ಕನ್ನಡ ಧ್ವಜಕ್ಕೆ 5 ವರ್ಷದಿಂದ ಅನುಮತಿ ಕೊಡದ ಕೇಂದ್ರ ಸರ್ಕಾರ: ಸಿಎಂ ಸಿದ್ದರಾಮಯ್ಯ ಗರಂ
ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಿ ಕನ್ನಡ ಧ್ವಜಕ್ಕೆ ಅನುಮತಿ ನೀಡುವಂತೆ 5 ವರ್ಷಗಳ ಹಿಂದೆ ಮನವಿ ಮಾಡಿದ್ದರೂ, ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ.

ಬೆಂಗಳೂರು (ಅ.31): ಕನ್ನಡ ನಾಡಿಗೆ ಪ್ರತ್ಯೇಕವಾಗಿ ನಾಡಗೀತೆಯನ್ನು ಒಪ್ಪಿಕೊಂಡಂತೆ ಕನ್ನಡ ಧ್ವಜವನ್ನು ವಿನ್ಯಾಸಗೊಳಿಸಿ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ 5 ವರ್ಷಗಳ ಹಿಂದೆಯೇ ಮನವಿ ಸಲ್ಲಿಕೆ ಮಾಡಲಾಗಿದೆ. ಆದರೂ, ಕೇಂದ್ರ ಸರ್ಕಾರ ಕನ್ನಡ ಧ್ವಜಕ್ಕೆ ಅನುಮತಿಯನ್ನು ಕೊಟ್ಟಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಯ್ಯ ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಅವರು, 'ಕನ್ನಡಕ್ಕೊಂದು ನಾಡಗೀತೆಯಂತೆ ನಾಡಧ್ವಜ ಇರಬೇಕೆಂಬುದು ಆರೂವರೆ ಕೋಟಿ ಕನ್ನಡಿಗರ ಒಕ್ಕೊರಲ ಒತ್ತಾಯ. ಕನ್ನಡಿಗರ ಎದೆಯ ದನಿಗೆ ಓಗೊಟ್ಟು ನಾಡ ದ್ವಜವೊಂದನ್ನು ವಿನ್ಯಾಸಗೊಳಿಸಿ, ಮನ್ನಣೆಗಾಗಿ ಐದು ವರ್ಷಗಳ ಹಿಂದೆಯೇ ನಾವು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೆವು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ತಿರಸ್ಕರಿಸಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅನ್ಯಾಯ ಎಸಗಿದೆ ಎಂದು ಟೀಕೆ ಮಾಡಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಸರ್ಕಾರಿ ಶಾಲೆಗೆ ಭೂಮಿ ಕೊಟ್ಟ ಹುಚ್ಚಮ್ಮ ಸೇರಿ 68 ಮಂದಿ ಆಯ್ಕೆ
ಸಂವಿಧಾನದಲ್ಲಿ ಯಾವುದೇ ವಿರೋಧವಿಲ್ಲ: ರಾಜ್ಯಗಳು ತಮ್ಮದೇ ಧ್ವಜ ಹೊಂದಲು ಸಂವಿಧಾನ ಇಲ್ಲವೇ ಕಾನೂನಿನಲ್ಲಿ ಯಾವ ಅಡ್ಡಿಯೂ ಇಲ್ಲ. ನಾವು ನಮಗೊಂದು ನಾಡಗೀತೆಯನ್ನು ಒಪ್ಪಿಕೊಂಡಿಲ್ಲವೇ? ಇದರಿಂದ ರಾಷ್ಟ್ರಗೀತೆಗೆ ಅವಮಾನ ಮಾಡಿದಂತಾಗುವುದೇ? ರಾಷ್ಟ್ರಧ್ವಜದ ಕೆಳಗೆ ಬೇರೆ ಧ್ವಜಗಳನ್ನು ಹಾರಿಸಬಹುದೆಂದು ರಾಷ್ಟ್ರಧ‍್ವಜ ಸಂಹಿತೆಯೇ ಹೇಳಿದೆ. ಹೀಗಿರುವಾಗ ಯಾಕೆ ಕನ್ನಡಿಗರ ಬಗ್ಗೆ ನಿಮಗೆ ತಾತ್ಸಾರ? ಕೇಂದ್ರಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ' ಎಂದು ಕಿಡಿಕಾರಿದ್ದಾರೆ.
