ಬೆಂಗಳೂರು (ಆ.22):  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಪ್ರವಾಹ ಮತ್ತು ಮಳೆಹಾನಿ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್‌)ಯಿಂದ ರಾಜ್ಯಕ್ಕೆ 395.5 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸೇರಿದಂತೆ ಅತಿವೃಷ್ಟಿಹಾಗೂ ಪ್ರವಾಹ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರಮುಖ ಸಚಿವರೊಂದಿಗೆ ವಿಡಿಯೋ ಸಂವಾದ ನಡೆಸಿ ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದರು. ಈ ವೇಳೆ, ರಾಜ್ಯಕ್ಕೆ ಪ್ರವಾಹ ಹಾಗೂ ಮಳೆಹಾನಿ ಪರಿಸ್ಥಿತಿ ನಿಭಾಯಿಸಲು ನಾಲ್ಕು ಸಾವಿರ ಕೋಟಿ ರು. ವಿಶೇಷ ಆರ್ಥಿಕ ಪ್ಯಾಕೇಜ್‌ ಒದಗಿಸಬೇಕು. ಇದರಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಕ್ಷಣದ ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳಿಗೆ ರಾಜ್ಯಕ್ಕೆ ಬರಬೇಕಿರುವ ಎಸ್‌ಡಿಆರ್‌ಎಫ್‌ನ ಕಂತು 395 ಕೋಟಿ ರು.ಗಳನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ ಎಸ್‌ಡಿಆರ್‌ಎಫ್‌ ನಿಧಿಯಿಂದ 395.5 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.

'BSY ಸ್ಥಾನಪಲ್ಲಟಕ್ಕೆ ಬಿಜೆಪಿ ಸಚಿವರಲ್ಲೇ ಗೊಂದಲದ ಹೇಳಿಕೆ'...

ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯ ಸರ್ಕಾರ ಎಸ್‌ಡಿಆರ್‌ಎಫ್‌ ನಿಧಿಯಲ್ಲಿ ಲಭ್ಯವಿದ್ದ ಅನುದಾನವನ್ನು ಈ ಬಾರಿ ಕೋವಿಡ್‌ ನಿಯಂತ್ರಣ ಹಾಗೂ ಲಾಕ್‌ಡೌನ್‌ ಪರಿಸ್ಥಿತಿ ನಿಭಾಯಿಸಲು ಬಳಕೆ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಮಳೆಹಾನಿ ಪರಿಸ್ಥಿತಿ ನಿಭಾಯಿಸಲು ಹಣಕಾಸಿನ ಕೊರತೆ ಎದುರಾಗಿತ್ತು.

ಕೇಂದ್ರಕ್ಕೆ ಸಚಿವ ಅಶೋಕ್‌ ಧನ್ಯವಾದ:

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಎಸ್‌ಡಿಆರ್‌ಎಫ್‌ ನಿಧಿಯಿಂದ 395 ಕೋಟಿ ರು. ಅನುದಾನ ಬಿಡುಗಡೆ ಮಾಡಿರುವುದಕ್ಕೆ ಸಚಿವ ಆರ್‌.ಅಶೋಕ್‌ ಧನ್ಯವಾದ ತಿಳಿಸಿದ್ದಾರೆ.

ರಾಮಮಂದಿರ ಹೋರಾಟಗಾರರ ಹತ್ಯೆಗೆ ಸಂಚು!..
  
ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ರಾಜ್ಯದ ಮನವಿಗೆ ಕೂಡಲೇ ಸ್ಪಂದಿಸಿ ಎಸ್‌ಡಿಆರ್‌ಎಫ್‌ ನಿಧಿಯಿಂದ ಕೇಂದ್ರ ಸರ್ಕಾರ 395.5 ಕೋಟಿ ರು. ಹಣವನ್ನು ರಾಜ್ಯಕ್ಕೆ ಮುಂಗಡವಾಗಿ ಬಿಡುಗಡೆ ಮಾಡಿರುವುದು ಸಂತಸ ತಂದಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ರಾಜ್ಯದ ಜನತೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.