ಕರ್ನಾಟಕ ಬಂದ್‌ಗೆ ಬೆಂಗಳೂರಿನಲ್ಲಿ ಭಾರಿ ಸ್ಪಂದನೆ: ಜನರಿಂದ ಉತ್ತಮ ಪ್ರತಿಕ್ರಿಯೆ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸುವಂತೆ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ‘ಅಖಂಡ ಕರ್ನಾಟಕ ಬಂದ್’ಗೆ ಶುಕ್ರವಾರ ಸಿಲಿಕಾನ್ ಸಿಟಿ ಸ್ತಬ್ಧವಾಗಿತ್ತು. ನಗರದಲ್ಲಿ ಮೂರು ದಿನಗಳ ಹಿಂದಿನ (ಸೆ.26) ‘ಬೆಂಗಳೂರು ಬಂದ್’ ರೀತಿಯ ವಾತಾವರಣ ಮತ್ತೆ ಸೃಷ್ಟಿಯಾಗಿತ್ತು.

ಬೆಂಗಳೂರು (ಸೆ.30): ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸುವಂತೆ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ‘ಅಖಂಡ ಕರ್ನಾಟಕ ಬಂದ್’ಗೆ ಶುಕ್ರವಾರ ಸಿಲಿಕಾನ್ ಸಿಟಿ ಸ್ತಬ್ಧವಾಗಿತ್ತು. ನಗರದಲ್ಲಿ ಮೂರು ದಿನಗಳ ಹಿಂದಿನ (ಸೆ.26) ‘ಬೆಂಗಳೂರು ಬಂದ್’ ರೀತಿಯ ವಾತಾವರಣ ಮತ್ತೆ ಸೃಷ್ಟಿಯಾಗಿತ್ತು. ಒಂದೇ ವಾರದಲ್ಲಿ ಎರಡು ಬಾರಿ ರಾಜಧಾನಿ ಬಂದ್ ಬಿಸಿ ಎದುರಿಸಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ದೈನಂದಿನ ವ್ಯಾಪಾರ ವಹಿವಾಟು ಪೂರ್ಣ ಸ್ಥಗಿತವಾಗಿದ್ದರೆ, ಸಾರಿಗೆ ಸಂಚಾರ ವ್ಯತ್ಯಯದಿಂದಾಗಿ ಸಾರ್ವಜನಿಕರು ಪರದಾಡಿದ ಘಟನೆಗಳೂ ನಡೆದವು.
ಬಂದ್ ಬೆಂಬಲವಾಗಿ ಬೀದಿ ಬದಿ ವ್ಯಾಪಾರ, ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಹಿಡಿದು ಐಟಿಬಿಟಿ ಕಾರಿಡಾರ್, ಕೈಗಾರಿಕಾ ವಲಯಗಳೆಲ್ಲವೂ ಸ್ಥಗಿತಗೊಂಡಿದ್ದವು. ಅಲ್ಲಲ್ಲಿ ಅಗತ್ಯ ವಸ್ತುಗಳ ಲಭ್ಯತೆ ಹೊರತುಪಡಿಸಿ ಉಳಿದಾವ ವಾಹಿವಾಟುಗಳೂ ನಡೆಯಲಿಲ್ಲ. ಸಾರಿಗೆ ಸಂಚಾರ ಸಹ ತೀರಾ ಕಡಿಮೆಯಾಗಿತ್ತು. ಅಹಿತಕರ ಘಟನೆ ನಡೆಯದಂತೆ ಪ್ರತಿಭಟನಾ ಸ್ಥಳ ಟೌನ್‌ಹಾಲ್, ಸ್ವಾತಂತ್ರ್ಯಉದ್ಯಾನವನ ಸೇರಿ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ರಾಜಕೀಯ ಹಿತಕ್ಕಾಗಿ ತಮಿಳುನಾಡಿಗೆ ನೀರು, ಈಗ ಪ್ರಧಾನಿ ಮಧ್ಯ ಪ್ರವೇಶಿಸಲಿ ಎನ್ನುವುದು ಎಷ್ಟು ಸರಿ: ಚಕ್ರವತಿ ಸೂಲಿಬೆಲೆ