ಕನ್ನಡದ ಬ್ಯಾಂಕುಗಳು ಕರುನಾಡಿನ ಸಂಬಂಧ ಕಡಿದುಕೊಂಡಿವೆ: ದಶಕಗಳ ಕಾಲ ಕನ್ನಡಿಗರು ಬೆವರು ಹರಿಸಿ ಕಟ್ಟಿದ ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಸಿಂಡಿಕೇಟ್ ಬ್ಯಾಂಕ್ ಗಳನ್ನು ವಿಲೀನದ ಹೆಸರಿನಲ್ಲಿ ಆಪೋಶನ ತೆಗೆದುಕೊಂಡಿದ್ದು ನೀವೇ ಅಲ್ಲವೇ ನರೇಂದ್ರ ಮೋದಿ ಅವರೇ? ಮೊದಲು ಈ ಬ್ಯಾಂಕುಗಳಲ್ಲಿ ವ್ಯವಹರಿಸುವಾಗ ನಮ್ಮವರು ಕಟ್ಟಿದ ಸಂಸ್ಥೆ ಎಂಬ ಹೆಮ್ಮೆ ಕನ್ನಡಿಗರಿಗಿತ್ತು. ಈಗ ಅವು ಕರುನಾಡೊಂದಿಗಿನ ಸಂಬಂಧ ಕಡಿದುಕೊಂಡು ಸಂಪೂರ್ಣ ಬದಲಾಗಿವೆ. ನಮ್ಮವರಿಗೆ ಮಾತ್ರ ಯಾಕೆ ಈ ಅನ್ಯಾಯ? ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ ಕನ್ನಡಿಗರ ಪ್ರಶ್ನೆ ಎಂದು ಟೀಕೆ ಮಾಡಿದ್ದಾರೆ.
ನಟ ದರ್ಶನ್ ಮೇಲೆ ದಾಖಲಾಯ್ತು ಎಫ್‌ಐಆರ್: ಮಹಿಳೆಯಿಂದ ದೂರು
ಕರುನಾಡಿಗೆ ನೀರಾವರಿ ಯೋಜನೆಗಳ ಅನ್ಯಾಯ:
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಕರ್ನಾಟಕದ ವಿರುದ್ಧ ದ್ವೇಷ ಸಾಧಿಸುವಂತೆ ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರ ಬಿಜೆಪಿ ಸರ್ಕಾರದ ಗಮನಸೆಳೆಯಲು ಆನ್ಸರ್ ಮಾಡಿ ಮೋದಿ ಎಂಬ ಅಭಿಯಾನವನ್ನು ಪ್ರಾರಂಭಿಸಿ ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವರನ್ನು ಐದು ಪ್ರಶ್ನೆಗಳನ್ನು ಕೇಳಿದ್ದೆ. ಅವುಗಳಲ್ಲಿ ಎರಡು ಪ್ರಶ್ನೆಗಳಿಗಷ್ಟೇ ಉತ್ತರಿಸಿರುವ ಸಚಿವರು ಉಳಿದಂತೆ ನೀಡಿರುವ ಉತ್ತರಗಳಿಗೂ ನಮ್ಮ ಪ್ರಶ್ನೆಗಳಿಗೂ ಸಂಬಂಧವೇ ಇಲ್ಲ.
ರಾಜ್ಯಕ್ಕೆ ಸಂಬಂಧಿಸಿದ ನೀರಾವರಿ ಯೋಜನೆಗಳು ಹೇಗೆ ಬಿಜೆಪಿ ಸರ್ಕಾರದ ತಿರಸ್ಕಾರ, ಅವಗಣನೆಯಿಂದಾಗಿ ಧೂಳು ಹಿಡಿಯುತ್ತಿವೆ ಎನ್ನುವುದನ್ನು ಮತ್ತೊಮ್ಮೆ ವಾಸ್ತವಾಂಶಗಳ ಮೂಲಕ ನಿಮ್ಮ ಮುಂದಿರಿಸುತ್ತಿದ್ದೇನೆ. ತಾವು ವಿಷಯವನ್ನು ಸರಿಯಾಗಿ ಗ್ರಹಿಸಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಿರ್ಲಕ್ಷ್ಯದ ಧೋರಣೆ ಮತ್ತು ಉದ್ದೇಶಪೂರ್ವಕವಾದ ಅನ್ಯಾಯವನ್ನು ಸರಿಪಡಿಸುತ್ತಿರಿ ಎಂದು ಭಾವಿಸುತ್ತೇನೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.