ಬೆಂಗಳೂರು[ಫೆ.05]: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳು ಸೇರಿ ಐವರು ಪೊಲೀಸರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿದೆ.

ಐಜಿಪಿ ಹೇಮಂತ್‌ ನಿಂಬಾಳ್ಕರ್‌, ಡಿಸಿಪಿ ಅಜಯ್‌ ಹಿಲೋರಿ ಹಾಗೂ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಯ ಹಿಂದಿನ ಇನ್ಸ್‌ಪೆಕ್ಟರ್‌ ಎಂ.ರಮೇಶ್‌, ಸಬ್‌ ಇನ್ಸ್‌ಪೆಕ್ಟರ್‌ ಗೌರಿಶಂಕರ್‌, ಸಿಐಡಿ ಡಿವೈಎಸ್‌ಪಿ ಇ.ಬಿ.ಶ್ರೀಧರ್‌, ಐಎಂಎ ಕಂಪನಿ ಮಾಲೀಕ ಮೊಹಮದ್‌ ಮನ್ಸೂರ್‌ ಖಾನ್‌, ಐಎಂಎ ಕಂಪನಿ ನಿರ್ದೇಶಕರಾದ ನಿಜಾಮುದ್ದೀನ್‌, ವಾಸೀಂ, ಅರ್ಷದ್‌ ಖಾನ್‌ ವಿರುದ್ಧ ಸೆಕ್ಷನ್‌ 120ಬಿ (ಒಳಸಂಚು) ಅಡಿಯಲ್ಲಿ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ಐಎಂಎ ವಿರುದ್ಧ ಸೂಕ್ತ ತನಿಖೆ ನಡೆಸದೇ ಆ ಕಂಪನಿ ಪರವಾಗಿ ಈ ಐವರು ವರದಿ ನೀಡಿದ್ದಾರೆ. ಇದರ ಅನುಕೂಲ ಪಡೆದ ಐಎಂಎ ಕಂಪನಿಯ ಮಾಲೀಕ ಮತ್ತು ನಿರ್ದೇಶಕರು ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಸಾವಿರಾರು ಹೂಡಿಕೆದಾರರಿಂದ 4 ಸಾವಿರ ಕೋಟಿಗೂ ಅಧಿಕ ಹಣ ಸಂಗ್ರಹಿಸಿರುವ ಅಂಶ ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಆರೋಪದ ಮೇರೆಗೆ ಐವರು ಪೊಲೀಸರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ ಎನ್ನಲಾಗಿದೆ. ಶೀಘ್ರವೇ ಸಿಬಿಐ ಅಧಿಕಾರಿಗಳು ಪೊಲೀಸರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಆರೋಪ ಏನು?:

ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಅಕ್ರಮವಾಗಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಐಎಂಎ ಕಂಪನಿಯ ಬಗ್ಗೆ ನಿಗಾ ವಹಿಸುವಂತೆ 2016ರಲ್ಲಿ ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಅಂದಿನ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿ ಪತ್ರ ಬರೆದಿತ್ತು.

ಡಿಜಿಪಿ ಅವರು ಅಂದಿನ ಪೂರ್ವ ವಿಭಾಗದ ಡಿಸಿಪಿ ಅಜಯ್‌ ಹಿಲೋರಿ ಮೂಲಕ ಇನ್‌ಸ್ಪೆಕ್ಟರ್‌ ರಮೇಶ್‌ ಅವರಿಗೆ ಸೂಕ್ತ ತನಿಖೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಿದ್ದರು. ಐಎಂಎ ಕಂಪನಿ ನಿಯಮ ಪ್ರಕಾರವೇ ವ್ಯವಹಾರ ನಡೆಸುತ್ತಿದೆ. ಯಾವುದೇ ಹೂಡಿಕೆದಾರರು ದೂರು ನೀಡದಿರುವುದರಿಂದ ಕರ್ನಾಟಕ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯಡಿ (ಕೆಪಿಐಡಿ) ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಇನ್ಸ್‌ಪೆಕ್ಟರ್‌ ರಮೇಶ್‌ ವರದಿ ನೀಡಿದ್ದರು.

