ವಿಜಯೇಂದ್ರ 150 ಕೋಟಿ ಆಫರ್ ಮಾಡಿಲ್ಲ: ಸಿಟ್ಟಿನಿಂದ ನಾನಂದು ಆ ರೀತಿ ಹೇಳಿಕೆ ಕೊಟ್ಟಿದ್ದೆ: ಮಾಣಿಪ್ಪಾಡಿ ಯೂಟರ್ನ್
ಸಿಟ್ಟಿನಲ್ಲಿದ್ದ ನಾನು ಕೂಡಲೆ ಸುದ್ದಿಗೋಷ್ಠಿ ಕರೆದು ವಿಜಯೇಂದ್ರ ಅವರಿಗೆ ಬೈದಿದ್ದೆ. ನನ್ನನ್ನು ಪರೀಕ್ಷೆ ಮಾಡಲು ಅವರು ಹಾಗೆ ಹೇಳಿದ್ದು ಎನ್ನುವುದು ತಡವಾಗಿ ನನಗೆ ಅರಿವಾಯಿತು. ಆ ಸುದ್ದಿಗೋಷ್ಠಿಯಲ್ಲಿ ನನ್ನ ಹೇಳಿಕೆ ಆತುರ ಮತ್ತು ಸಿಟ್ಟಿನ ಹೇಳಿಕೆಯಾಗಿತ್ತು ಎಂದ ಅನ್ವರ್ ಮಾಣಿಪ್ಪಾಡಿ
ಮಂಗಳೂರು(ಡಿ.17): ವಕ್ಫ್ ಆಸ್ತಿ ಕಬಳಿಕೆ ಕುರಿತು ಮೌನವಾಗಿರಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನನಗೆ 150 ಕೋಟಿ ರು.ಆಫರ್ ನೀಡಿದ್ದರು ಎಂಬುದು ಸುಳ್ಳು. ಅವರು ಯಾವುದೇ ಆಫರ್ ನೀಡಿಲ್ಲ. ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ನಾನು ಮಾಡಿದ ಆರೋಪ ಆತುರ ಮತ್ತು ಸಿಟ್ಟಿನ ಹೇಳಿಕೆಯಾಗಿತ್ತು ಎಂದು ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಹೇಳಿಕೆ ವಿಚಾರದಲ್ಲಿ ಆಡಳಿತ-ಪ್ರತಿಪಕ್ಷ ನಡುವೆ ವಿವಾದ ತಾರಕ್ಕೇರಿರುವ ಬೆನ್ನಲ್ಲೇ ‘ಕನ್ನಡಪ್ರಭ’ಕ್ಕೆ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಒಂದು ದಿನ ಪಕ್ಷದ ಕಚೇರಿಯಲ್ಲಿ ವಿಜಯೇಂದ್ರ ಅವರು ‘ಬಹಳ ಹೋರಾಟ ಮಾಡಿದ್ದೀರಿ, ಸೋತಿದ್ದೀರಿ. ವಕ್ಫ್ ವರದಿ ಕುರಿತು ಮೌನವಾಗಿದ್ದರೆ ನಿಮಗೆ ಸಿಗುತ್ತೆ’ ಎಂದಿದ್ದರು. ಆಗ ‘ನೀವೇನು ಮಾತನಾಡುತ್ತಿದ್ದೀರಿ’ ಅಂತ ನಾನು ಸಿಟ್ಟಿನಿಂದ ಅವರ ಜತೆ ವಾಕ್ಸಮರ ನಡೆಸಿದ್ದೆ. ನಂತರ ಅವರು ‘ಹಾಗಾದರೆ ಕೇಸ್ ಕ್ಲೋಸ್ ಮಾಡೋದು ಬೇಡ, ಟೈಟ್ ಮಾಡೋಣ’ ಎಂದರು. ಆದರೆ, ಇದೇ ಸಿಟ್ಟಿನಲ್ಲಿದ್ದ ನಾನು ಕೂಡಲೆ ಸುದ್ದಿಗೋಷ್ಠಿ ಕರೆದು ವಿಜಯೇಂದ್ರ ಅವರಿಗೆ ಬೈದಿದ್ದೆ. ನನ್ನನ್ನು ಪರೀಕ್ಷೆ ಮಾಡಲು ಅವರು ಹಾಗೆ ಹೇಳಿದ್ದು ಎನ್ನುವುದು ತಡವಾಗಿ ನನಗೆ ಅರಿವಾಯಿತು. ಆ ಸುದ್ದಿಗೋಷ್ಠಿಯಲ್ಲಿ ನನ್ನ ಹೇಳಿಕೆ ಆತುರ ಮತ್ತು ಸಿಟ್ಟಿನ ಹೇಳಿಕೆಯಾಗಿತ್ತು ಎಂದರು.