ನಗರದ ಕೆ.ಆರ್. ಮಾರುಕಟ್ಟೆಯ ಹೂವು, ಹಣ್ಣು, ತರಕಾರಿ, ದಿನಸಿ ಅಂಗಡಿಗಳು, ಅವೆನ್ಯೂ ರಸ್ತೆಯ ಮಳಿಗೆಗಳು ಬಂದ್ ಆಗಿದ್ದವು. ಬೆಳಗ್ಗೆ ಹೂವಿನ ವ್ಯಾಪಾರಕ್ಕೆ ಬಂದ ಹಳ್ಳಿಗರು ಗ್ರಾಹಕರಿಲ್ಲದೆ ಹೂವನ್ನು ಎಸೆದು ಹೋದರು. ಸುತ್ತಲಿನ ಚಿಕ್ಕಪೇಟೆ, ಬಳೆಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆಗಳಲ್ಲಿ ಮಳಿಗೆಗಳ ಸಾಲು ಮುಚ್ಚಿದ್ದವು. ಮಲ್ಲೇಶ್ವರ, ವಿಜಯನಗರ, ಜಯನಗರ, ಎಲೆಕ್ಟ್ರಾನಿಕ್ ಸಿಟಿ, ಪಂತರಪಾಳ್ಯ ಕೆಲವೆಡೆ ಸಣ್ಣಪುಟ್ಟ ದಿನಸಿ, ತರಕಾರಿ ವ್ಯಾಪಾರಿಗಳು ವಹಿವಾಟು ನಡೆಸಿದರು.
ಮುಚ್ಚಿದ ಮಾಲ್, ಕಾಂಪ್ಲೆಕ್ಸ್: ಕಬ್ಬನ್ ಪಾರ್ಕ್, ಎಂಜಿ ರೋಡ್, ಬ್ರಿಗೇಡ್ ರೋಡ್‌ಗಳು ಬಿಕೋ ಎನ್ನುತ್ತಿದ್ದರೆ, ಚಿನ್ನಸ್ವಾಮಿ ಜಂಕ್ಷನ್, ಡಬಲ್ ರೋಡ್ ವಿರಳ ಜನ ಸಂಚಾರವಿತ್ತು. ಇಲ್ಲಿನ ಶಾಪಿಂಗ್ ಕಾಂಪ್ಲೆಕ್ಸ್‌ಗಳೆಲ್ಲವೂ ಮುಚ್ಚಿದ್ದವು. ಹೋರಾಟಕ್ಕೆ ಬೀದಿಬದಿ ವ್ಯಾಪಾರಸ್ಥರ ಪೂರ್ಣ ಬೆಂಬಲ ಇದ್ದುದರಿಂದ ಶಿವಾಜಿನಗರದ ಸುತ್ತಮುತ್ತಲ ಮಾರುಕಟ್ಟೆಯ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
ಯಶವಂತಪುರ ಎಪಿಎಂಸಿಯಲ್ಲಿ ವ್ಯಾಪಾರ ಸ್ಥಗಿತಗೊಂಡಿದ್ದರೆ, ಕಲಾಸಿಪಾಳ್ಯ ಸಗಟು ತರಕಾರಿ, ಬಿನ್ನಿಮಿಲ್ ಮಾರುಕಟ್ಟೆ ತೆರೆದಿದ್ದರೂ ವ್ಯಾಪಾರಿಗಳು, ಗ್ರಾಹಕರು ಕಡಿಮೆಯಿದ್ದರು. ಮಲ್ಲೇಶ್ವರದ ಮಂತ್ರಿ ಮಾಲ್ ಸೇರಿ ಹಲವು ಪ್ರತಿಷ್ಠಿತ ಮಾಲ್‌ಗಳು ಬಂದಾಗಿದ್ದವು. ಇನ್ನು, ತಮಿಳುನಾಡು ಗಡಿಯಾದ ಅತ್ತಿಬೆಲೆ, ಹೊಸೂರಲ್ಲೂ ಪ್ರತಿಭಟನೆಯ ಕಿಚ್ಚು ಜೋರಾಗಿದ್ದ ಹಿನ್ನೆಲೆಯಲ್ಲಿ ಇಲ್ಲೆಲ್ಲ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು. ಸಂಜೆವರೆಗೆ ಚಿತ್ರಪ್ರದರ್ಶನ ರದ್ದಾಗಿದ್ದ ಪರಿಣಾಮ ಸಿನಿಮಾ ಮಂದಿರಗಳ ಬಳಿಯೂ ಜನ ಸುಳಿಯಲಿಲ್ಲ.
