ಬೆಂಗಳೂರು(ಅ.08): ಅಧಿಕಾರ ಹಂಚಿಕೆ ಅದು ಕಾಲಕಾಲಕ್ಕೆ ಬದಲಾಗುತ್ತಾ ಇರುತ್ತದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅಂಗೀಕಾರ ಮಾಡೋದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರವಾಗಿದೆ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ. 

ದಕ್ಷಿಣ ಭಾರತದ ಉಸ್ತುವಾರಿ ನೀಡಿರುವ ವಿಚಾರದ ಬಗ್ಗೆ ಇಂದು(ಗುರುವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಮುಂದೆ ಏನು ಚರ್ಚೆ ಮಾಡಿದೆ ಈ ಬಗ್ಗೆ ಅನ್ನೋದನ್ನು ನಾನು ಮಾಧ್ಯಮದ ಮುಂದೆ ಹೇಳೋದಿಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಉಸ್ತುವಾರಿಗಳ ಪಟ್ಟಿ ಇಂದು ಪ್ರಕಟ: ಸಿಟಿ ರವಿ ಹೆಗಲಿಗೆ ಮತ್ತೊಂದು ಹೊಣೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮನೆ ಮೇಲೆ ಸಿಬಿಐ ದಾಳಿ ವಿಚಾರದಲ್ಲಿ ರಾಜಕೀಯ ಆಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಚುನಾವಣೆ ಇರೋದು ನಮಗೆ ಸಿಬಿಐಗೆ ಅಲ್ಲ. ಅವರು ಅವರ ಕೆಲಸವನ್ನ ಮಾಡುತ್ತಾರೆ. 2017ರಲ್ಲಿ ದಾಖಲಾದ ಪ್ರಕರಣದ ಮುಂದುವರಿದ ಭಾಗದ ತನಿಖೆಯನ್ನು ಸಿಬಿಐ ಮಾಡಿದೆ. ಇದರಲ್ಲಿ ರಾಜಕೀಯ ಏನಿದೆ. ಎರಡು ಕ್ಷೇತ್ರಗಳ ಉಪಚುನಾವಣೆ ಸರ್ಕಾರದ ಮೇಲೆ ಪರಿಣಾಮ ಬೀರೋದಿಲ್ಲ ಎಂದು ಹೇಳಿದ್ದಾರೆ. 

ಸಿಟಿ ರವಿ ಅವರ ಕ್ಷೇತ್ರದಲ್ಲಿ ವಜ್ರ ಬೆಳಿತಾರಾ? ಎಂದಿದ್ದ ಡಿ.ಕೆ ಸುರೇಶ್‌ಗೆ ಟಾಂಗ್‌ ಕೊಟ್ಟ ಸಿಟಿ ರವಿ ನನ್ನ ಆಸ್ತಿ ಮೌಲ್ಯ ಎಷ್ಟು ? ಡಿಕೆಶಿಯ ಆಸ್ತಿ ಮೌಲ್ಯ ಎಷ್ಟು? ಡಿಕೆಶಿ ಬೆಳವಣಿಗೆ ನ್ಯಾಚುರಲ್ ಗ್ರೋತ್ ಅಲ್ಲ ಅದು ಎಂದಿದ್ದಾರೆ. 

ತುಮಕೂರು ಜಿಲ್ಲೆಯ ಶಿರಾ ಉಪಚುನಾವಣೆಗೆ ಸಂಘ ಪರಿವಾರ ಹಣ ತರುತ್ತಿದೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆದರೂ ಅವರ ತಂದೆಯವರಷ್ಟು ಅವರು ತಿಳಿದುಕೊಂಡಿಲ್ಲ. ಸಂಘ ಏನು ಎಂದು ತಿಳಿಯದವರು ಹೀಗೆ ಮಾತನಾಡುತ್ತಾರೆ. ಒಮ್ಮೆ ಸಂಘದ ಶಾಖೆಗೆ ಬಂದರೆ ಸಂಘದ ಬಗ್ಗೆ ಗೊತ್ತಾಗತ್ತೆ ಎಂದು ಹೆಚ್‌ಡಿಕೆಗೆ ಟಾಂಗ್‌ ಕೊಟ್ಟಿದ್ದಾರೆ.