ಕಾವೇರಿ ಸಂಘರ್ಷ, ರಾಜ್ಯಕ್ಕೆ ಬರಲು ತಮಿಳು ಪ್ರವಾಸಿಗರ ಹಿಂದೇಟು!
ಕಾವೇರಿ ನೀರಿಗಾಗಿ ಹೋರಾಟ, ತಮಿಳುನಾಡಿನ ವಿರುದ್ಧ ಆಕ್ರೋಶ, ಕರ್ನಾಟಕ ಬಂದ್ ಪರಿಣಾಮವಾಗಿ ಸಾಲು ಸಾಲಾಗಿ ರಜೆ ಬಂದರೂ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರಲು ತಮಿಳರು ಹಿಂದೇಟು ಹಾಕುತ್ತಿದ್ದಾರೆ. ರೆಸಾರ್ಟ್‌ಗಳಲ್ಲಿ ಬುಕಿಂಗ್ ಕ್ಯಾನ್ಸಲ್ ಮಾಡುತ್ತಿದ್ದಾರೆ.
ವಸಂತಕುಮಾರ್ ಕತಗಾಲ
ಕಾರವಾರ (ಸೆ.29) : ಕಾವೇರಿ ನೀರಿಗಾಗಿ ಹೋರಾಟ, ತಮಿಳುನಾಡಿನ ವಿರುದ್ಧ ಆಕ್ರೋಶ, ಕರ್ನಾಟಕ ಬಂದ್ ಪರಿಣಾಮವಾಗಿ ಸಾಲು ಸಾಲಾಗಿ ರಜೆ ಬಂದರೂ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರಲು ತಮಿಳರು ಹಿಂದೇಟು ಹಾಕುತ್ತಿದ್ದಾರೆ. ರೆಸಾರ್ಟ್‌ಗಳಲ್ಲಿ ಬುಕಿಂಗ್ ಕ್ಯಾನ್ಸಲ್ ಮಾಡುತ್ತಿದ್ದಾರೆ.
ಗೋಕರ್ಣದ ಎಂಜಿ ಕಾಟೇಜ್ ನಲ್ಲಿ ತಮಿಳುನಾಡಿನ ಪ್ರವಾಸಿಗರ ತಂಡವೊಂದು ಶುಕ್ರವಾರದಿಂದ ಮೂರು ದಿನಗಳ ಕಾಲ ರೂಂ ಬುಕಿಂಗ್ ಮಾಡಿದ್ದರು. ಆದರೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ತಮಿಳು ಪ್ರವಾಸಿಗರ ಮೇಲೆ ಆಕ್ರೋಶ ತಿರುಗುವ ಭಯದಿಂದ ಬುಕಿಂಗ್ ರದ್ದುಗೊಳಿಸಿದ್ದಾರೆ. ಹಾಗೆ ಮತ್ತೆ ಕೆಲವರು ಬುಕಿಂಗ್ ರದ್ದು ಮಾಡಿದ್ದಾರೆ. ಉತ್ತರ ಕನ್ನಡದಲ್ಲಿ ಕರ್ನಾಟಕ ಬಂದ್ ನ ಬಿಸಿ ತಟ್ಟದು. ಇಲ್ಲಿ ಯಾವುದೇ ಪ್ರತಿಭಟನೆ, ಗದ್ದಲ ನಡೆಯಲಾರದು ಎಂದು ಹೇಳಿದರೂ ತಮಿಳು ಪ್ರವಾಸಿಗರು ಜಿಲ್ಲೆಗೆ ಬರಲು ಹಿಂದೇಟು ಹಾಕಿದ್ದಾರೆ.