ಹೋಟೆಲ್‌ಗಳು ಸ್ಥಗಿತ: ಪ್ರಮುಖವಾಗಿ ಕರ್ನಾಟಕ ರಾಜ್ಯ ಹೋಟೆಲ್ ಅಸೋಸಿಯೇಷನ್ ಹಾಗೂ ಬೃಹತ್ ಬೆಂಗಳೂರು ಹೋಟೆಲ್ ಸಂಘ ಬೆಂಬಲಿಸಿದ್ದರಿಂದ ನಗರದೆಲ್ಲೆಡೆ ಹೋಟೆಲ್‌ಗಳು, ದರ್ಶಿನಿಗಳು, ಕ್ಯಾಂಟೀನ್‌ಗಳು ಬಂದಾಗಿದ್ದವು. ಬೆಳಗ್ಗೆಯಿಂದ ಸಂಜೆ 6ರವರೆಗೆ ಮೆಜೆಸ್ಟಿಕ್, ರೈಲ್ವೆ ನಿಲ್ದಾಣ ಸುತ್ತಮುತ್ತ ಸೇರಿದಂತೆ ಎಲ್ಲೆಡೆ ಹೋಟೆಲ್ ಬಂದಾಗಿದ್ದರಿಂದ ಪರ ಊರುಗಳಿಂದ ಬಂದವರು ಊಟೋಪಹಾರಕ್ಕೆ ಪರದಾಡಿದರು. ಹಲವು ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳೂ ಮುಚ್ಚಿದ್ದವು. ಸಂಜೆ 6ರ ಬಳಿಕ ಇವೆಲ್ಲ ತೆರೆದು ವ್ಯಾಪಾರ ನಡೆಸಿದವು.
ಸಂಚಾರ ವಿರಳ: ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಕಾರಣದಿಂದ ಬೆಳಗ್ಗೆಯಿಂದಲೂ ನಗರದಲ್ಲಿ ಜನಸಂಚಾರ ಕಡಿಮೆಯಿತ್ತು. ಪಾದಚಾರಿಗಳು, ಬೈಕ್ ಕಾರುಗಳ ಓಡಾಟ, ಟ್ರಾಫಿಕ್ ಜಾಮ್ ತೀರಾ ಕಡಿಮೆಯಾಗಿತ್ತು. ಜನದಟ್ಟಣೆಯಿಂದ ಕೂಡಿರುತ್ತಿದ್ದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವಿರಳವಾಗಿತ್ತು. ಬದಲಾಗಿ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದ್ದ ಫ್ರೀಡಂ ಪಾರ್ಕ್, ಟೌನ್ ಹಾಲ್ ಬಳಿ ಮಾತ್ರ ಹೆಚ್ಚಾಗಿ ಜನ ಸೇರಿದ್ದರು. ಒಂದಿಷ್ಟು ಖಾಸಗಿ ಕಚೇರಿಗಳು ಬಂದಾಗಿದ್ದು, ಮಾರುಕಟ್ಟೆ, ಮಳಿಗೆಗಳು ಮುಚ್ಚಲ್ಪಟ್ಟಿದ್ದ ಕಾರಣ ಉದ್ಯೋಗಕ್ಕೆ ಹೋಗುವವರನ್ನು ಬಿಟ್ಟು ಉಳಿದವರು ರಸ್ತೆಗಿಳಿಯಲಿಲ್ಲ. ಸುತ್ತಮುತ್ತಲ ಊರುಗಳಿಂದಲೂ ಜನ ಹೆಚ್ಚಾಗಿ ಬರಲಿಲ್ಲ. ಪ್ರತಿಭಟನೆ ನಡೆದ ಟೌನ್‌ಹಾಲ್, ಸ್ವಾತಂತ್ರ್ಯ ಉದ್ಯಾನವನದ ಬಳಿ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಿದರು.
