Asianet Suvarna News Asianet Suvarna News

Winter Session In Belagavi: ಗಡಿ ನಾಡಿನಲ್ಲಿ ಅಧಿವೇಶನ ಬೇಡ: ಸಚಿವಾಲಯ ಸಿಬ್ಬಂದಿ!

*ನಿಗದಿಯಂತೆ ಡಿ.13ರಿಂದ ಬೆಳಗಾವಿಯಲ್ಲೇ ಅಧಿವೇಶನ: ಸಚಿವ ಅಶೋಕ್‌ ಸ್ಪಷ್ಟೋಕ್ತಿ
*ಕೋವಿಡ್‌ ಹಿನ್ನೆಲೆ: ಬೆಂಗ್ಳೂರಲ್ಲಿ ನಡೆಸಿ: ದೇಶಪಾಂಡೆ, ಸಚಿವಾಲಯ ಸಿಬ್ಬಂದಿ ಆಗ್ರಹ
*ಸುವರ್ಣ ವಿಧಾನಸೌಧದಲ್ಲಿ ಗುರುವಾರ ಹೊರಟ್ಟಿ, ಕಾಗೇರಿ ಪರಿಶೀಲನೆ

Cancel session in Belagavi appealed State Secretariat Employees Association mnj
Author
Bengaluru, First Published Dec 2, 2021, 7:41 AM IST

ಬೆಂಗಳೂರು (ಡಿ. 02): ಕೊರೋನಾ ಹೊಸ ತಳಿ ಒಮಿಕ್ರೋನ್‌ (Covid New Variant Omicron) ಭೀತಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ (Winter session In Belagavi) ನಡೆಸುವ ಕುರಿತು ಪರ-ವಿರೋಧ ಚರ್ಚೆ ಆರಂಭವಾಗಿದೆ. ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಶಾಸಕರೂ, ಮುಖಂಡರು ಮಾತ್ರವಲ್ಲದೆ, ಸಚಿವಾಲಯದ ಸಿಬ್ಬಂದಿ ಕೂಡ ಈ ಪರಿಸ್ಥಿತಿಯಲ್ಲಿ ಗಡಿ ನಾಡಿನಲ್ಲಿ ಅಧಿವೇಶನ ಬೇಡ ಎಂದು ಆಗ್ರಹಿಸಿದ್ದರೆ, ಕಂದಾಯ ಸಚಿವ ಆರ್‌.ಅಶೋಕ್‌ ಅವರು ನಿಗದಿಯಂತೆ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ ಎಂದು ಖಚಿತವಾಗಿ ಹೇಳಿದ್ದಾರೆ.

ಇದೇ 13ರಿಂದ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ (Suvarna Vidhan Soudha) ನಡೆಯಬೇಕಿರುವ ಚಳಿಗಾಲದ ಅಧಿವೇಶನದ ಸಿದ್ಧತೆಯ ಪರಿಶೀಲನೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಗುರುವಾರ ನಡೆಸಲಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಬಳಿಕ ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಲಿದ್ದಾರೆ.

ಅಧಿವೇಶನ ಬೆಳಗಾವಿಯ ಸುವರ್ಣಸೌಧದಲ್ಲಿ ನಿಗದಿ!

ಡಿ.13ರಿಂದ ಡಿ.24ರವರೆಗೆ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವುದು ನಿಗದಿಯಾಗಿದೆ. ಕಳೆದ ಎರಡು ವರ್ಷ ಬೆಳಗಾವಿಯಲ್ಲಿ ಅಧವೇಶನ (Belagavi Session) ನಡೆದಿಲ್ಲ. ಈ ಬಾರಿಯೂ ನಡೆಸದಿದ್ದರೆ ಸತತ ಮೂರನೇ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಯದಂತೆ ಆಗುತ್ತದೆ. ಇದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಆರ್‌.ಅಶೋಕ್‌ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಹಾಗೂ ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಸೇರಿ ಹಲವರು ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ಅಧಿವೇಶನ ನಡೆಸುವಂತೆ ಒತ್ತಾಯಿಸಿದ್ದಾರೆ.

