ಬೆಂಗಳೂರು (ಮೇ. 18):  ಕರ್ನಾಟಕ ಸೇರಿದಂತೆ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಭೂಮಿಗಳಿಗೆ ನೀರುಣಿಸುವ ತುಂಗಭದ್ರಾ ಜಲಾಶಯದಲ್ಲಿ (ಟಿಬಿ ಡ್ಯಾಂ) ಅಪಾರ ಪ್ರಮಾಣದ ಹೂಳು ತುಂಬಿಕೊಂಡ ಪರಿಣಾಮ ಕಡಿಮೆಯಾಗಿರುವ ನೀರಿನ ಸಂಗ್ರಹ ಸಾಮರ್ಥ್ಯದ ಕೊರತೆಯನ್ನು ಪರಿಹರಿಸಲು ಕೊಪ್ಪಳದ ನವಲಿ ಗ್ರಾಮದ ಹತ್ತಿರ ಸಮತೋಲನ ಜಲಾಶಯ ನಿರ್ಮಾಣ ಸಂಬಂಧ ಸರ್ವೇ ಸಮೀಕ್ಷೆ ನಡೆಸಲು 14.30 ಕೋಟಿ ರು. ಮೊತ್ತದ ಅಂದಾಜಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

60 ವರ್ಷಗಳ ಹಿಂದೆ ನಿರ್ಮಿಸಿರುವ ತುಂಗಾಭದ್ರಾ ಜಲಾಶಯಕ್ಕೆ ಪ್ರತಿ ವರ್ಷ ಅರ್ಧ ಟಿಎಂಸಿ ಹೂಳು ಸೇರುತ್ತಿದೆ. ಇದರಿಂದ ಈವರೆಗೆ ಸುಮಾರು 31.616 ಟಿಎಂಸಿಯಷ್ಟುಹೂಳು ತುಂಬಿಕೊಂಡಿದೆ. ಇದರಿಂದ ಕೇವಲ 35 ಟಿಎಂಸಿ ನೀರು ಮಾತ್ರ ಸಂಗ್ರಹವಾಗುತ್ತಿತ್ತು. ನೀರಿನ ಸಂಗ್ರಹ ಸಾಮರ್ಥ್ಯದ ಕೊರತೆಯಿಂದಾಗಿ ಕಾಲುವೆಗಳ ಕೊನೆಯಲ್ಲಿರುವವರಿಗೆ ನೀರು ಸಿಗುತ್ತಿರಲಿಲ್ಲ. ಹೀಗಾಗಿ ಈ ಹಿಂದಿನ ಸರ್ಕಾರಗಳು ಹೂಳು ತೆಗೆಯಲು ಜಾಗತಿಕ ಟೆಂಡರ್‌ ಕರೆದಿತ್ತು.

180 ಕಿ.ಮೀ. ವೇಗದಲ್ಲಿ ಬರಲಿದೆ ‘ಅಂಫನ್‌’ ಮಾರುತ!

ಆದರೆ ವಿದೇಶಿ ಕಂಪನಿಗಳು ಟೆಂಡರ್‌ ಮೊತ್ತದಲ್ಲಿ ಹೊಸ ಜಲಾಶಯ ಕಟ್ಟಬಹುದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಜಲಾಶಯದಿಂದ ತೆಗೆದ ಹೂಳನ್ನು ಹಾಕಲು ಸುಮಾರು 66 ಸಾವಿರ ಎಕರೆ ಜಾಗ ಬೇಕಾಗುತ್ತಿತ್ತು. ಸಮತೋಲನ ಜಲಾಶಯವನ್ನು ಕೊಪ್ಪಳ ಜಿಲ್ಲೆಯ ನವಲೆ ಗ್ರಾಮದ ಬಳಿ ನಿರ್ಮಿಸಲು ಯೋಜಿಸಲಾಗಿದೆ.

ಈ ಯೋಜನೆಗೆ ಸುಮಾರು 18 ಸಾವಿರ ಎಕರೆ ಭೂಮಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಈಗ ಸಮತೋಲನ ಜಲಾಶಯ ನಿರ್ಮಿಸುವ ಸಲುವಾಗಿ ಸರ್ವೇ ಸಮೀಕ್ಷೆ ಕೈಗೊಳ್ಳಲು ಸರ್ಕಾರ ಆಡಳಿತಾತ್ಮಕ ಒಪ್ಪಿಗೆ ನೀಡಿದೆ.