ಬಿಎಂಟಿಸಿಯಲ್ಲಿ ಉಚಿತ ಪ್ರಯಾಣದ ಖುಷಿ: ಮೆಜೆಸ್ಟಿಕ್‌ನಲ್ಲಿ ಮಹಿಳೆಯರ ಸಂಭ್ರಮೋ ಸಂಭ್ರಮ
ಬಸ್ಸಿನಲ್ಲಿ ಲಲನೆಯರ ಹಾಡು ನೃತ್ಯ ಸಂಭ್ರಮ... ಮೊದಲ ಬಾರಿ ಧರ್ಮಸ್ಥಳಕ್ಕೆ ತೆರಳುತ್ತಿರುವ ವೃದ್ಧೆಯಲ್ಲಿ ಸಂಚಾರದ ಖುಷಿ... ದುಡಿಮೆಯ ಒಂದಿಷ್ಟು ಪಾಲನ್ನು ಪ್ರಯಾಣದ ವೆಚ್ಚವೇ ನುಂಗುತ್ತಿದ್ದ ಬೇಸರದಿಂದ ಬಿಡುಗಡೆಯ ನೆಮ್ಮದಿ.
ಬೆಂಗಳೂರು (ಜೂ.12): ಬಸ್ಸಿನಲ್ಲಿ ಲಲನೆಯರ ಹಾಡು ನೃತ್ಯ ಸಂಭ್ರಮ... ಮೊದಲ ಬಾರಿ ಧರ್ಮಸ್ಥಳಕ್ಕೆ ತೆರಳುತ್ತಿರುವ ವೃದ್ಧೆಯಲ್ಲಿ ಸಂಚಾರದ ಖುಷಿ... ದುಡಿಮೆಯ ಒಂದಿಷ್ಟು ಪಾಲನ್ನು ಪ್ರಯಾಣದ ವೆಚ್ಚವೇ ನುಂಗುತ್ತಿದ್ದ ಬೇಸರದಿಂದ ಬಿಡುಗಡೆಯ ನೆಮ್ಮದಿ... ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ‘ಶಕ್ತಿ’ ಜಾರಿಯಾದ ಭಾನುವಾರ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕಂಡ ಭಾವನೆಗಳಿವು.
ಇನ್ನು ಸರ್ಕಾರಿ ಬಸ್ಸಿನಲ್ಲಿ ತೆರಳಲು ನಾವು ಹಣ ಕೊಡಬೇಕಾಗಿಲ್ಲ ಎಂಬ ಸಂತಸ ಪ್ರತಿಯೊಬ್ಬ ಮಹಿಳೆಯರಲ್ಲೂ ಕಂಡುಬಂತು. ಮಧ್ಯಾಹ್ನ ಯೋಜನೆ ಜಾರಿ ಅಗುತ್ತಿದ್ದಂತೆ ಬಸ್ಸು ಹತ್ತಿದ ನಾರಿಮಣಿಯರು ‘ಮಹಿಳೆಯರ ಉಚಿತ ಚೀಟಿ’ ಎಂದು ಬರೆದಿದ್ದ ಟಿಕೆಟ್ ತೋರಿಸುತ್ತ ಪ್ರಯಾಣಿಸಿದರು. ಶಕ್ತಿ ಯೋಜನೆ ಜಾರಿ ಹಿನ್ನೆಲೆಯಲ್ಲಿ ಮೆಜಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಲ್ಲಿ ಬೆಳಗ್ಗೆಯಿಂದಲೇ ಹಬ್ಬದ ವಾತಾವರಣವಿತ್ತು. ಮಹಿಳೆಯರಿಗೆ ಉಚಿತ ಪ್ರಯಾಣ ಇನ್ನು ಖಚಿತ ಎಂಬ ಹಾಡು ಬಸ್ ನಿಲ್ದಾಣದಲ್ಲಿ ಮೊಳಗಿತ್ತು.
