ಬೆಂಗಳೂರು (ಸೆ.23):  ರಾಜ್ಯದ ಸ್ಥಳೀಯ ಸಂಸ್ಥೆಗಳು ಹಾಗೂ ನಿಗ​ಮ​ಗ​ಳು ಸರ್ಕಾರದ ಖಾತರಿ ಮೇಲೆ ಸಾಲ ಪಡೆಯುವ ಚಾಳಿಗೆ ಕಡಿವಾಣ ಹಾಕುವಂತೆ ರಾಜ್ಯ ಪ್ರಧಾನ ಮಹಾಲೇಖ ಪಾಲಕರು (ಸಿ​ಎ​ಜಿ​) ತಮ್ಮ ವರದಿಯಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸರ್ಕಾರದ ಸಂಸ್ಥೆಗಳು ಸಾಲ ಮಾಡುವ ಧೋರಣೆಯಿಂದಾಗಿ ವಿತ್ತೀಯ ಕೊರತೆ ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಸೂಚ್ಯಂಕ (ಜಿಎಸ್‌ಡಿಪಿ)ದ ದರ ಈಗಾಗಲೇ ಹೆಚ್ಚುತ್ತಿದೆ. ಆದ್ದರಿಂದ ನಿಗಮ, ಮಂಡಳಿಗಳ ಸಾಲ ಮಾಡುವ ಚಾಳಿಗೆ ಕಡಿವಾಣ ಹಾಕಬೇಕು. ಹಾಗೆಯೇ ನಿಗಮ, ಮಂಡಳಿಗಳ ಈ ಬಜೆಟ್‌ ಹೊರತಾದ ಬಾಧ್ಯತೆಯನ್ನು ಸ್ಪಷ್ಟವಾಗಿ ಗುರುತಿಸಿ, ವರದಿ ಮಾಡಬೇಕು ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.

ವಿಧಾನಸಭೆಯಲ್ಲಿ ವರದಿ ಮಂಡನೆಯಾದ ಬಳಿಕ ಮಹಾಲೇಖಪಾಲರ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಪ್ರಧಾನ ಮಹಲೇಖಪಾಲೆ ನಿವೇದಿತಾ ಅವರು ವರದಿಯನ್ನು ಬಿಡುಗಡೆ ಮಾಡಿ ವರದಿಯಲ್ಲಿನ ಪ್ರಮುಖ ಉಲ್ಲೇಖಗಳ ಬಗ್ಗೆ ಮಾಹಿತಿ ನೀಡಿದರು.

2019ರ ಮಾಚ್‌ರ್‍ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ರಾಜ್ಯ ಹಣಕಾಸು ಲೆಕ್ಕಪರಿಶೋಧನೆ ಯ ಮೊದಲ ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಸಿಎಜಿ, 2018-19ರ ಸಾಲಿನಲ್ಲಿ ರಾಜ್ಯದ ಒಟ್ಟು ಸಾಲದ (2,85,238 ಕೋಟಿ ರು.) ಇದರ ಶೇ.5ರಷ್ಟುಅಂದರೆ 14,862 ಕೋಟಿ ರು.ಗಳಷ್ಟನ್ನು ಬಜೆಟ್‌ ಹೊರತಾದ ಮೂಲಗಳಿಂದ ಸಾಲ ಪಡೆಯಲಾಗಿದೆ. ರಾಜ್ಯ ಸರ್ಕಾರದ ಖಾತರಿಯ ಮೇಲೆ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು ಸಾಲ ತೆಗೆದುಕೊಳ್ಳುವುದಕ್ಕೆ ಕಡಿವಾಣ ಹಾಕಬೇಕು ಎಂದು ಸಿಎಜಿ ಹೇಳಿದೆ.