ಮೇಕೆಗಳನ್ನು ನುಂಗೋದು ಬಿಟ್ರೆ ಮೇಕೆದಾಟಲ್ಲಿ ಕಾಂಗ್ರೆಸ್‌ನವರದ್ದು ಏನೂ ಇಲ್ಲ: ಅಶ್ವತ್ಥ ನಾರಾಯಣ
ಈ ಹಿಂದೆಲ್ಲ ತಮಿಳುನಾಡಿನ ಭಕ್ತರು, ಪ್ರವಾಸಿಗರು ಗೋಕರ್ಣಕ್ಕೆ ಯಾವುದೇ ಆತಂಕ ಇಲ್ಲದೆ ಬರುತ್ತಿದ್ದರು. 2-3 ದಿನಗಳ ಕಾಲ ವಾಸ್ತವ್ಯ ಮಾಡಿ ಗೋಕರ್ಣದ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿ, ಓಂ ಬೀಚ್, ಕುಡ್ಲೆ ಬೀಚ್ ಸೇರಿದಂತೆ ವಿವಿಧ ಬೀಚ್ ಗಳಲ್ಲಿ ವಿಹರಿಸಿ ತೆರಳುತ್ತಿದ್ದರು.
ಸಾಲು ಸಾಲಾಗಿ ರಜೆ ಬಂದಿರುವುದರಿಂದ ಗೋಕರ್ಣ, ಮುರ್ಡೇಶ್ವರಗಳಲ್ಲಿ ಹೊಟೇಲ್, ರೆಸಾರ್ಟ್‌ಗಳು ಭರ್ತಿಯಾಗಿವೆ. ಅದರಲ್ಲೂ ಸೆ. 29ರಿಂದ ನ.1ರ ತನಕ ಬಹುತೇಕ ಎಲ್ಲ ಹೊಟೇಲ್, ರೆಸಾರ್ಟ್, ಕಾಟೇಜಗಳು ಭರ್ತಿಯಾಗಿವೆ. ಮೇಲಿಂದ ಮೇಲೆ ರಜೆ ಬಂದಿರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಉಂಟಾಗಲಿದೆ. ಗೋಕರ್ಣ ಹಾಗೂ ಮುರ್ಡೇಶ್ವರಗಳಲ್ಲಿ ಟ್ರಾಫಿಕ್ ಒತ್ತಡವೂ ಉಂಟಾಗುವ ಸಾಧ್ಯತೆ ಇದೆ. ಮುಂಗಡ ಬುಕಿಂಗ್ ಮಾಡದೆ ಬಂದರೆ ರೂಂ ಕೂಡ ಸಿಗುವ ಸಾಧ್ಯತೆ ಇಲ್ಲ.
CWRC ಆದೇಶಕ್ಕೂ ತಮಿಳುನಾಡು ಸರ್ಕಾರದ ಅಪಸ್ವರ: ಎರಡೂ ರಾಜ್ಯಗಳ ವಾದವೇನು ?
ಕೆಲವು ದಿನಗಳಿಂದ ಜಿಲ್ಲೆಯ ಕರಾವಳಿಯಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ಎರಡು ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಜಿಲ್ಲೆಯ ರೈತರು, ಜನತೆಗೆ ಮಳೆಯ ಅಗತ್ಯ ಇದ್ದರೂ, ಪ್ರವಾಸಿಗರಿಗೆ ಮಳೆ ಕಿರಿಕಿರಿಯಾಗಿದೆ.
ಸತತವಾಗಿ ರಜೆ ಬಂದಿರುವುದರಿಂದ ಗೋಕರ್ಣದಲ್ಲಿ ಹೊಟೇಲ್, ರೆಸಾರ್ಟ್‌ಗಳ ರೂಂಗಳು ಬುಕಿಂಗ್ ಆಗಿವೆ. ಆದರೆ ತಮಿಳುನಾಡಿನ ಪ್ರವಾಸಿಗರು ಈ ಸಂದರ್ಭದಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ.
ವೆಂಕಟೇಶ ಗೌಡ, ರೆಸಾರ್ಟ್ ವ್ಯವಸ್ಥಾಪಕ