ವಕ್ಫ್ ಆಸ್ತಿ ಕಬಳಿಕೆ ಕುರಿತು ಮೌನವಾಗಿರಲು ಆಮಿಷವೊಡ್ಡಿದ್ದು ಕಾಂಗ್ರೆಸ್: ಮಾಣಿಪ್ಪಾಡಿ
ಆ ಘಟನೆಯಾದ ತಕ್ಷಣ ಯಡಿಯೂರಪ್ಪ ಅವರು ವರದಿ ಮಂಡನೆ ಮಾಡಿದ್ದರು. ನನ್ನ ವರದಿಯನ್ನು ಯಾರೇ ತಿರಸ್ಕರಿಸಿದರೂ, ನಿರ್ಲಕ್ಷ್ಯ ಮಾಡಿದರೂ ಅವರ ಮೇಲೆ ಸಿಕ್ಕಾಪಟ್ಟೆ ಕೋಪಗೊಂಡು ಮಾತನಾಡುತ್ತೇನೆ. ಅಂದು ಹೇಳಿಕೆ ನೀಡಿದ್ದು ಕೂಡ ಇದೇ ಕೋಪದಲ್ಲೇ ಆಗಿತ್ತು. ಆದರೆ, ವಿಜಯೇಂದ್ರ ಯಾವುದೇ ಆಫರ್ ಮಾಡಿಲ್ಲ ಎಂದು ಪುನರುಚ್ಚರಿಸಿದರು.
ಮಾಣಿಪ್ಪಾಡಿ ಏಕೆ ಉಲ್ಟಾ ಹೇಳಿಕೆ ಕೊಡ್ತಿದ್ದಾರೆ? ಅವರ ವಿಡಿಯೋ ನೋಡಿ ನಾನು ಪ್ರತಿಕ್ರಿಯಿಸಿದ್ದೆ: ಸಿದ್ದರಾಮಯ್ಯ
ಗದಗ: ‘ಮಾಣಿಪ್ಪಾಡಿಯವರೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಅವರ ವಿಡಿಯೋ ಹೇಳಿಕೆ ನೋಡಿಯೇ ಪ್ರತಿಕ್ರಿಯೆ ನೀಡಿದ್ದೇನೆ. ಈಗ ಯಾಕೆ ಉಲ್ಟಾ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗದಗ ಜಿಲ್ಲೆ ರೋಣದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ವಕ್ಫ್ ಆಸ್ತಿ ಅಕ್ರಮದ ವರದಿ ಮುಚ್ಚಿ ಹಾಕಲು ಕಾಂಗ್ರೆಸ್‌ನಿಂದಲೇ ನನಗೆ ಕೋಟಿ ಕೋಟಿ ಆಫರ್ ಬಂದಿತ್ತು.
ಮೌನದಿಂದಿರಲು ವಿಜಯೇಂದ್ರ 150 ಕೋಟಿ ಆಫರ್ ಮಾಡಿದ್ದಾರೆ ಎಂಬುದು ಸುಳ್ಳು ಎಂಬ ಅನ್ವರ್ ಮಾಣಿಪ್ಪಾಡಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ವಿಡಿಯೋ ರೆಕಾರ್ಡ್ ನಲ್ಲಿ ಇದೆಯಲ್ಲ. ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿದ್ದೇನೆ. ಅವರೇ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಈಗ ಯಾಕೆ ಉಲ್ಟಾ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಬದಲಾವಣೆ ಮಾಡಿಸಿ ಬಿಜೆಪಿಯವರೇ ಹೇಳಿಸಿರಬಹುದು ಎಂದರು. ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಟ್ಟರೆ ಕಾಂಗ್ರೆಸ್ ನವರು ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂಬ ಮಾಣಿಪ್ಪಾಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕೇಂದ್ರದಲ್ಲಿ ಅವರ ಸರ್ಕಾರವೇ ಇದೆ. ಸಿಬಿಐಗೆ ಕೊಡಲಿ ಎಂದಿದ್ದರು.