Belagavi Parishat Fight: ಚುನಾವಣಾ ಏಜೆಂಟರಾಗಿ ಸತೀಶ್ ಜಾರಕಿಹೊಳಿ ಅಖಾಡಕ್ಕೆ

ಸ್ಪೀಕರ್‌ಗೆ ನೌಕರರ ಸಂಘದ ಪತ್ರ:

ವಿಧಾನಸಭೆ ಸ್ಪೀಕರ್‌ (Speaker) ಅವರಿಗೆ ಪತ್ರ ಬರೆದಿರುವ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ, ಅಧಿವೇಶನದ ಕಾರಣದಿಂದ ಸಾವಿರಾರು ಜನ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು, ರಾಜಕಾರಣಿಗಳು ಹಾಗೂ ನಾಗರಿಕರು ಒಂದೇ ಕಡೆ ಸೇರುವುದರಿಂದ ಒಮಿಕ್ರೋನ್‌ ವೈರಸ್‌ ಹರಡುವ ಭೀತಿ ಹೆಚ್ಚುತ್ತದೆ. ಹೀಗಾಗಿ ತಾವು ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ, ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ಅಧಿವೇಶನ ಪ್ರಸ್ತಾವನೆ ಕೈಬಿಟ್ಟು, ಸರ್ಕಾರಿ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಬೆಂಗಳೂರಿನ ವಿಧಾನಸೌಧದಲ್ಲೇ ಅಧಿವೇಶನ ಕರೆಯಬೇಕು ಎಂದು ಮನವಿ ಮಾಡಿದ್ದಾರೆ.

ಬೆಳಗಾವಿ ಕಲಾಪಕ್ಕೆ ದೇಶಪಾಂಡೆ ವಿರೋಧ:

ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಆರ್‌.ವಿ.ದೇಶಪಾಂಡೆ, ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕೆಂದು ನಾವು ಈ ಹಿಂದೆ ಗಲಾಟೆ ಮಾಡಿ ಬೇಡಿಕೆ ಇಟ್ಟಬಳಿಕ ಸರ್ಕಾರ ಅಲ್ಲಿ ಅಧಿವೇಶನ ನಡೆಸಲು ನಿರ್ಧಾರ ಕೈಗೊಂಡಿತ್ತು. ಆದರೆ ಸದ್ಯ ಸಮೀಪದ ಧಾರವಾಡದಲ್ಲಿ ಸಾಕಷ್ಟುಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಎಸ್‌ಡಿಎಂ ಕಾಲೇಜಿನಲ್ಲಿ 300ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿಯಲ್ಲೂ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ನಿರ್ಧಾರವನ್ನು ಪುನರ್‌ ಪರಿಶೀಲಿಸಬೇಕು. ಹಾಗಂತ ಅಧಿವೇಶನ ಮುಂದೂಡಬಾರದು. ಬೆಂಗಳೂರಿನಲ್ಲಾದರೂ ಅಧಿವೇಶನ ನಡೆಸಬೇಕು ಎಂದರು.

ಬೆಳಗಾವಿಯಲ್ಲೇ ಅಧಿವೇಶನ-ಅಶೋಕ್‌:

ಕಂದಾಯ ಸಚಿವ ಆರ್‌.ಅಶೋಕ್‌ ಮಾತನಾಡಿ, ಬೆಳಗಾವಿಯ ಸುವರ್ಣಸೌಧದಲ್ಲೇ ನಿಗದಿತ ದಿನಾಂಕದಂದು ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಈಗಾಗಲೇ ಎರಡು ವರ್ಷದಿಂದ ಬೆಳಗಾವಿಯಲ್ಲಿ ನಡೆಯಬೇಕಿದ್ದ ಅಧಿವೇಶನ ಮುಂದೂಡುತ್ತಾ ಬಂದಿದ್ದೇವೆ. ಈಗ ಹಠಾತ್‌ ರದ್ದು ಅಥವಾ ಸ್ಥಳಾಂತರ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ ಎಂದು ಹೇಳಿದರು.

Karnataka Politics: ಡಿಕೆಶಿ ವ್ಯಕ್ತಿತ್ವ ಏನೆಂದು ಹೇಳ್ತೀನಿ, ಸಂಚಲನ ಮೂಡಿಸಿದ ಜಾರಕಿಹೊಳಿ ಹೇಳಿಕೆ

ಬೆಳಗಾವಿ ಅಧಿವೇಶನ ರದ್ದು ಮಾಡಿದರೆ ರಾಜ್ಯದ ಜನ ಭಯಭೀತರಾಗುತ್ತಾರೆ. ಹೀಗಾಗಿ ಅದಕ್ಕೆ ಆಸ್ಪದ ನೀಡದೆ ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕಿದೆ. ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಬೆಳಗಾವಿಯಲ್ಲೇ ಅಧಿವೇಶನ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios