* ಈ ರೈಲು ಸೇವೆ ಸದುಪಯೋಗಕ್ಕೆ ಬಿಎಸ್‌ವೈ ರೈತರಿಗೆ ಕರೆ* ಚಿಂತಾಮಣಿಯಿಂದ ದೆಹಲಿಗೆ ಹೊರಟ ರೈಲು*  ಈ ತಿಂಗಳಲ್ಲಿ 5 ರೈಲಿನಲ್ಲಿ ಒಟ್ಟು 1250 ಟನ್‌ ಮಾವು ಸಾಗಣೆ 

ಬೆಂಗಳೂರು(ಜೂ.30): ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮೌಲ್ಯ ಒದಗಿಸುವ ನಿಟ್ಟಿನಲ್ಲಿ ಕಿಸಾನ್‌ ರೈಲು ಮಹತ್ವದ ಪಾತ್ರ ವಹಿಸಲಿದೆ. ಹೀಗಾಗಿ ರೈತರು ಈ ಸೇವೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಚಿಂತಾಮಣಿಯಿಂದ ನವದೆಹಲಿಗೆ 250 ಟನ್‌ ಮಾವು ಸಾಗಿಸುವ ಕಿಸಾನ್‌ ರೈಲಿಗೆ ಮಂಗಳವಾರ ಯಲಹಂಕ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಕೃಷಿ ಉತ್ಪನ್ನಗಳಿಗೆ ದೂರದ ಮಾರುಕಟ್ಟೆಗಳ ಸಂಪರ್ಕ ಕಲ್ಪಿಸಿ, ರೈತರ ಆದಾಯ ಹೆಚ್ಚಿಸಲು ಈ ಕಿಸಾನ್‌ ರೈಲು ಸಹಕಾರಿಯಾಗಿದೆ. ಈ ಕಿಸಾನ್‌ ರೈಲು ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದ ಪ್ರಧಾನ ಮಂತಿ ನರೇಂದ್ರ ಮೋದಿಗೆ ಧನ್ಯವಾದಗಳು ಎಂದರು.

ಕೇಂದ್ರ ಸರ್ಕಾರ ಆಪರೇಷನ್‌ ಗ್ರೀನ್ಸ್‌ ಯೋಜನೆಯಡಿ ರೈತ ಉತ್ಪನ್ನ ಸಂಘಗಳು, ಕೃಷಿ ಉತ್ಪನ್ನ ಸಾಗಣೆ, ಕೃಷಿ ಉತ್ಪನ್ನ ಸಂಸ್ಕರಣಾ ಸೌಲಭ್ಯಗಳಿಗೆ ಒತ್ತು ನೀಡುತ್ತಿದೆ. ಅಂತೆಯೆ 2020ರ ಆಗಸ್ಟ್‌ನಿಂದ ಹಣ್ಣು ಮತ್ತು ತರಕಾರಿಗಳ ಸಾಗಣೆಗೆ ಕಿಸಾನ್‌ ರೈಲು ಯೋಜನೆಗೆ ಚಾಲನೆ ನೀಡಿದೆ. ಈ ಕಿಸಾನ್‌ ರೈಲಿನಲ್ಲಿ ಹಣ್ಣು ಮತ್ತು ತರಕಾರಿ ಸಾಗಣೆಗೆ ತಗುಲುವ ವೆಚ್ಚದಲ್ಲಿ ಶೇ.50ರಷ್ಟುರಿಯಾಯಿತಿ ನೀಡಲಾಗುತ್ತಿದೆ. ಇದರಿಂದ ರೈತರು ರಸ್ತೆ ಮೂಲಕ ಸಾಗಣೆ ಮಾಡುವುದಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಸಾಗಣೆ ಮಾಡಲು ಅನುಕೂಲವಾಗಿದೆ. ಅಂತೆಯೇ ಕೃಷಿ ಉತ್ಪನ್ನ ವರ್ತಕರು ಹಾಗೂ ರಪ್ತುದಾರರಿಗೂ ಸಹಕಾರಿಯಾಗಿದೆ ಎಂದು ಹೇಳಿದರು.

