ಗಿರೀಶ್ ಮಾದೇನಳ್ಳಿ

ಬೆಂಗಳೂರು [ನ.02] : ಮೈತ್ರಿ ಸರ್ಕಾರದ ಅವಧಿಯಲ್ಲಿ ಆಳುವ ವರ್ಗದ ವಿರೋಧಿಗಳ ಸಂಭಾಷಣೆಯನ್ನು ತಮ್ಮ ಮೊಬೈಲ್ ನಲ್ಲೇ ವಿಶೇಷ ಸೌಲಭ್ಯ ಹೊಂದುವ ಮೂಲಕ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಎಸಿಪಿಯೊಬ್ಬರು ಕದ್ದಾಲಿಸಿದ್ದರು ಎಂಬ ಮಹತ್ವದ ಸಂಗತಿ ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 

ಮೊಬೈಲ್ ಸೇವಾ ಕಂಪನಿಗಳಿಗೆ ಹೆಚ್ಚುವರಿಯಾಗಿ ಎರಡು ಮೊಬೈಲ್ ಸಂಖ್ಯೆಗಳನ್ನು ನೀಡಿದ್ದ ಎಸಿಪಿ, ಕದ್ದಾಲಿಕೆಗಾಗಿ 2 ಪ್ರತ್ಯೇಕ ಸಿಮ್‌ಗಳನ್ನು ಪಡೆದು ಅವುಗಳ ಮೂಲಕ ಸರ್ಕಾರ ಸೂಚಿಸಿದೆ ಎನ್ನಲಾದ ವ್ಯಕ್ತಿಗಳ ದೂರವಾಣಿ ಮಾತುಕತೆಗಳನ್ನು ಆಲಿಸುತ್ತಿದ್ದರು. ಈ ವಿಶೇಷ ಸೌಲಭ್ಯ ಹೊಂದಲು ಸಹಾಯಕ ಉಪ ಆಯುಕ್ತರಿಗೆ (ಎಸಿಪಿ) ಹಿರಿಯ ಅಧಿಕಾರಿಯೊ ಬ್ಬರು ಬೆಂಬಲಿಸಿದ್ದರು ಎಂದು ತಿಳಿದು ಬಂದಿದೆ. 

ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ಮುಂದೆ ಪ್ರಾಥಮಿಕ ಹಂತದ ವಿಚಾರಣೆ ಎದುರಿಸಿದ ಆ ಎಸಿಪಿ, ಬಳಿಕ ತನಿಖೆ ಭೀತಿಯಿಂದ ಹಿರಿಯ ಅಧಿಕಾರಿ ಸೂಚನೆ ಮೇರೆಗೆ ಕದ್ದಾಲಿಕೆಗೆ ಬಳಸಿದ್ದಾರೆ ಎನ್ನಲಾದ ಎರಡು ಸಿಮ್‌ಗಳನ್ನು ನಾಶಗೊಳಿಸಿದ್ದಾರೆ ಎಂದು ಗೃಹ ಇಲಾಖೆಯ ವಿಶ್ವಸನೀಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಹೇಗೆ ವಿಶೇಷ ಸೌಲಭ್ಯ?: ಅಪರಾಧ ಪ್ರಕರಣಗಳ ಆರೋಪಿಗಳು, ರೌಡಿಗಳು ಹಾಗೂ ಸಮಾಜಘಾತುಕ ವ್ಯಕ್ತಿಗಳ ಮೇಲೆ ಕಣ್ಗಾವಲಿಗಾಗಿ ಕಾನೂನು ಪ್ರಕಾರ ಸಿಸಿಬಿಗೆ ಫೋನ್ ಕದ್ದಾಲಿಕೆಗೆ ಅವಕಾಶವಿದೆ. ಆದರೆ ಈ ಕದ್ದಾಲಿಕೆಯು ಏಳು ದಿನಗಳ ಮಟ್ಟಿಗೆ ಸೀಮಿತವಾಗಿದ್ದರೆ ಪೊಲೀಸ್ ಆಯುಕ್ತರು ಹಾಗೂ ಏಳು ದಿನಕ್ಕಿಂತ ಹೆಚ್ಚಿನ ಅವಧಿಗೆ ನಡೆಯಲಿದ್ದರೆ ರಾಜ್ಯ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಪೊಲೀಸರು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಈ ಅನುಮತಿಗೆ ಸಿಸಿಬಿ ಮುಖ್ಯಸ್ಥರ ಶಿಫಾರಸು ಸಹ ಮುಖ್ಯವಾಗಿರುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸಿಸಿಬಿಯ ತಾಂತ್ರಿಕ ವಿಭಾಗದಲ್ಲಿ ಟೆಲಿಫೋನ್ ಕದ್ದಾಲಿಸುವ ವ್ಯವಸ್ಥೆ ಇದ್ದು, ಈ ವಿಭಾಗವು ನೇರವಾಗಿ ಸಿಸಿಬಿ ಡಿಸಿಪಿ- 1 ಅವರ ಅಧೀನ ಕ್ಕೊಳಪಟ್ಟಿದೆ. ವಿಭಾಗದ ಉಸ್ತುವಾರಿಗೆ ಇನ್ಸ್‌ಪೆಕ್ಟರ್ ಇರುತ್ತಾರೆ. ಈ ಕದ್ದಾಲಿಕೆ ಸಲುವಾಗಿ ಮೊಬೈಲ್ ಸೇವಾ ಕಂಪನಿಗಳಿಂದ ಪ್ರತ್ಯೇಕ ಸಿಮ್‌ಗಳನ್ನು ಪಡೆಯಲಾಗುತ್ತದೆ. ಅದರಂತೆ ಐಡಿಯಾ, ಬಿಎಸ್‌ಎನ್‌ಎಲ್, ಏರ್‌ಟೆಲ್, ವೊಡಾಫೋನ್, ಜಿಯೋ ಕಂಪನಿಗಳಿಂದ 17 ನಂಬರ್‌ಗಳನ್ನು ಸಿಸಿಬಿ ಪಡೆದಿದ್ದು, ಆ ಸಂಖ್ಯೆಗಳ ಮೂಲಕ ಕದ್ದಾಲಿಕೆ ನಡೆಸಲಾಗಿದೆ.