1ನೇ ಗ್ಯಾರಂಟಿ ಜಾರಿ, ನುಡಿದಂತೆ ನಡೆದಿದ್ದೇವೆ: ಸಚಿವ ಪ್ರಿಯಾಂಕ್ ಖರ್ಗೆ
ಜಯನಗರ, ಯಶವಂತಪುರ, ಶಾಂತಿನಗರ, ಕೆಂಗೇರಿ, ಶ್ರೀನಗರ, ನಂದಿನಿ ಲೇಔಟ್, ಮಲ್ಲೇಶ್ವರ, ಮತ್ತಿಕೆರೆ, ಬಿಟಿಎಂ ಲೇಔಟ್ ಸೇರಿದಂತೆ ನಗರಾದ್ಯಂತ ಬಸ್ ನಿಲ್ದಾಣಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಮಹಿಳೆಯರು ಕಾದಿದ್ದರು. ಮೆಜಸ್ಟಿಕ್‌ನಲ್ಲಿ ಪ್ರಯಾಣಕ್ಕಾಗಿ ಬಂದ ಮಹಿಳೆಯರಿಗೆ ಮಹಿಳಾ ಸಿಬ್ಬಂದಿ ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ಉಚಿತ ಬಸ್‌ಗೆ ಚಾಲನೆ ವೇಳೆ ಬಸ್ ರಿಬ್ಬನ್ ಕತ್ತರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಸ್ಸು ಹತ್ತಿದರು. ಅವರೇ ಸ್ವತಃ ಬಸ್‌ನಲ್ಲಿ ಟಿಕೆಟ್ ವಿತರಿಸಿದಾಗ ಮಹಿಳೆಯರ ಸಂತಸಕ್ಕೆ ಪಾರವೇ ಇರಲಿಲ್ಲ.
ಮನೆ ಹಬ್ಬದಂತೆ ಸಂಭ್ರಮ: ಕೆಎಸ್‌ಆರ್‌ಟಿಸಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಧರ್ಮಸ್ಥಳ, ಮೈಸೂರು, ಕಲಬುರಗಿ, ಬೆಳಗಾವಿ, ರಾಯಚೂರು, ಶಿರಸಿ, ಶಿವಮೊಗ್ಗ, ಬಿಎಂಟಿಸಿ ಬಸ್ಸುಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬಾಳೆದಿಂಡು, ಹೂವುಗಳಿಂದ ಸಿಂಗರಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಮಹಿಳಾ ಸಿಬ್ಬಂದಿ ಮನೆಯ ಹಬ್ಬದಂತೆ ಸಂಭ್ರಮಿಸಿದರು. ಬಸ್ಸುಗಳೆದುರು ರಂಗೋಲಿ ಬಿಡಿಸಿ ಹೂವನ್ನಿಟ್ಟಿದ್ದರು. ‘ಬಸ್ಸಿನ ಎದುರು ಮಹಿಳಾ ಸಬಲೀಕರಣದತ್ತ ದಿಟ್ಟಹೆಜ್ಜೆ, ಶಕ್ತಿ ಯೋಜನೆ, ಮಹಿಳೆಯರಿಗೆ ಉಚಿತ ಪ್ರಯಾಣ’ ಎಂಬ ಗುಲಾಬಿ ಫಲಕವನ್ನು ಅಂಟಿಸಲಾಗಿತ್ತು.
ಹಾಡು, ನೃತ್ಯ, ನಾಟಕ: ಉಚಿತ ಪ್ರಯಾಣದ ಜಾಗೃತಿ ಕುರಿತು ಮಹಿಳಾ ಸಿಬ್ಬಂದಿ ಕಿರು ನಾಟಕವನ್ನೂ ಬಸ್‌ನಿಲ್ದಾಣದಲ್ಲಿ ಪ್ರದರ್ಶಿಸಿದರು. ಯೋಜನೆಯ ಪ್ರಯೋಜನ ಪಡೆಯುವಂತೆ ಅರಿವು ಮೂಡಿಸಿದರು. ಅಲ್ಲದೆ, ಬಸ್ಸಿನೊಳಗೆ, ‘ಉಚಿತ ಪ್ರಯಾಣ ಮಹಿಳೆಗೆ ಖಚಿತ ಪ್ರಯಾಣ’ ಎಂಬಂತಹ ಹಾಡುಗಳನ್ನು ಹಾಡಿದರು. ಈ ಶತಮಾನದ ಸ್ವಾಭಿಮಾನ ಹೆಣ್ಣು ಹಾಡಿ ಬಸ್ಸಿನೊಳಗೆ ನೃತ್ಯವನ್ನೂ ಮಾಡಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
ಬೆಳಗ್ಗೆಯೇ ಉಚಿತ ಟಿಕೆಟ್‌ಗೆ ಡಿಮ್ಯಾಂಡ್: ಮೆಜಸ್ಟಿಕ್‌ಗೆ ಬೆಳಗ್ಗೆ ಬಂದು ಬಸ್ಸೇರಿದ್ದ ಹಲವು ಮಹಿಳೆಯರು ಈಗಲೇ ಉಚಿತ ಟಿಕೆಟ್ ಕೊಡಿ ಎಂದು ದುಂಬಾಲು ಬಿದ್ದಿದ್ದರು. ಮಧ್ಯಾಹ್ನ 1ರ ಬಳಿಕ ಯೋಜನೆ ಜಾರಿಯಾಗತ್ತೆ ಈಗ ಉಚಿತವಲ್ಲ ಎಂದು ಬಸ್ ನಿರ್ವಾಹಕರು ಮನವೊಲಿಸಲು ಹರಸಾಹಸ ಪಡುತ್ತಿದ್ದುದು ಕಂಡುಬಂತು. ಇನ್ನು ಹಲವು ಮಹಿಳೆಯರು ಮಧ್ಯಾಹ್ನದ ಬಳಿಕ ಉಚಿತವೆಂಬ ಕಾರಣಕ್ಕೆ ಹಲವು ಮಹಿಳೆಯರು ಪ್ರಯಾಣವನ್ನೇ ಮಧ್ಯಾಹ್ನಕ್ಕೆ ಮುಂದೂಡಿದ್ದರು.
