Cauvery Water Dispute: ತಮಿಳುನಾಡಿಗೆ ಕಾವೇರಿ ನೀರು ಬಿಡದಿರಲು ಸರ್ಕಾರದ ತೀರ್ಮಾನ
ಬುಧವಾರ ನಡೆದ ಸರ್ವ ಪಕ್ಷ ಸಭೆಯಲ್ಲಿ ತಮಿಳುನಾಡಿಗೆ ಕಾವೇರಿ ನೀಡು ಬಿಡದೇ ಇರಲು ಸರ್ಕಾರ ತೀರ್ಮಾನ ಕೈಗೊಂಡಿದೆ. ರಾಜ್ಯದ ರೈತರ ಹಿತಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಸೆ.13): ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶವನ್ನು ಪಾಲಿಸದೇ ಇರಲು ಕರ್ನಾಟಕ ಸರ್ಕಾರ ತೀರ್ಮಾನ ಮಾಡಿದೆ. ಬುಧವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಸ್ವತಃ ಸಿದ್ಧರಾಮಯ್ಯ ಈ ವಿಚಾರ ತಿಳಿಸಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ. ನಮ್ಮ ಬೆಳೆಗೆ 70 ಟಿಎಂಸಿ ನೀರು ಬೇಕಾಗುತ್ತದೆ. ಕಾನೂನು ಹೋರಾಟದ ಕಷ್ಟ ನಮಗೆ ಗೊತ್ತಿದೆ. ನಮ್ಮ ರೈತರನ್ನು ಉಳಿಸೋದೇ ಮುಖ್ಯ. ನಾವು ಸರ್ಕಾರದ ಪರವಾಗಿ ಮಧ್ಯಂತರ ಅರ್ಜಿ ಹಾಕಲಿದ್ದೇವೆ. ಇವತ್ತು ಡಿಸಿಎಂ ಡಿಕೆಶಿ ಕಾನೂನು ತಂಡದ ಜೊತೆಗೆ ದೆಹಲಿಯಲ್ಲಿ ಮಾತನಾಡಲಿದ್ದಾರೆ. ಪ್ರಧಾನಿ ಅನುಮತಿ ಕೊಟ್ಟರೆ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲಿದ್ದೇವೆ ಎಂದು ಸಿದ್ಧರಾಮಯ್ಯ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದಾರೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸರ್ವ ಪಕ್ಷ ನಾಯಕರ ಸಭೆ ಕರೆದಿದ್ದೆವು. 9 ಸಂಸದರು ಕೂಡ ಸಭೆಯಲ್ಲಿದ್ದರು. ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ಹಿಂದೆ ತಿರ್ಮಾನ ಮಾಡಿದ್ದೆವು. ಆಗಸ್ಟ್ ತಿಂಗಳಲ್ಲಿ ಬಹಳ ಕಡಿಮೆ ಮಳೆ ಬಂದಿದೆ. ಇಲ್ಲಿಯವರೆಗೂ ನಾವು 90 ಟಿಎಂಸಿ ನೀರು ಬಿಡಬೇಕಾಗಿತ್ತು. ಆದರೆ, ಈವರೆಗೆ 37 ಟಿಎಂಸಿ ನೀರು ಮಾತ್ರವೇ ಬಿಟ್ಟಿದ್ದೇವೆ' ಎಂದು ಮಾಹಿತಿ ನೀಡಿದರು. ಸರ್ಕಾರದ ಜೊತೆಗೆ ಒಟ್ಟಿಗೆ ಇರೋದಾಗಿ ಸಂಸದರು ಹೇಳಿದ್ದಾರೆ. ಸಂಸತ್ ನಲ್ಲೂ ಹೋರಾಟ ಮಾಡೋದಾಗಿಯೂ ಹೇಳಿದ್ದಾರೆ ಎಂದು ತಿಳಿಸಿದರು.
ನಿನ್ನೆ ರಾತ್ರಿ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದೆವು. ರಾತ್ರಿ ಸರ್ವಪಕ್ಷ ಸಭೆ ಕರೆಯಲು ತಿರ್ಮಾನ ಮಾಡಿದ್ದೆವು. ಅಗಸ್ಟ್ ನಲ್ಲಿ ಮಳೆ ಕೊರತೆಯಾಗಿದೆ. 123 ವರ್ಷದಲ್ಲಿ ಇದು ಕಡಿಮೆ ಮಳೆ. ನೀರು ಇಲ್ಲದ ಕಾರಣಕ್ಕಾಗಿ ನೀರು ಬಿಡಲು ಆಗುತ್ತಿಲ್ಲ. ಜಲಾಶಯಗಳಲ್ಲಿ ಕೂಡ ನೀರಿಲ್ಲ. ನಮ್ಮ ಬೆಳೆ ಉಳಿಸಿಕೊಳ್ಳಬೇಕು. ಅದಕ್ಕಾಗಿ ನಮಗೆ 70 ಟಿಎಂಸಿ ನೀರಿನ ಅಗತ್ಯವಿದೆ. ಇನ್ನು ಕುಡಿಯುವ ನೀರಿಗಾಗಿ 33 ಟಿಎಂಸಿ ನೀರು ಬೇಕಾಗುತ್ತದೆ. ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಬೇಕಾಗಿದೆ. ನಮ್ಮ ಬಳಕೆಗಾಗಿ ಒಟ್ಟಾರೆ 106 ಟಿಎಂಸಿ ನೀರು ಬೇಕಿದೆ. ನಮ್ಮಲ್ಲಿ ಈಗ ಇರೋದೇ 55 ಟಿಎಂಸಿ ನೀರು. ಈ ಕಾರಣದಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ಯಾರು ರಾಜಕೀಯ ಮಾಡಿಲ್ಲ. ಅದಕ್ಕೆ ನಾವು ಎಲ್ಲಾ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಸಭೆ ಮಾಡಿದ್ದೇವೆ ಎಂದು ಹೇಳಿದರು.
ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮಧ್ಯಂತರ ಅರ್ಜಿ ಹಾಕಲಿದ್ದೇವೆ. ಆದೇಶ ಪರಿಶೀಲನೆ ಮಾಡಲು ಕೋರಲಿದ್ದು, ಸುಪ್ರೀಂ ಕೋರ್ಟ್ ನಲ್ಲೂ ಅಗತ್ಯವಾದರೆ ಅರ್ಜಿ ಹಾಕಲಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ಸ್ಥಿತಿ ದೇಶಕ್ಕೆ, ನ್ಯಾಯಾಲಯ ಮತ್ತು ಪ್ರಾಧಿಕಾರಕ್ಕೆ ತಿಳಿಸುತ್ತೇವೆ. ಡಿಸಿಎಂ ಡಿಕೆಶಿ ಕಾನೂನು ತಂಡದ ಜೊತೆಗೆ ಚರ್ಚೆ ಮಾಡಲಿದ್ದಾರೆ. ಕಾನೂನು ತಜ್ಞರ ಜೊತೆಗೆ ಚರ್ಚೆ ಮಾಡಿದ ಬಳಿಕವೇ ನೀರು ಬಿಡುವ ಬಗ್ಗೆ ತೀರ್ಮಾನ ಆಗಲಿದೆ ಎಂದು ಸಿಎಂ ತಿಳಿಸಿದರು. ಈ ವಿಚಾರವಾಗಿ ಯಾವುದೇ ಕಾರಣಕ್ಕೂ ತಮಿಳುನಾಡು ಸಿಎಂ ಜೊತೆ ಚರ್ಚೆ ಮಾಡೋದಿಲ್ಲ ಎಂದಿದ್ದಾರೆ.
ಕರ್ನಾಟಕದಲ್ಲಿ ಸಂಕಷ್ಟ ಪರಿಸ್ಥಿತಿಯಿದ್ದು, ಕಾವೇರಿ ನೀರಿನ ವಿಚಾರದಲ್ಲಿ ಬಿಜೆಪಿ ರಾಜಕೀಯ ಬಿಡಲಿ: ಚಲುವರಾಯಸ್ವಾಮಿ
ಈ ಕುರಿತಾಗಿ ಮಾತನಾಡಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ರಾಜ್ಯದ ಹಿತ ಕಾಪಾಡಲು ಸಂಸದರಿದ್ದೇವೆ. ಇದರಲ್ಲಿ ರಾಜಕೀಯ ಮಾಡೋದು ಬೇಡ. ಅಂತರ್ ರಾಜ್ಯ ಜಲ ವಿವಾದ ಕೋರ್ಟ್ ನಲ್ಲಿ ಇತ್ಯರ್ಥ ಆಗಬೇಕು. 2018 ರಲ್ಲಿ ಫೈನಲ್ ಆರ್ಡರ್ ಆಗಿದೆ. ಇನ್ನು ಏನೇ ಇದ್ದರು ಬೋರ್ಡ್‌ನಲ್ಲಿ ಆಗಬೇಕು. ಈ ವಿಚಾರದಲ್ಲಿ ಸರ್ವ ಪಕ್ಷ ನಿಯೋಗ ಅಂತ ಕಾಂಗ್ರೆಸ್ ರಾಜಕೀಯ ಮಾಡೋದು ಬೇಡ. ಅವರು ರಾಜಕೀಯ ಮಾಡೋದಿದ್ರೆ ಇಂಡಿಯಾ ಒಕ್ಕೂಟ ಮಾಡಿಕೊಂಡಿದ್ದಾರೆ. 3-4 ಸಭೆ ಮಾಡಿದ್ದಾರೆ. ಕಾಂಗ್ರೆಸ್ ರಾಜಕೀಯ ಮಾಡೋದಾದ್ರೆ ಇಂಡಿಯಾ ಒಕ್ಕೂಟದ ಸ್ಟಾಲಿನ್ ಜೊತೆ ಮಾತಾಡಿ ಇತ್ಯರ್ಥ ಮಾಡಿ ಬಿಡಿ. ಸರ್ಕಾರ ಸುಪ್ರೀಂಕೋರ್ಟ್ ಗೆ ಮತ್ತೊಂದು ಅರ್ಜಿ ಹಾಕಲಿ. ಯಾವುದೇ ಕಾರಣಕ್ಕೂ 5 ಸಾವಿರ ಕ್ಯೂಸೆಕ್ ನೀರು ಬಿಡಬಾರದು ಎಂದು ಹೇಳಿದ್ದಾರೆ.
ಸಂಕಷ್ಟದ ಪರಿಸ್ಥಿತಿಯಲ್ಲೂ ತಮಿಳನಾಡಿಗೆ ನೀರು ಬಿಡ್ತಿರೋ ಸರ್ಕಾರ, ಇಂದು ಕೆಆರ್‌ಎಸ್ ಗೆ ಬಿಜೆಪಿ ನಿಯೋಗ