ಪೆಟ್ರೋಲ್ ಪಂಪ್ ಬಳಿಯೇ ಕಾರು ಧಗ ಧಗ!: ತಪ್ಪಿದ ಭಾರೀ ದುರಂತ!
ಪೆಟ್ರೋಲ್ ಬಂಕ್ ಬಳಿಯೇ ಕಾರೊಂದು ಹೊತ್ತಿ ಉರಿದಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ[ಡಿ.17]: ಪೆಟ್ರೋಲ್ ಬಂಕ್‌ವೊಂದರ ಸಮೀಪವೇ ಕಾರೊಂದು ಹೊತ್ತಿ ಉರಿದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ದಾವಣಗೆರೆಯ ಅಂಬೇಡ್ಕರ್ ಸರ್ಕಲ್ ಬಳಿ ನಡೆದಿದೆ.
ಮಹಮ್ಮದ್ ಸರ್ಮದ್ ಎಂಬವರಿಗೆ ಸೇರಿದ್ದ ಕಾರು ಇದಾಗಿದ್ದು, ಕಾರಿನಲ್ಲಿ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದರೆನ್ನಲಾಗಿದೆ. ಆದರೆ ಇದ್ದಕ್ಕಿದ್ದಂತೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರಿನಿಂದ ಹೊರ ಬಂದು ರೋಗಿಯನ್ನು ಬೇರೆ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇತ್ತ ಕಾರು ಮಾಲೀಕ ಸರ್ಮದ್, ಸ್ಥಳೀಯರ ಜೊತೆಗೂಡಿ ಬೆಂಕಿ ನಂದಿಸಲು ಯತ್ನಿಸದರಾದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ವೇಳೆ ಕೆಲವರು ಅಗ್ನಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪೆಟ್ರೋಲ್ ಪಂಪ್ ಬಳಿಯೇ ಈ ಘಟನೆ ಸಂಭವಿಸಿರುವುದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.