ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್‌ಗೆ ಹಿನ್ನಡೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಸೂಚನೆ ನೀಡಲಾಗಿದೆ.
ಬೆಂಗಳೂರು (ಡಿ.19): ಸಿಲಿಕಾನ್ ಸಿಟಿ ಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜ್ ಅವರಿಗೆ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕಾನೂನು ಸಂಕಷ್ಟ ಎದುರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಶಾಸಕರ ಬಂಧನದ ಭೀತಿ ಎದುರಾಗಿದೆ.
ಏನಿದು ಪ್ರಕರಣ? ಕಳೆದ ಕೆಲವು ತಿಂಗಳ ಹಿಂದೆ ನಡೆದಿದ್ದ ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ ಅವರ ಹೆಸರು ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಬೈರತಿ ಬಸವರಾಜ್ ಅವರ ಪಾತ್ರದ ಕುರಿತು ತನಿಖೆ ನಡೆಸುತ್ತಿದ್ದವು. ಬಂಧನದ ಭೀತಿಯಿಂದ ಶಾಸಕರು ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಆದೇಶ
ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು ಬೈರತಿ ಬಸವರಾಜ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಸ್ಪಷ್ಟವಾಗಿ ನಿರಾಕರಿಸಿತು. ಅಲ್ಲದೆ, ವಿಚಾರಣಾ ನ್ಯಾಯಾಲಯದಲ್ಲೇ (Trial Court) ಸೂಕ್ತ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ. ಅತಿ ಮುಖ್ಯವಾಗಿ, ಅಲ್ಲಿಯವರೆಗೆ ಬೈರತಿ ಅವರಿಗೆ ಬಂಧನದಿಂದ ಯಾವುದೇ ಮಧ್ಯಂತರ ರಕ್ಷಣೆ ನೀಡಲು ನ್ಯಾಯಾಲಯ ಒಪ್ಪಲಿಲ್ಲ. ಇದು ತನಿಖಾಧಿಕಾರಿಗಳಿಗೆ ಶಾಸಕರನ್ನು ವಿಚಾರಣೆಗೆ ಒಳಪಡಿಸಲು ಅಥವಾ ಬಂಧಿಸಲು ಹಾದಿ ಸುಗಮಗೊಳಿಸಿದಂತಾಗಿದೆ.
ಕೋಕಾ ಅನ್ವಯವಿಲ್ಲ
ಇದೇ ವೇಳೆ ಬೈರತಿ ಬಸವರಾಜ್ ಅವರಿಗೆ ಒಂದು ಸಣ್ಣ ಸಮಾಧಾನಕರ ಅಂಶವೂ ಸಿಕ್ಕಿದೆ. ಈ ಪ್ರಕರಣದಲ್ಲಿ 'ಕೋಕಾ' (KCOCA - ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಇದು ಅವರಿಗೆ ಪ್ರಕರಣದ ಗಂಭೀರತೆಯನ್ನು ಕಾನೂನಾತ್ಮಕವಾಗಿ ಎದುರಿಸಲು ಸ್ವಲ್ಪ ಮಟ್ಟಿನ ಅನುಕೂಲ ಮಾಡಿಕೊಟ್ಟಿದೆ. ಒಟ್ಟಾರೆಯಾಗಿ, ಬಿಕ್ಲು ಶಿವ ಕೊಲೆ ಪ್ರಕರಣದ ತೂಗುಗತ್ತಿ ಈಗ ಬೈರತಿ ಬಸವರಾಜ್ ಅವರ ಮೇಲೆ ನೇತಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅವರು ವಿಚಾರಣಾ ನ್ಯಾಯಾಲಯದಲ್ಲಿ ಯಾವ ರೀತಿಯ ಕಾನೂನು ಹೋರಾಟ ನಡೆಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಕಳೆದ ಜುಲೈ ತಿಂಗಳಲ್ಲಿ ಕಿತ್ತಗನೂರು ಜಮೀನು ವಿವಾದದ ಹಿನ್ನೆಲೆಯಲ್ಲಿ ಹಲಸೂರು ಕೆರೆ ಸಮೀಪದ ತನ್ನ ಮನೆ ಮುಂದೆ ನಿಂತಿದ್ದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಮೇಲೆ ಶಾಸಕ ಬೈರತಿ ಬಸವರಾಜು ಅವರ ಬೆಂಬಲಿಗ ಎನ್ನಲಾದ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನ ಸಹಚರರು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಕೊಲೆ ಪ್ರಕರಣ ಸಂಬಂಧ ಜಗ್ಗನ ಐವರು ಬೆಂಬಲಿಗರನ್ನು ಬಂಧಿಸಿದ ಪೊಲೀಸರು, ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಜಗ್ಗನ ಪತ್ತೆಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.
ಬಿಕ್ಲು ಶಿವನ ಕೊಲೆ ಕೇಸಲ್ಲಿ ಬೈರತಿ ಸುರೇಶ್ 5ನೇ ಆರೋಪಿ:
ಇನ್ನು ಬಿಕ್ಲು ಶಿವ ಅವರ ತಾಯಿ ವಿಜಯಲಕ್ಷ್ಮೀ ಅವರು ತಮ್ಮ ಮಗನ ಹತ್ಯೆಗೆ ಶಾಸಕ ಬೈರತಿ ಬಸವರಾಜ್ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಅದರಂತೆ ಎಫ್‌ಐಆರ್‌ನಲ್ಲಿ 5ನೇ ಆರೋಪಿ ಎಂದು ಶಾಸಕ ಬೈರತಿ ಬಸವರಾಜು ಹೆಸರು ಉಲ್ಲೇಖವಾಗಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಹಲವು ಬಾರಿ ವಿಚಾರಣೆಯನ್ನೂ ಮಾಡಲಾಗಿತ್ತು. ಈ ಹಿಂದೆ ಪೊಲೀಸರ ನೋಟೀಸ್‌ಗೆ ವಿಚಾರಣೆಗೆ ಹಾಜರಾಗದೇ ಿರ್ಲಕ್ಷ್ಯ ತೋರಿದಾಗಲೂ ಹೈಕೋರ್ಟ್ ಛೀಮಾರಿ ಹಾಕಿತ್ತು. ಈ ಕೇಸಿನಲ್ಲಿ ಆರೋಪಿ ಎಂಬುದಕ್ಕೆ ಸಾಕ್ಷಿಗಳಿದ್ದರೆ ಅವರನ್ನು ಬಂಧಿಸುವುದನ್ನು ನಿರಾಕರಿಸುವುದಿಲ್ಲ ಎಂದು ಕೋರ್ಟ್‌ನಿಂದ ತಿಳಿಸಲಾಗಿತ್ತು. ಇದೀಗ ಬಂಧನದ ಭೀತಿ ಬೆನ್ನಲ್ಲಿಯೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇದೀಗ ಪುನಃ ಹೈಕೋರ್ಟ್ ನಿರಾಕರಿಸಿದ್ದಾರೆ.