ರಾಜ್ಯದ ಮೊದಲ ಕಿಸಾನ್‌ ರೈಲಿಗೆ ಚಾಲನೆ: 250 ಟನ್‌ ಮಾವು ಹೊತ್ತ ರೈಲು ದಿಲ್ಲಿಗೆ

ಬೇರೆ ಪಕ್ಷದವರು ನಮ್ಮ ಸರ್ಕಾರದ ವಿರುದ್ಧ ಟೀಕೆ-ಟಿಪ್ಪಣಿ ಮಾಡುತ್ತಿದ್ದಾರೆ. ಆದರೆ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರೈತರು ಬೆಳೆದ ಹಣ್ಣು, ತರಕಾರಿ, ಹೂವುಗಳನ್ನು ದೂರದ ಮಾರುಕಟ್ಟೆಗಳಿಗೆ ಸಾಗಿಸಲು ಈ ಕಿಸಾನ್‌ ರೈಲು ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ರೈತರು ಬೆಳೆದ ಬೆಳೆಗೆ ಹೆಚ್ಚು ಬೆಲೆ ಸಿಗಬೇಕು ಎಂಬ ಅವರ ಆಶಯ ಈಡೇರಿದೆ ಎಂದರು.

ಜೂನ್‌ 21ರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಐದು ಕಿಸಾನ್‌ ರೈಲುಗಳು ಸಂಚರಿಸಿದ್ದು, 1,250 ಟನ್‌ ಮಾವನ್ನು ನವದೆಹಲಿಗೆ ಸಾಗಿಸಲಾಗಿದೆ. ರೈತರಿಗೆ ಪ್ರತಿ ಕೆ.ಜಿ.ಗೆ ಸುಮಾರು 10 ರು. ಲಾಭ ಸಿಕ್ಕಿದೆ. ಕಿಸಾನ್‌ ರೈಲು ನಿಗದಿತ ವೇಳಾಪಟ್ಟಿಯಂತೆ ಸಂಚರಿಸುವುದರಿಂದ ಕಾಲಮಿತಿಯಲ್ಲಿ ಮಾರುಕಟ್ಟೆಗಳಿಗೆ ಕೃಷ್ಟಿಉತ್ಪನ್ನ ಸಾಗಿಸಬಹುದಾಗಿದೆ ಎಂದು ಹೇಳಿದರು.

ಕೋಲಾರದ ಚಿಂತಾಮಣಿಯಿಂದ ನವದೆಹಲಿಗೆ ಸುಮಾರು 2,300 ಕಿ.ಮೀ. ದೂರವಿದೆ. ಕಿಸಾನ್‌ ರೈಲು ಈ ಅಂತವರನ್ನು 38-40 ತಾಸಿನಲ್ಲಿ ತಲುಪಲಿದೆ. ರಸ್ತೆ ಮಾರ್ಗಕ್ಕಿಂತ ಬೇಗ ರೈಲು ನವದೆಹಲಿ ತಲುಪುವುದರಿಂದ ಹಣ್ಣಿನ ತಾಜಾತನವೂ ಉಳಿಯಲಿದೆ. ಅಂತೆಯೆ ಬೆಳೆಗಳ ಸುರಕ್ಷತೆ ಜೊತೆಗೆ ಬೇಡಿಕೆ ಇರುವ ಮಾರುಕಟ್ಟೆಗಳಿಗೆ ಸಾಗಣೆ ಮಾಡಲು ಸಹಕಾರಿಯಾಗಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌.ಅಶೋಕ, ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ತೋಟಗಾರಿಕಾ ಸಚಿವ ಆರ್‌.ಶಂಕರ್‌, ಶಾಸಕ ಎಸ್‌.ಆರ್‌.ವಿಶ್ವನಾಥ್‌, ಕೃಷಿ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್‌ ಕುಮಾರ್‌ ವರ್ಮಾ ಮತ್ತಿತರರು ಉಪಸ್ಥಿತರಿದ್ದರು.