ಬಸ್‌ಗಳು ಭರ್ತಿ: ಶಕ್ತಿ ಯೋಜನೆ ಅನುಷ್ಠಾನವಾದ ಮೊದಲ ದಿನವೇ ಮಹಿಳೆಯರಿಂದ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಭಾನುವಾರವಾದ ಹಿನ್ನೆಲೆಯಲ್ಲಿ ನಗರ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ಹೆಚ್ಚಾಗಿ ಸಂಚರಿಸಿದ್ದಾರೆ. ದೂರದ ಊರುಗಳಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೂ ಬಸ್ಸುಗಳು ಭರ್ತಿಯಾಗಿದ್ದವು.
ಮೊದಲ ದಿನ ದಾಖಲೆಗೆ ರಿಲೀಫ್: ರಾಜ್ಯದ ಮಹಿಳೆಯರು ಮುಂದಿನ ದಿನಗಳಲ್ಲಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಸ್ಮಾರ್ಚ್ ಹೊಂದುವುದು ಕಡ್ಡಾಯ. ಆದರೆ, ಅದು ಕೈ ಸೇರುವವರೆಗೆ ಆಧಾರ್, ಮತದಾನ ಗುರುತಿನ ಚೀಟಿ ಸೇರಿ ಇತರೆ ದಾಖಲೆ ತೋರಿಸಬೇಕು. ಆದರೆ, ಯೋಜನೆ ಅನುಷ್ಠಾನದ ಮೊದಲ ದಿನ ಇವೆಲ್ಲದ್ದರಿಂದ ರಿಲೀಫ್ ಇತ್ತು. ಯಾವುದೇ ದಾಖಲೆ ತೋರಿಸದೇ ಇದ್ದರೂ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ನಿರ್ವಾಹಕರು ಅವಕಾಶ ಮಾಡಿಕೊಟ್ಟರು.
ಎಚ್‌ಡಿಕೆಗೆ ಯಾವ ಹುದ್ದೆಗೆ ಎಷ್ಟು ರೇಟ್ ಅಂತ ಗೊತ್ತಿದೆ: ಸಚಿವ ಚಲುವರಾಯಸ್ವಾಮಿ
ಗುಲಾಬಿ ಟಿಕೆಟ್: ಸರ್ಕಾರಿ ಬಸ್‌ಗಳಲ್ಲಿ ಈವರೆಗೆ ನೀಡುತ್ತಿದ್ದ ಟಿಕೆಟ್‌ಗಳು ಸಾಮಾನ್ಯವಾಗಿ ಬಿಳಿ ಬಣ್ಣದ್ದಾಗಿತ್ತು. ಭಾನುವಾರದಿಂದ ಮಹಿಳೆಯರಿಗೆ ವಿಶೇಷ ಗುಲಾಬಿ ಬಣ್ಣದ ಟಿಕೆಟ್ ನೀಡಲಾಗಿದೆ. ‘ಶಕ್ತಿ ಯೋಜನೆಯಡಿ ಮಹಿಳಾ ಉಚಿತ ಟಿಕೆಟ್ ಎಂದು ನಮೂದಿಸಲಾಗಿದೆ. ಎಲ್ಲಿಂದ.. ಎಲ್ಲಿಗೆ.. ಮೊತ್ತ: .0 ಎಂದು ಟಿಕೆಟ್ ಮುದ್ರಿಸಲಾಗಿದೆ. ಆದರೆ, ಭಾನುವಾರ ಹಲವರಿಗೆ ಬಿಳಿ ಬಣ್ಣದ ಟಿಕೆಟನ್ನೇ ನೀಡಲಾಗಿದೆ.