ಕೆಪಿಎಸ್ಸಿ ಸಿಬ್ಬಂದಿಯಿಂದಲೇ ಪ್ರಶ್ನೆಪತ್ರಿಕೆ ಸೋರಿಕೆ: ಇಬ್ಬರು ನೌಕರರ ಬಂಧನ

ಮನೆಯೊಳಗಿನ ಕಳ್ಳರು| ಲೋಕಸೇವಾ ಆಯೋಗದ ಇಬ್ಬರು ನೌಕರರ ಬಂಧನ| ಬಂಧಿತರ ಸಂಖ್ಯೆ 16ಕ್ಕೇರಿಕೆ, 82 ಲಕ್ಷ ರು. ಜಪ್ತಿ| ಸಹೋದ್ಯೋಗಿಗೆ ಪ್ರಶ್ನೆಪತ್ರಿಕೆ ಕೊಟ್ಟಿದ್ದ ಸ್ಟೆನೋ| ಕೈಗೆ ಸಿಗುತ್ತಿದ್ದಂತೆ ಎಲ್ಲೆಡೆ ಸೋರಿಕೆ ಮಾಡಿದ್ದ ಎಸ್‌ಡಿಎ| 
 

Two KPSC Employees Arrested for FDA Question Paper Leak Case grg

ಬೆಂಗಳೂರು(ಜ.26): ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, ಕೆಪಿಎಸ್‌ಸಿಯ ಇಬ್ಬರು ಸಿಬ್ಬಂದಿಯನ್ನು ಸೋಮವಾರ ಬಂಧಿಸಿದ್ದಾರೆ.

ಕೆಪಿಎಸ್‌ಸಿ ಕಂಟ್ರೋಲರ್‌ ಆಫ್‌ ಎಕ್ಸಾಮ್‌ ವಿಭಾಗದ ಸ್ಟೆನೋಗ್ರಾಫರ್‌ ಸನಾ ಬೇಡಿ ಹಾಗೂ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಸಿಬ್ಬಂದಿ ರಮೇಶ್‌ ಅಲಿಯಾಸ್‌ ರಾಮಪ್ಪ ಎಂಬಾತನನ್ನು ಬಂಧಿಸಲಾಗಿದೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ16ಕ್ಕೆ ಏರಿಕೆಯಾಗಿದೆ. ಆರೋಪಿಗಳಿಂದ ಒಟ್ಟಾರೆ ಒಟ್ಟು 82 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಸನಾ ಬೇಡಿ ಕೆಪಿಎಸ್‌ಸಿ ಪರೀಕ್ಷಾ ವಿಭಾಗದಲ್ಲಿ ಶೀಘ್ರ ಲಿಪಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದರೆ, ಮಹೇಶ್‌ ಎಸ್‌ಡಿಎಯಾಗಿದ್ದ. ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಪರಿಚಯಸ್ಥರಾಗಿದ್ದರು. ಎಸ್‌ಡಿಎ ಆಗಿದ್ದ ಮಹೇಶ್‌ ಕೂಡ ಎಫ್‌ಡಿಎ ಪರೀಕ್ಷೆ ಬರೆಯಲು ಮುಂದಾಗಿದ್ದ. ಸನಾ ಬೇಡಿಯನ್ನು ಭೇಟಿಯಾಗಿದ್ದ ಆರೋಪಿ ‘ನಾನು ಈ ಬಾರಿ ಎಫ್‌ಡಿಎ ಪರೀಕ್ಷೆ ಬರೆಯುತ್ತಿದ್ದು, ಪರೀಕ್ಷೆಗೆ ಮೊದಲೇ ಪ್ರಶ್ನೆ ಪತ್ರಿಕೆ ನೀಡುವಂತೆ ಮನವಿ ಮಾಡಿದ್ದ. ಇದಕ್ಕೆ ಆರಂಭದಲ್ಲಿ ಸನಾ ನಿರಾಕರಿಸಿದ್ದಳು. ಇಷ್ಟಕ್ಕೆ ಸುಮ್ಮನಾಗದ ರಮೇಶ್‌, ಪ್ರಶ್ನೆ ಪತ್ರಿಕೆಗಾಗಿ ಸನಾ ಬೇಡಿ ಹಿಂದೆ ಬಿದ್ದಿದ್ದ. ಪ್ರಶ್ನೆ ಪತ್ರಿಕೆ ಎಲ್ಲೂ ಸೋರಿಕೆ ಮಾಡುವುದಿಲ್ಲ. ಎಲ್ಲೂ ಮಾಹಿತಿ ಬಹಿರಂಗಗೊಳ್ಳದಂತೆ ಗೌಪ್ಯತೆ ಕಾಪಾಡುತ್ತೇನೆ. ಈ ಬಾರಿ ಎಫ್‌ಡಿಎ ಪರೀಕ್ಷೆ ಬರೆದು ಒಳ್ಳೆಯ ಕೆಲಸ ಗಿಟ್ಟಿಸಿಕೊಳ್ಳುವ ಕನಸು ಕಂಡಿದ್ದೇನೆ. ಒಂದು ಬಾರಿ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕಿದರೆ ಪರೀಕ್ಷೆ ಬರೆಯುವುದು ಸುಲಭವಾಗುತ್ತದೆ. ದಯವಿಟ್ಟು ಸಹಾಯ ಮಾಡಿ’ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದ. ನಂತರ ಈತನ ಒತ್ತಾಯಕ್ಕೆ ಮಣಿದ ಸನಾ ಬೇಡಿ ಸಹೋದ್ಯೋಗಿ ರಮೇಶ್‌ ಮೇಲೆ ನಂಬಿಕೆಯಿಟ್ಟು ಪ್ರಶ್ನೆ ಪತ್ರಿಕೆ ಕೊಡಲು ಒಪ್ಪಿದ್ದಳು. ಯಾರಿಗೂ ಗೊತ್ತಾಗದಂತೆ ಪ್ರಶ್ನೆ ಪತ್ರಿಕೆಯನ್ನು ಕದ್ದು ಪೆನ್‌ಡ್ರೈವ್‌ಗೆ ಹಾಕಿ ಆರೋಪಿ ರಮೇಶ್‌ಗೆ ನೀಡಿದ್ದಳು.