ಇಷ್ಟು ತರಾತುರಿ ಏಕೆ? ಭೂಸುಧಾರಣೆ ವಿಧೇಯಕಕ್ಕೆ ಬಿಜೆಪಿಯಲ್ಲೇ ವಿರೋಧ

ರಾಜ್ಯವು ಕೇರಳ, ತಮಿಳುನಾಡುಗಳಿಗೆ ಹೋಲಿಸಿದರೆ ಆರೋಗ್ಯ ಮತ್ತು ಶಿಕ್ಷಣ ವಲಯಕ್ಕೆ ಕಡಿಮೆ ಖರ್ಚು ಮಾಡುತ್ತಿದೆ. ಆದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳತ್ತ ಇನ್ನಷ್ಟುಕಡಿಮೆ ಅನುದಾನ ನೀಡುತ್ತಿದೆ ಎಂಬುದನ್ನು ಸಿಎಜಿ ತನ್ನ ವರದಿಯಲ್ಲಿ ಗುರುತಿಸಿದೆ. ಈ ಎರಡು ವಲಯಗಳಿಗೆ ರಾಜ್ಯ ಸರ್ಕಾರ ಸಾಕಷ್ಟುಆದ್ಯತೆ ನೀಡಬೇಕು ಎಂದು ವರದಿಯಲ್ಲಿ ಸಿಎಜಿ ತಿಳಿಸಿದೆ.

ರಾಜ್ಯವು 2018-19 ರ ಸಾಲಿನಲ್ಲಿ 15,400 ಕೋಟಿ ರೂಗಳನ್ನು ಸಬ್ಸಿಡಿ ರೂಪದಲ್ಲಿ ವಿನಿಯೋಗಿಸಿದ್ದು ಇದರಲ್ಲಿ ಸಿಂಹಪಾಲು ಇಂಧನದ ಸಬ್ಸಿಡಿಯದಾಗಿದೆ. ವಿದ್ಯುತ್‌ (7,593 ಕೋಟಿ ರು.), ಆಹಾರ (2,402 ಕೋಟಿ ರು.), ಕೃಷಿ ಮತ್ತು ಕೃಷಿಗೆ ಸಂಬಂಧ ಪಟ್ಟಚಟುವಟಿಕೆ (2,336 ಕೋಟಿ ರು.), ಸಹಕಾರ (777 ಕೋಟಿ ರು.)ರಷ್ಟುಸಬ್ಸಿಡಿ ನೀಡಲಾಗಿದೆ. ಅಂದರೆ ರಾಜ್ಯದ ಒಟ್ಟು ಸಬ್ಸಿಡಿಯ ಅರ್ಧದಷ್ಟುವಿದ್ಯುತ್‌ ಸಬ್ಸಿಡಿಯ ರೂಪದಲ್ಲಿದೆ.

ಹಾಗೆಯೇ ನಷ್ಟಉಂಟು ಮಾಡುವ ಸಂಸ್ಥೆಗಳಲ್ಲಿ ಹಣ ಹೂಡುವ ರಾಜ್ಯ ಸರ್ಕಾರದ ನಡೆಯ ಬಗ್ಗೆಯೂ ಸಿಎಜಿ ಆಕ್ಷೇಪ ಎತ್ತಿದೆ. 2018-19ರ ಸಾಲಿನಲ್ಲಿ 66,518 ಕೋಟಿ ರೂಗಳ ಹೂಡಿಕೆಗೆ ಕೇವಲ 38.30 ಕೋಟಿ ರೂ. ಮಾತ್ರ ವಾಪಸ್‌ ಬಂದಿದೆ. ಅಂದರೆ ಸರ್ಕಾರದ ಹೂಡಿಕೆಯ ಶೇ. 0.1ರಷ್ಟುಮಾತ್ರ ವಾಪಸ್‌ ಬಂದಿದೆ. ರಾಜ್ಯ ನಷ್ಟದಲ್ಲಿರುವ ಕಂಪೆನಿ, ನಿಗಮ, ಪ್ರಾಧಿಕಾರದಲ್ಲಿ 2018-19ರ ಸಾಲಿನಲ್ಲಿ 39,146 ಕೋಟಿ ರು. ಹೂಡಿಕೆ ಮಾಡಿದೆ.

2018-19 ರ ಸಾಲಿನಲ್ಲಿ 2,45,673 ಕೋಟಿ ರೂಗಳಷ್ಟುಖರ್ಚು ಮಾಡುವ ಅವಕಾಶ ವಿದ್ದು ರಾಜ್ಯ ಸರ್ಕಾರ 2,20,534 ಕೋಟಿ ರೂ ಖರ್ಚು ಮಾಡಿದೆ. 25,139 ಕೋಟಿ ರು. ಖರ್ಚೆ ಮಾಡಿಲ್ಲ. 2019ರ ಮಾಚ್‌ರ್‍ 31ರ ಹೊತ್ತಿಗೆ ರಾಜ್ಯ ಸರ್ಕಾರ ಬಳಿ 22,004 ಕೋಟಿ ರೂಗಳಷ್ಟುನಗದು ಉಳಿತಾಯವಿತ್ತು. ನಗದು ಉಳಿತಾಯ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ರಾಜ್ಯ ಸರ್ಕಾರ ತನ್ನಲ್ಲಿ ಪ್ರಸಕ್ತ ಇರುವ ಉಳಿತಾಯದ ಹಣವನ್ನು ಮೊದಲು ವಿನಿಯೋಗಿಸಿ ಆ ಬಳಿಕ ಸಾಲ ಮಾಡಬಹುದಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.

