ಬೆಂಗಳೂರು(ಜ.27): ರಾಜ್ಯ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಜಾಲದಲ್ಲಿ ಮತ್ತಷ್ಟು ಮಂದಿ ಸಿಲುಕಿರುವ ಬಗ್ಗೆ ಮಾಹಿತಿ ಪಡೆದಿರುವ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಈಗ ಆರೋಪಿಗಳ ಪತ್ತೆಗೆ ಕಾರ್ಯಾಚರಣೆಯನ್ನು ಬಿರುಸುಗೊಳಿಸಿದ್ದಾರೆ. 

ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಕೆಪಿಎಸ್‌ಸಿ ನೌಕರರಾದ ಸನಾ ಬೇಡಿ ಹಾಗೂ ರಮೇಶ್‌ ಅಲಿಯಾಸ್‌ ರಾಮಪ್ಪ ಹೆರಕಲ್‌ ಅವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗೆ ಫೆ.2ರವರೆಗೆ ವಶಕ್ಕೆ ಪಡೆದಿದ್ದಾರೆ. ನಂತರ ಇದೇ ಪ್ರಕರಣದಲ್ಲಿ ಸೆರೆಯಾಗಿರುವ ಚಂದ್ರು ಜೊತೆ ಈ ಇಬ್ಬರು ಆರೋಪಿಗಳನ್ನು ಮುಖಾಮುಖಿ ಮಾಡಿ ಸಿಸಿಬಿ ವಿಚಾರಣೆಗೊಳಪಡಿಸಿದೆ ಎಂದು ತಿಳಿದು ಬಂದಿದೆ.

ಸನಾಳಿಗೆ ‘ಸ್ನೇಹ’ವೇ ಮುಳ್ಳಾಯಿತು:

ಪ್ರಶ್ನೆ ಪತ್ರಿಕೆ ಸಿದ್ಧತಾ ಕಾರ್ಯಕ್ಕೆ ನಿಯೋಜಿತಳಾಗಿದ್ದ ಸನಾ ಬೇಡಿ, ತನ್ನ ಸಹೋದ್ಯೋಗಿಯಾಗಿದ್ದ ರಮೇಶನ ಸ್ನೇಹಕ್ಕೆ ಕಟ್ಟುಬಿದ್ದು ಈಗ ಜೈಲು ಸೇರುವಂತಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ಇದುವರೆಗೆ ಹಣಕ್ಕಾಗಿ ಆಕೆ ಕೃತ್ಯ ಎಸಗಿರುವುದಕ್ಕೆ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ರಮೇಶ್‌ ಮತ್ತು ಸನಾ ಬೇಡಿ ಮಧ್ಯೆ ಗೆಳೆತನವಿತ್ತು. ಈ ಸಲುಗೆಯಲ್ಲೇ ಆತ, ಪ್ರಶ್ನೆ ಪತ್ರಿಕೆ ಸೋರಿಕೆ ಕೃತ್ಯಕ್ಕೆ ಸನಾಳನ್ನು ಬಳಸಿಕೊಂಡಿದ್ದಾನೆ. ತನ್ನ ಕುಟುಂಬದ ದಾರುಣ ಕತೆ ಹೇಳಿ ಸನಾಳನ್ನು ಭಾವುಕವಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಕೊನೆಗೆ ಗೆಳೆಯನ ಮಾತಿಗೆ ಮರುಳಾಗಿ ಆಕೆ ಪ್ರಶ್ನೆ ಪತ್ರಿಕೆ ಕೊಟ್ಟಿದ್ದಾಳೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಕೆಪಿಎಸ್ಸಿ ಸಿಬ್ಬಂದಿಯಿಂದಲೇ ಪ್ರಶ್ನೆಪತ್ರಿಕೆ ಸೋರಿಕೆ: ಇಬ್ಬರು ನೌಕರರ ಬಂಧನ

ಬಳಿಕ ಈ ಪ್ರಶ್ನೆ ಪತ್ರಿಕೆಯನ್ನು ರಮೇಶ್‌, ಚಂದ್ರು ಹಾಗೂ ರಾಚಪ್ಪ ಎಫ್‌ಡಿಎ ಆಗುವ ಕನಸು ಕಂಡಿದ್ದ ಅಭ್ಯರ್ಥಿಗಳಿಗೆ ಲಕ್ಷ ಲಕ್ಷ ರುಪಾಯಿಗೆ ಮಾರಾಟ ಮಾಡಿದ್ದಾರೆ. ಹೀಗಾಗಿ ಸನಾಳಿಗೆ ಹಣದ ವ್ಯವಹಾರ ಗೊತ್ತಿಲ್ಲ. ಆದರೂ ಹಣ ಪಡೆದಿರುವ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ. ಇನ್ನು ಈ ಪ್ರಮುಖ ಆರೋಪಿಗಳ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಪ್ರಶ್ನೆ ಪತ್ರಿಕೆ ಸೋರಿಕೆ ಫಲಾನುಭವಿಗಳಿಗೆ ಗಾಳ ಹಾಕಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ರಾಜ್ಯ ಗುಪ್ತದಳದ ಮಾಹಿತಿ

ಎಫ್‌ಡಿಎ ಪರೀಕ್ಷೆ ಮೇಲೆ ನಿಗಾ ವಹಿಸಿದ್ದ ರಾಜ್ಯ ಗುಪ್ತದಳಕ್ಕೆ ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸುಳಿವು ಆಧರಿಸಿ ಗುಪ್ತದಳ ಅಧಿಕಾರಿಗಳು ಬೆನ್ನತ್ತಿದಾಗ ವಾಣಿಜ್ಯ ತೆರಿಗೆ ಇಲಾಖೆಯ ಇನ್ಸ್‌ಪೆಕ್ಟರ್‌ ಚಂದ್ರು ಹಾಗೂ ಕೆಪಿಎಸ್‌ಸಿ ನೌಕರ ರಮೇಶ್‌ ಪಾತ್ರದ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ಬಳಿಕ ಈ ವಿಚಾರವನ್ನು ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರಿಗೆ ಗುಪ್ತದಳ ಅಧಿಕಾರಿಗಳು ರವಾನಿಸಿದ್ದರು. ಅಂತೆಯೇ ಪ್ರಶ್ನೆ ಪತ್ರಿಕೆ ಜಾಲದ ವಿರುದ್ಧ ಸಿಸಿಬಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದು ಬಂದಿದೆ.

ಚಂದ್ರು, ಸನಾ, ರಮೇಶ್‌ ಅಮಾನತು?

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ವಾಣಿಜ್ಯ ತೆರಿಗೆ ಇಲಾಖೆಯ ಇನ್ಸ್‌ಪೆಕ್ಟರ್‌ ಚಂದ್ರು, ರಾಜ್ಯ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೌಕರರಾದ ಸನಾ ಬೇಡಿ ಹಾಗೂ ರಮೇಶ್‌ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸಿಸಿಬಿ ವರದಿ ಸಲ್ಲಿಸಿದೆ. ಈ ವರದಿ ಅಧರಿಸಿ ಆರೋಪಿಗಳನ್ನು ಅಮಾನತುಗೊಳಿಸುವ ಆದೇಶ ಬುಧವಾರ ಹೊರಬೀಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.