ಬೆಂಗಳೂರು(ಏ.06): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಮಗಳನ್ನು ಅಪಹರಿಸಿಲಾಗಿದೆ ಎಂದು ಆರೋಪಿಸಿ ಆಕೆಯ ಪೋಷಕರು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಯುವತಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಪ್ರಮಾಣಿಕೃತ ಹೇಳಿಕೆ ದಾಖಲಿಸಿದ್ದಾರೆ. ತಮ್ಮನ್ನು ಯಾರೂ ಅಪಹರಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ನಗರದ ಗುರುನಾನಕ್‌ ಭವನದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾದ ಯುವತಿ, ‘ಪ್ರಕರಣದಲ್ಲಿ ‘ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ಜೀವ ಭಯದಿಂದಾಗಿ ಹೊರರಾಜ್ಯಗಳಲ್ಲಿ ರಕ್ಷಣೆ ಪಡೆಯುತ್ತಿದ್ದೆ. ನನ್ನ ಸ್ವಇಚ್ಛೆಯಿಂದ ಸ್ನೇಹಿತರೊಂದಿಗೆ ನೆಲೆಸಿದ್ದೆ’ ಎಂದು ನ್ಯಾಯಾಧೀಶರ ಮುಂದೆ ವಿವರಿಸಿದ್ದಾರೆ’ ಎಂದು ಆಕೆಯ ಪರ ವಕೀಲ ಸೂರ್ಯ ಮುಕುಂದರಾಜ್‌ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಅಪಹರಣ ಪ್ರಕರಣ ಸಂಬಂಧ ಪೊಲೀಸರ ವಿಚಾರಣೆ ವೇಳೆ ಸಂತ್ರಸ್ತ ಯುವತಿ ನೀಡಿದ್ದ ಹೇಳಿಕೆ ಪ್ರಮಾಣ ಪತ್ರವನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದರು.

ಸಂತ್ರಸ್ತ ಯುವತಿ ವಸಂತನಗರದ ಗುರುನಾನಕ್‌ ಭವನದಲ್ಲಿರುವ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಬೆಳಗಾವಿಯಲ್ಲಿ ದಾಖಲಾಗಿದ್ದ ದೂರು:

ಸಿ.ಡಿ. ಬಹಿರಂಗವಾಗುತ್ತಿದ್ದಂತೆ ಯುವತಿಯ ತಂದೆ ಬೆಳಗಾವಿಯ ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ಮಗಳನ್ನು ಅಪಹರಿಸಲಾಗಿದ್ದು, ಒತ್ತಡದಲ್ಲಿರಿಸಿ ಹೇಳಿಕೆಗಳನ್ನು ಕೊಡಿಸಲಾಗುತ್ತಿದೆ ಎಂದು ದೂರಿದ್ದರು. ನಂತರ ಈ ದೂರನ್ನು ಬೆಂಗಳೂರಿನ ಆರ್‌.ಟಿ.ನಗರ ಠಾಣೆಗೆ ವರ್ಗಾವಣೆಯಾಗಿತ್ತು.