ಆದರೆ, ಈ ವರದಿಯನ್ನು ತಿರಸ್ಕರಿಸಿದ್ದ ಆರ್‌ಬಿಐ ನೇರವಾಗಿ ಕಂದಾಯ ಇಲಾಖೆಗೆ ಪತ್ರ ಬರೆದು ಮತ್ತೊಮ್ಮೆ ಪರಿಶೀಲಿಸುವಂತೆ ಸೂಚಿಸಿತ್ತು. ಈ ಮಧ್ಯೆ ಐಎಂಎ ಕಂಪನಿ ವಿರುದ್ಧ ದೂರುಗಳು ಬಂದಿದ್ದು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪೊಲೀಸ್‌ ತನಿಖೆಗೆ ಸೂಚಿಸಿದ್ದರು. ಆದರೆ, ಪಿಐ ರಮೇಶ್‌, ಪಿಎಸ್‌ಐ ಗೌರಿಶಂಕರ್‌ ಮತ್ತು ಡಿಸಿಪಿ ಅಜಯ್‌ ಹಿಲೋರಿ ಯಾವುದೇ ಕ್ರಮ ತೆಗೆದುಕೊಳ್ಳದೆ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಲಿದೆ ಎಂಬ ನೆಪವೊಡ್ಡಿ ಪ್ರಕರಣ ಮುಚ್ಚಿ ಹಾಕಿದ್ದರು.

ಅಷ್ಟೇ ಅಲ್ಲದೇ ಅಧಿಕಾರ ದುರುಪಯೋಗ ಪಡಿಸಿಕೊಂಡು ವಂಚಕ ಕಂಪನಿಯ ಮುಖ್ಯಸ್ಥ ಮನ್ಸೂರ್‌ ಖಾನ್‌ನ ಆಮಿಷಕ್ಕೊಳಗಾಗಿ ಆತನ ಪರವಾಗಿ ವರದಿ ಸಲ್ಲಿಸಿದ್ದರು. ಈ ಮೂವರು ಅಧಿಕಾರಿಗಳು ಒಳಚಂಚು ರೂಪಿಸಿ, ಐಎಂಎ ಕಂಪನಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂದು ಸಿಬಿಐ ಹೇಳಿದೆ.

ನಂತರ ಕರ್ನಾಟಕ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯಡಿ (ಕೆಪಿಐಡಿ) ಐಎಂಎ ಕಂಪನಿಯ ವ್ಯವಹಾರಗಳನ್ನು ತನಿಖೆ ನಡೆಸುವಂತೆ 2018ರ ಜುಲೈ 4ರಂದು ಸರ್ಕಾರ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗಕ್ಕೆ ವಹಿಸಿತ್ತು. ಅಂದಿನ ಸಿಐಡಿ ಆರ್ಥಿಕ ವಿಭಾಗದ ಐಜಿಪಿಯಾಗಿದ್ದ ಹೇಮಂತ್‌ ನಿಂಬಾಳ್ಕರ್‌ ಮತ್ತು ಡಿವೈಎಸ್ಪಿ ಇ.ಬಿ.ಶ್ರೀಧರ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಅವರು 2019ರ ಜ. 1ರಂದು ಕಂಪನಿ ಯಾವುದೇ ಅವ್ಯವಹಾರದಲ್ಲಿ ತೊಡಗಿಲ್ಲ. ಕಾನೂನುಬದ್ಧವಾಗಿಯೇ ಹಣ ಸಂಗ್ರಹಿಸುತ್ತಿದೆ ಎಂದು ಕಂಪನಿಯ ಪರವಾಗಿ ವರದಿ ಸಿದ್ಧಪಡಿಸಿ ಸಲ್ಲಿಸಿದ್ದರು. ಈ ರೀತಿಯ ವರದಿ ನೀಡುವುದಕ್ಕೆ ಪ್ರತಿಯಾಗಿ ತನಿಖಾಧಿಕಾರಿಗಳು ಹಾಗೂ ಕೆಲ ಸರ್ಕಾರಿ ಅಧಿಕಾರಿಗಳು ಲಂಚ ಮತ್ತು ಮೌಲ್ಯಯುತ ವಸ್ತುಗಳನ್ನು ಸ್ವೀಕರಿಸಿದ್ದಾರೆ ಎಂಬ ಆರೋಪವನ್ನು ಸಿಬಿಐ ಮಾಡಿದೆ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಇದೀಗ ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಿದೆ.