ಬೆಂಗಳೂರು (ಅ.07):  ರಾಜ್ಯದ ಪ್ರಭಾವಿ ರಾಜಕಾರಣಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಿವಾಸದ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದಿರುವ ದಾಖಲೆಗಳನ್ನು ಸಿಬಿಐ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದು, ಅಕ್ರಮ ಆಸ್ತಿಯ ಮೂಲ ಹುಡುಕುವ ಪ್ರಯತ್ನಕ್ಕೆ ಮುಂದಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಡಿ.ಕೆ.ಶಿವಕುಮಾರ್‌ ಆಸ್ತಿ ಗಳಿಕೆಯು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದಕ್ಕೆ ಮೂಲ ಏನು ಎಂಬುದರ ಬಗ್ಗೆ ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಆಸ್ತಿ ವಿವರಕ್ಕೂ ಆದಾಯ ತೆರಿಗೆ ಇಲಾಖೆ (ಐ.ಟಿ.), ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ವೇಳೆ ಪತ್ತೆಯಾದ ಆದಾಯದ ಮೂಲಕ್ಕೆ ಸಾಕಷ್ಟುವ್ಯತ್ಯಾಸ ಇದೆ. ಹೀಗಾಗಿ ಡಿ.ಕೆ.ಶಿವಕುಮಾರ್‌ ಮತ್ತವರ ಕುಟುಂಬದ ಹೆಸರಲ್ಲಿನ ಆಸ್ತಿ ಅಧಿಕವಾಗಿರುವುದರ ಮೂಲವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಸಿಬಿಐ ಅಧಿಕಾರಿಗಳು ಸಜ್ಜಾಗಿದ್ದಾರೆ.

 74.9 ಕೋಟಿ ಹೆಚ್ಚು ಆದಾ​ಯ: ಡಿ.ಕೆ.ಶಿವಕುಮಾರ್‌ ಆಸ್ತಿ 2013-18ರ ಅವಧಿಯಲ್ಲಿ ಸಾಕಷ್ಟುಹೆಚ್ಚಳವಾಗಿದೆ. 2013ರ ಚುನಾವಣೆಯ ಪ್ರಮಾಣಪತ್ರದಲ್ಲಿ 33.92 ಕೋಟಿ ರು. ಮೌಲ್ಯದ ಆಸ್ತಿ ಇದ್ದು, 2018ರ ವೇಳೆಗೆ 162.53 ಕೋಟಿ ರು.ಗೆ ಹೆಚ್ಚಳವಾಗಿದೆ. ಐದು ವರ್ಷದ ಅವಧಿಯಲ್ಲಿ 128 ಕೋಟಿ ರು.ಮೌಲ್ಯದಷ್ಟುಆಸ್ತಿ ಅಧಿಕವಾಗಿದೆ. ಈ ಅವಧಿಯಲ್ಲಿ ಕುಟುಂಬ ಸದಸ್ಯರು 113.12 ಕೋಟಿ ರು. ವೆಚ್ಚ ಮಾಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ. ಘೋಷಿತ ಆದಾಯಕ್ಕಿಂತ 74.93 ಕೋಟಿ ರು. ಹೆಚ್ಚಿನ ಅದಾಯ ಇರುವುದು ಸಿಬಿಐ ಪತ್ತೆ ಮಾಡಿದೆ.

ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಡಿ.ಕೆ.ಶಿವಕುಮಾರ್ ...

