಲ ಭಾರತೀಯ: ಕುಂ. ವೀರಭದ್ರಪ್ಪ

ಆಯ್ಕೆ ಸಮಿತಿಯ ಜ್ಯೂರಿಗಳಾಗಿ ಹಿರಿಯ ಲೇಖಕರಾದ ಡಾ. ಬಸವರಾಜ ಕಲ್ಗುಡಿ, ಕವಿಗಳಾದ ಬಿ.ಆರ್‌.ಲಕ್ಷ್ಮಣರಾವ್‌, ಡಾ.ಸುಬ್ಬು ಹೊಲೆಯಾರ್‌ ಅವರು ಇದ್ದರು. ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್‌ ಅಥವಾ ಸೆಪ್ಟೆಂಬರ್‌ ತಿಂಗಳಲ್ಲಿ ದೆಹಲಿಯಲ್ಲಿ ನೆರವೇರಲಿದೆ. ಪ್ರಶಸ್ತಿಯು ತಲಾ 50 ಸಾವಿರ ರು.ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಹೇಳಿದರು.

ಅಭಿನಂದನೆ:

ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಭಾಜನರಾದ ಡಾ.ಕಾಪಸೆ ಸೇರಿದಂತೆ ಎಲ್ಲ ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರು ಅಭಿನಂದಿಸಿದ್ದಾರೆ.