ಯಾದಗಿರಿ ರಹಸ್ಯ: ಜೆಡಿಎಸ್ ಶಾಸಕನ ಮಗ ಬಾಯಿ ಬಿಟ್ಟರೆ ಎಚ್‌ಡಿಕೆಗೆ ಸಂಕಟ...

ಮೊಬೈಲ್ ಸೇವಾ ಕಂಪನಿಗಳಿಂದ ಪಡೆದ 17ನಂಬರ್‌ಗಳಿಗೆ ಕದ್ದಾಲಿಸಬೇಕಿರುವ ವ್ಯಕ್ತಿಗಳ ಮೊಬೈಲ್ ಸಂಖ್ಯೆಗಳನ್ನು ಪೊಲೀಸರು ಸಂಯೋಜಿಸ ಲಾಗಿದೆ. ಇದರ ಫಲವಾಗಿ, ಕಳ್ಳಗಿವಿ ಇಡಲಾದ ವ್ಯಕ್ತಿಗಳ ಮೊಬೈಲ್ ಅಥವಾ ದೂರವಾಣಿಗೆ ಕರೆ ಬಂದರೆ ಕೂಡಲೇ ಸಿಸಿಬಿ ತಾಂತ್ರಿಕ ವಿಭಾಗದಲ್ಲಿ ಸಹ ರಿಂಗಣಿಸುತ್ತದೆ. ಬಳಿಕ ಆ ಸಂಭಾಷಣೆಯನ್ನು ಪೊಲೀಸರು ಕೇಳಿದ್ದಾರೆ. ಆದರೆ ಮೈತ್ರಿ ಸರ್ಕಾರದ ಅವಧಿಯಲ್ಲಿ ನಿಗದಿತ ನಂಬರ್‌ಗಳ ಜೊತೆಗೆ ಹೆಚ್ಚುವರಿಯಾಗಿ ಮತ್ತೆರಡು ನಂಬರ್‌ಗಳನ್ನು ಮೊಬೈಲ್ ಸೇವಾ ಕಂಪನಿಗಳಿಗೆ ನೀಡಿ ಸಿಮ್ ಪಡೆದು ಎಸಿಪಿ ಕದ್ದಾಲಿಕೆ ಅವಕಾಶ ಪಡೆದಿದ್ದರು ಎನ್ನಲಾಗಿದೆ. 

ಅನಂತರ ಆ ಎರಡು ಸಿಮ್‌ಗಳನ್ನು ತಮ್ಮ ಮೊಬೈಲ್‌ಗೆ ಅಳವಡಿಸಿಕೊಂಡಿದ್ದ ಎಸಿಪಿ, ಮೈತ್ರಿ ಸರ್ಕಾರದ ಅವಕೃಪೆಗೊಳಗಾಗಿದ್ದ ರಾಜಕಾರಣಿಗಳು, ಸ್ವಪಕ್ಷದ ಶಾಸಕರು, ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ಚಲನಚಿತ್ರ ನಟರು ಹಾಗೂ ಮಠಾಧಿಪತಿಗಳ ಸಂಭಾಷಣೆಯನ್ನು ಕದ್ದಾಲಿ ಸಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.