ಸಿಎ ಸೈಟ್ ಪಾರದರ್ಶಕ ಹಂಚಿಕೆ: ಸಚಿವ ಎಂ.ಬಿ.ಪಾಟೀಲ್
193 ನಿವೇಶನಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದರೂ ಕೇವಲ 43 ನಿವೇಶನ (ಶೇ.25) ಮಾತ್ರ ಹಂಚಿಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸಿಎ ನಿವೇಶನಗಳಿಗೂ ಶೇ.24.10 ರಷ್ಟು ಪರಿಶಿಷ್ಟ ಜಾತಿ/ಪಂಗಡಗಳಿಗೆ ಹಂಚಿಕೆ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು(ಆ.24): ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ನಾಗರಿಕ ಸೌಲಭ್ಯದ (ಸಿಎ) ನಿವೇಶನಗಳನ್ನು ಅರ್ಹ ಸಂಸ್ಥೆಗಳಿಗೆ ಅತ್ಯಂತ ಪಾರದರ್ಶಕವಾಗಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಯಾವ ಅಕ್ರಮವೂ ಆಗಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಅದೊಂದು ಆಧಾರರಹಿತ ದೂರು. ಸಿ.ಎ ನಿವೇಶನಗಳನ್ನು ಕಾನೂನು ಪ್ರಕಾರ ಹರಾಜು ಹಾಕುವ ಪದ್ದತಿಯೇ ಇಲ್ಲ. ವಾಣಿಜ್ಯ ಉದ್ದೇಶದ ನಿವೇಶನಗಳನ್ನು ಮಾತ್ರ ಹರಾಜು ಹಾಕಲು ಅವಕಾಶ ಇದೆ. ಈ ನಿಯಮಗಳನ್ನು ಪಾಲಿಸಿ ಪಾರದರ್ಶಕವಾಗಿಯೇ ಹಂಚಿಕೆ ಮಾಡಲಾಗಿದೆ’ ಎಂದು ಹೇಳಿದರು.
ಜಿಂದಾಲ್‌ಗೆ ಭೂಮಿ ಕೊಡುವಲ್ಲಿ ಸರ್ಕಾರದ್ದು ಎಳ್ಳಷ್ಟೂ ತಪ್ಪಿಲ್ಲ: ಎಂ. ಬಿ. ಪಾಟೀಲ
ಸಿ.ಎ ನಿವೇಶನಗಳ ಹಂಚಿಕೆಗಾಗಿ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ಕೊಡಲಾಗಿತ್ತು. ಜತೆಗೆ ಇದೇ ಮೊದಲ ಬಾರಿಗೆ ಇಲಾಖಾ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗಿತ್ತು. ಜತೆಗೆ ಈ ಬಾರಿ ಹಂಚಿಕೆ ಹೆಚ್ಚು ಪಾರದರ್ಶಕವಾಗಿ ನಡೆಯಲಿ ಎಂಬ ಕಾರಣಕ್ಕೆ ಕಾರಣಕ್ಕೆ ಮೊದಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಉಪ ಸಮಿತಿಯಿಂದ ಅರ್ಹತೆ ಪರಿಶೀಲನೆ ನಡೆದಿದೆ. ಬಳಿಕ ಇಲಾಖಾ ಸಚಿವರ ಅಧ್ಯಕ್ಷತೆಯ ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿಗೆ ಶಿಫಾರಸು ಮಾಡಿದ ನಂತರ ಈ ರಾಜ್ಯ ಮಟ್ಟದ ಸಮಿತಿ ತೀರ್ಮಾನದ ಮೂಲಕ ಅರ್ಹರಿಗೇ ಹಂಚಿಕೆ ಮಾಡಲಾಗಿದೆ.
ಇನ್ನು 193 ನಿವೇಶನಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದರೂ ಕೇವಲ 43 ನಿವೇಶನ (ಶೇ.25) ಮಾತ್ರ ಹಂಚಿಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸಿಎ ನಿವೇಶನಗಳಿಗೂ ಶೇ.24.10 ರಷ್ಟು ಪರಿಶಿಷ್ಟ ಜಾತಿ/ಪಂಗಡಗಳಿಗೆ ಹಂಚಿಕೆ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.