ಐಟಿ ಕಾರಿಡಾರ್ ಸ್ತಬ್ಧ: ಕಾವೇರಿಗಾಗಿ ಐಟಿಬಿಟಿ ಮಂದಿ ಕೂಡ ಬೆಂಬಲಿಸಿದ್ದರು. ಎಲೆಕ್ಟ್ರಾನಿಕ್ ಸಿಟಿ, ಮಾರತಹಳ್ಳಿ, ಮಹಾದೇವ ಪುರದಲ್ಲಿ ಐಟಿ ಕಂಪನಿಗಳು ಬಂದಾಗಿದ್ದವು. ಬಹುತೇಕರು ವರ್ಕ್ ಫ್ರಾಂ ಹೋಂ ಮಾಡಿದ್ದಾಗಿ ತಿಳಿಸಿದರು. ಅದರಂತೆ ಬಾಗ್‌ಮನೆ ಟೆಕ್‌ಪಾರ್ಕ್, ಮಾನ್ಯತಾ ಟೆಕ್ ಪಾರ್ಕ್‌ನಲ್ಲೂ ಹಲವು ಐಟಿ ಕಂಪನಿಗಳು ರಜೆ ನೀಡಿದ್ದವು. ಪೀಣ್ಯ, ರಾಜಾಜಿನಗರ ಕೈಗಾರಿಕಾ ಸೇರಿ ಪ್ರದೇಶದಲ್ಲಿಯೂ ಹಲವು ಕೈಗಾರಿಕೆಗಳಲ್ಲಿ ಬಂದಾಗಿದ್ದವು.
ದೇವಸ್ಥಾನಕ್ಕೆ ಬಾರದ ಜನ: ಅನಂತಪದ್ಮನಾಭ ವ್ರತ, ಹುಣ್ಣಿಮೆ ಇದ್ದರೂ ವಾಹನ ಪೂಜೆಗಳಿಗೆ ಬರುತ್ತಿದ್ದ ಶೇ.90ರಷ್ಟು ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿಲ್ಲ ಎಂದು ಅರ್ಚಕರ ಸಂಘದ ಕೆಎಸ್‌ಎನ್ ದೀಕ್ಷಿತ್ ತಿಳಿಸಿದರು. ಬಂದ್ ಪರಿಣಾಮ ನಗರದ ಬೌರಿಂಗ್ ಆಸ್ಪತ್ರೆ, ಕೆ.ಸಿ.ಜನರಲ್ ಹಾಸ್ಪಿಟಲ್, ವಿಕ್ಟೋರಿಯಾ, ಜಯನಗರ ಜನರಲ್ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ಕಡಿಮೆಯಿತ್ತು.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಿದ್ದರಾಮಯ್ಯಗೆ ಪ್ರಯಾಸ: ಜನಾರ್ದನ ರೆಡ್ಡಿ
ಖಾಲಿ ಸಂಚರಿಸಿದ ಬಸ್: ಮೆಜಸ್ಟಿಕ್, ಯಶವಂತಪುರ, ಜಯನಗರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲೂ ಎಂದಿನ ಪ್ರಯಾಣಿಕರ ಜನಜಂಗುಳಿ ಇರಲಿಲ್ಲ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ಸುಗಳಿದ್ದರೂ ಪ್ರಯಾಣಿಕರೇ ಇರಲಿಲ್ಲ. ಬಸ್‌ಗಳು ಪ್ರಯಾಣಿಕರಿಲ್ಲದೆ ಖಾಲಿಯಾಗಿ ಸಂಚರಿಸುತ್ತಿದ್ದುದು ಕಂಡುಬಂತು. ಸಂಜೆ ಬಳಿಕ ಪ್ರಯಾಣಿಕರ ಸಂಖ್ಯೆ ತುಸು ಹೆಚ್ಚಾಗಿತ್ತು. ನಮ್ಮ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆಯೂ ತೀರಾ ಕಡಿಮೆಯಿತ್ತು. ಸಂಜೆ 5ಗಂಟೆವರೆಗೆ ಕೇವಲ 93,779 (ಬೆಂಗಳೂರು ಬಂದ್ ದಿನ 1.20 ಲಕ್ಷ) ಜನ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದರು. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಪ್ರತಿದಿನ ಸುಮಾರು 500ಕ್ಕೂ ಹೆಚ್ಚು ತಮಿಳುನಾಡಿನ ಬಸ್ ಸಂಚರಿಸುತ್ತದೆ. ಆದರೆ, ಬಂದ್ ಹಿನ್ನೆಲೆಯಲ್ಲಿ ಯಾವುದೇ ಬಸ್‌ಗಳು ಬರಲಿಲ್ಲ. ಇಲ್ಲಿಂದ ಸುಮಾರು 350 ಬಸ್ಸುಗಳು ತಮಿಳುನಾಡಿಗೆ ತೆರಳಲಿಲ್ಲ.