ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ವಾಣಿಜ್ಯ ಎಲ್‌ಪಿಜಿ ಪೂರೈಕೆ ಕಡಿತಗೊಂಡಿದ್ದು, ರಾಜ್ಯದ ಹೋಟೆಲ್‌ಗಳು ಮುಚ್ಚುವ ಅಥವಾ ಸೌದೆ ಒಲೆ ಬಳಸುವ ಸ್ಥಿತಿಗೆ ತಲುಪಿವೆ. ಹೋಟೆಲ್‌ ಮಾಲೀಕರ ಸಂಘದ ಮನವಿ ಮೇರೆಗೆ, ಕೇಂದ್ರ ಸರ್ಕಾರವು ಇದೀಗ ಶೇ.50 ರಷ್ಟು ಗ್ಯಾಸ್‌ ಪೂರೈಕೆಯನ್ನು ಪುನರಾರಂಭಿಸಲು ಆದೇಶಿಸಿದೆ.

ಬೆಂಗಳೂರು: ಸೋಮವಾರದಿಂದ ವಾಣಿಜ್ಯ ಬಳಕೆಯ ಸಿಲಿಂಡರ್‌ ಸರಬರಾಜನ್ನು ಯುದ್ಧಪೂರ್ವದ ಸ್ಥಿತಿಯ ಶೇ.50ಕ್ಕೇರಿಸುವಂತೆ ಕೇಂದ್ರ ಪೆಟ್ರೋಲಿಯಂ ಇಲಾಖೆ ಸೂಚನೆ ನೀಡಿರುವುದರಿಂದ ಕಳೆದ 12 ದಿನದಿಂದ ಸಂಕಷ್ಟ ಎದುರಿಸುತ್ತಿದ್ದ ಹೋಟೆಲ್‌ ಉದ್ಯಮ ಕೊಂಚ ನಿರಾಳವಾಗಲಿದೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ‌ಕೃಷ್ಣರಾಜು, ಸೋಮವಾರದಿಂದ ಹೋಟೆಲ್‌ಗಳಿಗೆ ಈ ಹಿಂದೆ ಪೂರೈಕೆಯಾಗುತ್ತಿದ್ದ ವಾಣಿಜ್ಯ ಅನಿಲ ಸಿಲಿಂಡರ್‌ ಪ್ರಮಾಣದ ಶೇ.50 ರಷ್ಟು ಸರಬರಾಜು ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸಿಲಿಂಡರ್‌ ಸಮಸ್ಯೆ ಬಗ್ಗೆ ವಾರದ ಹಿಂದೆ ಪ್ರಧಾನಿ ಮೋದಿ ಅವರಿಗೆ ಸಂಘದಿಂದ ‌ಪತ್ರ ಬರೆಯಲಾಗಿತ್ತು. ಇದೀಗ ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಷ್ಟೇ ಅನ್ಯಾಯ:

ಬೇರೆ ರಾಜ್ಯಗಳ ಹೋಟೆಲ್‌ಗಳಿಗೆ ಸಿಲಿಂಡರ್‌ ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿತ್ತು. ಆದ್ದರಿಂದ ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಎದುರುದಾರರನ್ನಾಗಿ ಮಾಡಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದೆವು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಶೇ.50 ರಷ್ಟು ಗ್ಯಾಸ್‌ ಪೂರೈಕೆ ಮಾಡಲು ಆದೇಶ ನೀಡಿದೆ. ಗ್ಯಾಸ್ ಏಜೆನ್ಸಿಗಳು ಯಾವ ರೀತಿ ಸಿಲಿಂಡರ್‌ ವಿತರಿಸಲಿವೆ ಎಂದು ತಿಳಿದಿಲ್ಲ. ಸೋಮವಾರದಿಂದಲೇ ಗ್ಯಾಸ್‌ ಸಿಲಿಂಡರ್‌ ಸರಬರಾಜಾಗುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಹೋಟೆಲ್‌ಗಳೇ ಹೆಚ್ಚಾಗಿ ಬಳಸುವ ವಾಣಿಜ್ಯ ಬಳಕೆಯ ಸಿಲಿಂಡರ್‌ ಪೂರೈಕೆಯನ್ನು ಶೇ.30ಕ್ಕಿಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದರಿಂದ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಕೆಲ ಹೋಟೆಲ್‌ಗಳು ಬಾಗಿಲು ಹಾಕಿದ್ದರೆ, ಇನ್ನು ಹಲವು ಹೋಟೆಲ್‌ಗಳು ತಮ್ಮ ಮೆನುವನ್ನೇ ಬದಲಾಯಿಸಿವೆ. ಅಡುಗೆ ಅನಿಲ ಸಿಗದೆ ಹಲವು ಹೋಟೆಲ್‌ಗಳು ಕಟ್ಟಿಗೆ ಬಳಸಿ ಅಡುಗೆ ಮಾಡುವ ಸ್ಥಿತಿಗೂ ತಲುಪಿವೆ.

ಎಲ್‌ಪಿಜಿಗೆ ಸರದಿ, ಹೋಟೆಲ್‌ಗೆ ಸೌದೆ

ಬೆಂಗಳೂರು: ಅಡುಗೆ ಅನಿಲ ಪೂರೈಕೆ ವ್ಯತ್ಯಯ ಹಲವು ಭಾಗಗಳಲ್ಲಿ ಜನ ಸಾಮಾನ್ಯರನ್ನು ಹೈರಾಣಾಗಿಸಿದೆ. ಕಲಬುರಗಿ ಸೇರಿ ಹಲವು ನಗರಗಳಲ್ಲಿ ಗೃಹ ಬಳಕೆ ಎಲ್‌ಪಿಜಿಗೆ ಗ್ರಾಹಕರು ಗಂಟೆಗಳಲ್ಲಿ ಸರದಿ ಕಾಯುವ ಪರಿಸ್ಥಿತಿ ಇನ್ನೂ ಮುಂದುವರೆದಿದೆ. ಮತ್ತೊಂದೆಡೆ ವಾಣಿಜ್ಯ ಎಲ್ಪಿಜಿ ಪೂರೈಕೆ ಸ್ಥಗಿತ ಕಾರಣ, ಮತ್ತೊಂದಿಷ್ಟು ಹೋಟೆಲ್‌ಗಳು ಮುಚ್ಚಿದ್ದರೆ, ಇನ್ನೂ ಹಲವು ಹೋಟೆಲ್‌ಗಳು ಗ್ಯಾಸ್ ಸಿಗದ ಕಾರಣ ಸೌದೆ ಒಲೆಗೆ ಮೊರೆ ಹೋಗಿವೆ.