ಬಿಜೆಪಿ ಶಾಸಕ ಮುನಿರತ್ನರಿಂದ ಜಾತಿ ನಿಂದನೆ ನಿಜ: ಕೋರ್ಟ್‌ಗೆ ಜಾರ್ಜ್‌ಶೀಟ್ ಸಲ್ಲಿಸಿದ ಎಸ್‌ಐಟಿ
ಸಾರ್ವಜನಿಕವಾಗಿ ಜಾತಿನಿಂದನೆ ಮಾಡಿ ಸಾಕ್ಷಿದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿರುವ ಹಾಗೂ ಜಾತಿಗಳ ನಡುವೆ ವೈಷಮ್ಯವನ್ನುಂಟು ಮಾಡಿರುವ ಆರೋಪ ತನಿಖೆಯಲ್ಲಿ ಸಾಬೀತಾಗಿದೆ ಎಂದು ಹೇಳಿದ ಎಸ್‌ಐಟಿ
ಬೆಂಗಳೂರು(ಡಿ.01): ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ವಿರುದ್ಧದ ಜಾತಿ ನಿಂದನೆ ಪ್ರಕರಣದ ತನಿಖೆ ಪೂರ್ಣಗೊಳಿಸಿ ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ದೋಷಾರೋಪ ಪಟ್ಟಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ಸಲ್ಲಿಸಿದೆ.
ತಮಗೆ ಜಾತಿ ನಿಂದನೆ ಮಾಡಿ ಬೆದರಿಸಿದ್ದಾರೆ ಎಂದು ಆರೋಪಿಸಿ ಮುನಿರತ್ನ ವಿರುದ್ದ ವೈಯಾಲಿಕಾವಲ್ ಠಾಣೆಗೆ ಲಕ್ಷ್ಮೀದೇವಿ ನಗರ ವಾರ್ಡ್‌ನ ಮಾಜಿ ಕಾರ್ಪೋರೇಟರ್ ವೇಲು ದೂರು ನೀಡಿದರು. 'ಸಾರ್ವಜನಿಕವಾಗಿ ಜಾತಿನಿಂದನೆ ಮಾಡಿ ಸಾಕ್ಷಿದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿರುವ ಹಾಗೂ ಜಾತಿಗಳ ನಡುವೆ ವೈಷಮ್ಯವನ್ನುಂಟು ಮಾಡಿರುವ ಆರೋಪ ತನಿಖೆಯಲ್ಲಿ ಸಾಬೀತಾಗಿದೆ' ಎಂದು ಎಸ್‌ಐಟಿ ಹೇಳಿದೆ.
ಜಾತಿ ನಿಂದನೆಯ ಆಡಿಯೋ ದನಿ ಮುನಿರತ್ನರದ್ದೇ: ಎಫ್‌ಎಸ್‌ಎಲ್ ವರದಿಯಲ್ಲಿ ದೃಢ
ಮುನಿರತ್ನ ವಿರುದ್ಧ ಅತ್ಯಾಚಾರ, ಗುತ್ತಿಗೆದಾರನಿಗೆ ಬೆದರಿಕೆ ಹಾಗೂ ಮಾಜಿ ಕಾರ್ಪೋರೇಟರ್‌ಗೆ ಜಾತಿ ನಿಂದನೆ ಆರೋಪ ಸಂಬಂಧ 3 ಎಫ್‌ಐಆರ್‌ಗಳು ದಾಖಲಾಗಿದ್ದು, ಈಗ ಜಾತಿನಿಂದನೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಮುಗಿಸಿದೆ. ಇನ್ನುಳಿದ ಪ್ರಕರಣಗಳ ತನಿಖೆ ಭಾಗಶಃ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ಆರೋಪ ಪಟ್ಟಿ ಸಲ್ಲಿಕೆಯಾಗಲಿದೆ.
590 ಪುಟ, 53 ಸಾಕ್ಷಿಗಳ ಹೇಳಿಕೆ:
ತಮಗೆ ಜಾತಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸೆ.13ರಂದು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ವೇಲು ನಾಯ್ಕರ್‌ದೂರು ನೀಡಿದ್ದರು. ಈ ದೂರಿನ ಅನ್ವಯ ಮುನಿರತ್ನ ವಿರುದ್ಧಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ (ದೌರ್ಜನ್ಯ ತಡೆ) ಕಾಯಿದೆ, 1989 ಮತ್ತು ಕಲಂ 153, 153ಎ(1) (ಎ)(ಬಿ), 504, 509 2.2.4. ರಡಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಮುನಿರತ್ನ ವಿರುದ್ದ ಪ್ರಕರಣಗಳ ತನಿಖೆಗೆ ಎಸ್‌ಐಟಿಯನ್ನು ಸರ್ಕಾರವು ರಚಿಸಿತು. ಅಂತೆಯೇ ತನಿಖೆಗಿಳಿದ ಎಸ್‌ಐಟಿ, ಜಾತಿ ನಿಂದನೆ ಪ್ರಕರಣದ ತನಿಖೆ ಮುಗಿಸಿ ಜನಪ್ರತಿನಿಧಿಗಳ ನ್ಯಾಯಾಲ ಯಕ್ಕೆ 590 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ. ಇದರಲ್ಲಿ 53 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿದೆ. ಈ ಸಾಕ್ಷಿಗಳ ಪೈಕಿ ಮೂವರು ಪ್ರತ್ಯಕ್ಷದರ್ಶಿಗಳು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದು ಎಸ್‌ಐಟಿ ತಿಳಿಸಿದೆ.