ನಾಳೆ (ಜ.24)ರಂದು ನಡೆಯಬೇಕಿದ್ದ FDA ಪರೀಕ್ಷೆ ಮುಂದೂಡಿಕೆ: ಕಾರಣ ಇಲ್ಲಿದೆ..

ಪ್ರಶ್ನೆ ಪತ್ರಿಕೆ ಕೈಗೆ ಸಿಗುತ್ತಿದ್ದಂತೆ ಆರೋಪಿ ಎಫ್‌ಡಿಎ ಅಭ್ಯರ್ಥಿಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸಲು ಮುಂದಾಗಿದ್ದ. ಚಂದ್ರು ತನ್ನ ಸಹಚರ ರಾಚಪ್ಪ ಜತೆ ಸೇರಿ ಎಫ್‌ಡಿಎ ಪರೀಕ್ಷಾ ಅಭ್ಯರ್ಥಿಗಳನ್ನು ಸಂಪರ್ಕಿಸಿ ಡೀಲ್‌ ಕುದುರಿಸಿದ್ದ. ಪ್ರಶ್ನೆ ಪತ್ರಿಕೆ ನೀಡಲು ರಮೇಶ್‌ನಿಂದ ಸನಾ ಬೇಡಿ ಹಣ ಪಡೆದಿದ್ದಾಳೆಯೇ, ಇಲ್ಲವೇ ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಶ್ನೆಪತ್ರಿಕೆ ಕೊಟ್ಟಿದ್ದು ನಾನೇ: ಸನಾ

ಆರೋಪಿ ಮಹೇಶ್‌ ಕೊಟ್ಟ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಸನಾ ಬೇಡಿಯನ್ನು ಸೋಮವಾರ ಬಂಧಿಸಿದ್ದಾರೆ. ಪ್ರಶ್ನೆಪತ್ರಿಕೆ ತಾನೇ ಕೊಟ್ಟಿರುವುದಾಗಿ ಸನಾ ಬೇಡಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ನನ್ನ ಮಗ ತಪ್ಪು ಮಾಡಿಲ್ಲ

ಎಫ್‌ಡಿಎ ಪ್ರಶ್ನೆ ಪತ್ರಿಕೆ ಲೀಕ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬೂದಿಹಾಳ ಎಸ್‌.ಜಿ ಗ್ರಾಮದ ರಮೇಶ್‌ ಹೆರಕಲ್ಲ ಬಂಧನದ ನಂತರ ಅವರ ತಾಯಿ ಮಾಧ್ಯಮದೆದುರು ಕಣ್ಣೀರು ಹಾಕಿ, ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ ಎಂದು ಗೋಳಿಟ್ಟಿದ್ದಾರೆ.

ಬೂದಿಹಾಳ ಗ್ರಾಮಕ್ಕೆ ಸೋಮವಾರ ಮಾಧ್ಯಮಗಳು ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ತಾಯಿ ಶಾಂತವ್ವ, ನನ್ನ ಮಗ ಯಾವ ತಪ್ಪು ಮಾಡಿಲ್ಲ. ನಮ್ಮ ಮನೆ ದೇವರಾದ ಫಕೀರೇಶ್ವರನ ಮೇಲೆ ಆಣೆ ಮಾಡಿ ಹೇಳುತ್ತೇನೆ ಎಂದು ಕಣ್ಣೀರಿಟ್ಟರು.

ನನ್ನ ಮಗನನ್ನು ಸಿಲುಕಿಸಲು ಬೆಂಗಳೂರಿನವರು ಪಿತೂರಿ ಮಾಡುತ್ತಿದ್ದು, ಇದರಲ್ಲಿ ಮೇಲಧಿಕಾರಿಗಳ ಕೈವಾಡವಿದೆ. ಯಾವುದೋ ಮೇಡಂ ಅವರ ಕೈವಾಡವಿದೆ. ತನಿಖೆಯಾಗಲಿ ಸತ್ಯ ಹೊರಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ರಮೇಶ್‌ ಹೆರಕಲ್ಲ ಕೆಪಿಎಸ್‌ಸಿ ರಹಸ್ಯ ವಿಭಾಗದ ಎಸ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.
 

Latest Videos
Follow Us:
Download App:
  • android
  • ios