ಇ.ಡಿ, ಐಟಿ ವಿಭಾಗದಿಂದ ಸಿಬಿಐ ಅಧಿಕಾರಿಗಳು ಪಡೆದಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗಲೂ ಭಾರೀ ಪ್ರಮಾಣ ಆಸ್ತಿ ಮೌಲ್ಯ ಹೊಂದಿರುವುದನ್ನು ಪತ್ತೆ ಹಚ್ಚಿದ್ದಾರೆ. ದೆಹಲಿ, ಮುಂಬೈ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ವಶಪಡಿಸಿಕೊಂಡಿರುವ ದಾಖಲೆಗಳನ್ನು ಒಂದೆಡೆ ಕ್ರೋಡೀಕರಿಸುವ ಕೆಲಸ ನಡೆಸಿ ಶೋಧ ಕಾರ್ಯದಲ್ಲಿ ಸಿಬಿಐ ಅಧಿಕಾರಿಗಳು ತೊಡಗಿದ್ದಾರೆ. ಸೋಮವಾರದ ದಾಳಿ ಬಳಿಕ ಕೊಂಡೊಯ್ದಿರುವ ಬ್ಯಾಂಕ್‌ ಖಾತೆ, ಕಂಪ್ಯೂಟರ್‌ನಲ್ಲಿದ್ದ ದಾಖಲೆಗಳಲ್ಲಿ ಮಾಹಿತಿ ಕಲೆ ಹಾಕಲಾಗುತ್ತಿದೆ.

 ಡಿಕೆ​ಶಿಗೆ ಸಮನ್ಸ್‌ ಜಾರಿಗೆ ಸಿಬಿಐ ಸಿದ್ಧ​ತೆ

ಬೆಂಗ​ಳೂ​ರು: ಆದಾಯದ ಮೂಲದ ಬಗ್ಗೆ ಪ್ರಶ್ನಿಸಲು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ವಿಚಾರಣೆ ನಡೆಸುವ ಸಂಬಂಧ ಸಮನ್ಸ್‌ ಜಾರಿ ಮಾಡಲು ಸಿಬಿಐ ಸಿದ್ಧತೆ ನಡೆಸಿದೆ. ಶೀಘ್ರದಲ್ಲಿಯೇ ಸಮನ್ಸ್‌ ಜಾರಿಗೊಳಿಸಿ ವಿಚಾರಣೆಗೊಳಪಡಿಸಿದೆ ಎಂದು ಮೂಲ​ಗಳು ತಿಳಿ​ಸಿ​ವೆ.

‘ಈ ವೇಳೆ ಶಿವಕುಮಾರ್‌ ಅವರು ಹೇಳುವ ಮಾಹಿತಿ ಮತ್ತು ದಾಖಲೆಗಳಲ್ಲಿರುವ ಆಸ್ತಿಯ ಮೌಲ್ಯವು ಹೊಂದಾಣಿಕೆಯಾಗಲಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಿದೆ. ಸೂಕ್ತ ದಾಖಲೆಗಳನ್ನು ಶಿವಕುಮಾರ್‌ ಅವರು ಒದಗಿಸಬೇಕಾಗಿದೆ. ಶಿವಕುಮಾರ್‌ ಮತ್ತು ಅವರ ಕುಟುಂಬದ ಹೆಸರಲ್ಲಿನಲ್ಲಿರುವ ಆಸ್ತಿಯ ಮೌಲ್ಯದ ಬಗ್ಗೆ ಈಗಾಗಲೇ ಸಿಬಿಐ ತನ್ನದೇ ಮೂಲಗಳಿಂದ ಮಾಹಿತಿ ಕಲೆಹಾಕಿದೆ. ಶಿವಕುಮಾರ್‌ ಅವರು ಒದಗಿಸುವ ದಾಖಲೆಗಳ ಮೇಲೆ ಸಿಬಿಐ ಮುಂದಿನ ಹೆಜ್ಜೆ ಇಡಲಿದೆ’ ಎಂದು ಮೂಲಗಳು ತಿಳಿಸಿವೆ.

ಶಿವಕುಮಾರ್‌ ಸಹ ಸಿಬಿಐ ಸಂಕಷ್ಟದಿಂದ ತಪ್ಪಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಲೆಕ್ಕಪರಿಶೋಧಕರು, ಕಾನೂನು ತಜ್ಞರ ಮೊರೆ ಹೋಗಲಾಗಿದ್ದು, ವಿಚಾರಣೆ ನೀಡಬೇಕಿರುವ ದಾಖಲೆಗಳ ಸಂಗ್ರಹಣೆ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳು ಹೇಳಿವೆ.