ತೆರಿಗೆಯೇತರ ಮೂಲಗಳಿಂದ ರಾಜ್ಯಕ್ಕೆ ಬರುತ್ತಿರುವ ಆದಾಯ ನಗಣ್ಯವಾಗಿದೆ. ತೇರಿಗೇಯೇತರ ಮೂಲಗಳಿಂದ ಹೆಚ್ಚಿನ ಆದಾಯ ಸಂಗ್ರಹಿಸುವಂತೆ ಖರ್ಚು ಸುಧಾರಣಾ ಸಮಿತಿ ಕೂಡ ಶಿಫಾರಸ್ಸು ಮಾಡಿದೆ. 2014-19ರ ಸಾಲಿನಲ್ಲಿ ತೇರಿಗೇಯತರ ಮೂಲಗಳಿಂದ ಕೇವಲ ಶೇ. 0.48 ರಿಂದ ಶೇ. 0.52 ರಷ್ಟುಮಾತ್ರ ಆದಾಯ ಸಂಗ್ರಹವಾಗಿದೆ. ಆದ್ದರಿಂದ ತೆರಿಗೇಯೇತರ ಮೂಲಗಳಿಂದ ಹೆಚ್ಚು ಆದಾಯ ಸಂಗ್ರಹ ಮಾಡಲು ಸರ್ಕಾರ ಮುಂದಾಗಬೇಕು ಎಂದು ಸಿಎಜಿ ತನ್ನ ವರದಿಯಲ್ಲಿ ಸಲಹೆ ನೀಡಿದೆ.

ರಾಜ್ಯ ಸರ್ಕಾರದ ಬಳಿ 2018-19 ರಲ್ಲಿ 679 ಕೋಟಿ ರೂ ಗಳಷ್ಟುಹೆಚ್ಚಿನ ರಾಜಸ್ವ ಆದಾಯವನ್ನು ಹೊಂದಿತ್ತು. ಜಿಎಸ್‌ಡಿಪಿಗೆ ಸಾಪೇಕ್ಷವಾಗಿ ವಿತ್ತೀಯ ಕೊರತೆ (ಶೇ.2.73) ಮತ್ತು ರಾಜ್ಯದ ಜಿಎಸ್‌ಡಿಪಿಯ ಶೇ.20.26ರಷ್ಟುಸಾಲವನ್ನು ಹೊಂದಿದ್ದು ಕೆಎಫ್‌ಆರ್‌ ಕಾಯ್ದೆಗೆ ಬದ್ಧವಾಗಿದ್ದು ಉತ್ತಮ ಆರ್ಥಿಕ ನಿರ್ವಹಣೆಯನ್ನು ತೋರಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.
  

- ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳು ಸಾಲ ಮಾಡುವುದಕ್ಕೆ ಕಡಿವಾಣ ಹಾಕಬೇಕು.

- ಸರ್ಕಾರ ತನ್ನ ಬಳಿಯಿರುವ ಹಣವನ್ನು ಖರ್ಚು ಮಾಡಿ ಬಳಿಕ ಸಾಲ ಮಾಡಲಿ.

- ತೆರಿಗೆಯೇತರ ಮೂಲಗಳಿಂದ ಆದಾಯ ಸಂಗ್ರಹಿಸಲು ರಾಜ್ಯ ಸರ್ಕಾರ ಮುಂದಾಗಬೇಕು.

- ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆಯ ಮೇಲೆ ಹಣ ಖರ್ಚು ಮಾಡಲಿ.

- ನಷ್ಟದಲ್ಲಿರೂವ ಸಂಸ್ಥೆಗಳಲ್ಲಿ ಹಣ ಹೂಡಿ ಕೇವಲ ಕೇವಲ 0.1ರಷ್ಟುಮಾತ್ರ ಆದಾಯ ಪಡೆದಿರುವ ರಾಜ್ಯ

- ಒಟ್ಟಾರೆ ರಾಜ್ಯದ ಆರ್ಥಿಕತೆ ಸುಸ್ಥಿತಿಯಲ್ಲಿ