ಆರೋಪಿಯು ಜಾತಿ ನಿಂದನೆ ಮಾಡಿರುವ ಬಗ್ಗೆ ಆಡಿಯೋ ಕ್ಲಿಪ್ಪಿಂಗ್ ಅನ್ನು ಸಂಗ್ರಹಿಸಲಾಗಿತ್ತು. ತರುವಾಯ ಆರೋಪಿ ಮತ್ತು ಸಾಕ್ಷಿದಾರರ ಮಾದರಿ ಧ್ವನಿಯನ್ನು ಎಫ್‌ಎಸ್‌ಎಲ್ ತಜ್ಞರಿಂದ ಪರೀಕ್ಷಿಸಿ ವರದಿ ಪಡೆಯಲಾಗಿದೆ. ಆರೋಪಿಯ ಮಾದರಿ ಧ್ವನಿಯು ಫಿರ್ಯಾದುದಾರರಿಗೆ ಜಾತಿ ನಿಂದನೆ ಮಾಡಿ ನಿಂದಿಸಿರುವ ಧ್ವನಿಗೆ ಹೋಲಿಕೆಯಾಗಿರುವುದು ಎಫ್‌ಎಸ್‌ಎಲ್ ತಜ್ಞರ ವರದಿಯಿಂದ ದೃಢಪಟ್ಟಿರುತ್ತದೆ ಎಂದು ಎಸ್‌ಐಟಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಈ ಪ್ರಕರಣ ಸಂಬಂಧ ತನಿಖೆ ವೇಳೆ ಸಂಗ್ರಹಿಸಿದ ಎಲ್ಲಾ ದಾಖಲಾತಿಗಳು, ವಿಚಾರಣೆಗೊಳಪಡಿಸಿದ ಸಾಕ್ಷಿದಾರರ ಹೇಳಿಕೆಗಳು ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳಿಂದ ಆರೋಪಿಯ ವಿರುದ್ದ ಜಾತಿ ನಿಂದನೆ, ಜಾತಿಗಳ ನಡುವೆ ವೈಷಮ್ಯವನ್ನುಂಟು ಮಾಡಿರುವ ರುಜುವಾತಾಗಿದೆ' ಎಂದು ಎಸ್‌ಐಟಿ ತಿಳಿಸಿದೆ.
ಶಾಸಕ ಮುನಿರತ್ನ ವಿರುದ್ಧ ವೋಟರ್ ಐಡಿ ಹಗರಣ ತನಿಖೆ ವಿಳಂಬ: ಮುನಿರಾಜುಗೌಡ ದೂರು
ಬಿಜೆಪಿ ಶಾಸಕಗೆ ಏಡ್ಸ್ ಹಬ್ಬಿಸಲೆತ್ನ: ಮುನಿರತ್ನ ಆಪ್ತ ಇನ್ಸ್‌ಪೆಕ್ಟರ್ ಬಂಧನ
ಬೆಂಗಳೂರು: ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಬ್ಬಗೋಡಿ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ವಿಶೇಷ ತನಿಖಾಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಅಪ ರಾಧಿಕ ಸಂಚಿನಲ್ಲಿ ಪಾತ್ರ ವಹಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಬೆಂಗಳೂರು ಮೂಲದ ರಾಜ್ಯದ ಬಿಜೆಪಿ ಪ್ರಭಾವಿ ಮುಖಂಡ ಹಾಗೂ ಹಿರಿಯ ಶಾಸಕನಿಗೆ ಏಡ್ಸ್ ಸೋಂಕು ಹಬ್ಬಿಸಲು ಚುಚ್ಚು ಮದ್ದು ನೀಡುವ ಸಂಚನ್ನು ಆರೋಪಿಗಳು ರೂಪಿಸಿದ್ದರು. ಈ ಸಂಚಿನಲ್ಲಿ ಇನ್‌ಸ್ಪೆಕ್ಟರ್ ಅಯ್ಯಣ್ಣ ಪ್ರಮುಖ ಪಾತ್ರವಹಿಸಿದ್ದ ಸಂಗತಿ ಗೊತ್ತಾಯಿತು. ಹಾಗೆಯೇ ವಿಚಾರಣೆ ವೇಳೆ ದೂರುದಾರರು ಹಾಗೂ ಕೆಲ ಸಾಕ್ಷಿದಾರರು ಕೂಡ ಅಯ್ಯಣ್ಣ ಕುರಿತು ಮಾಹಿತಿ ನೀಡಿದ್ದರು. ಅಂತೆಯೇ ಐಪಿಸಿ 120ಬಿ (ಅಪರಾಧಿ ಸಂಚು) ಆರೋಪದಡಿ ಐಯ್ಯಣ್ಣರವನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.