ಏ.27ರ ವೇಳೆಗೆ ರಾಜ್ಯದಲ್ಲಿ ನಿತ್ಯ 20,000 ಕೇಸ್‌!

ಏ.27ರ ವೇಳೆಗೆ ರಾಜ್ಯದಲ್ಲಿ ನಿತ್ಯ 20000 ಕೇಸ್‌!| ಕೋವಿಡ್‌ ಇಂಡಿಯಾ ಸ್ಟಡಿ ಗ್ರೂಪ್‌ ಅಧ್ಯಯನ ವರದಿ| ಕಠಿಣ ನಿರ್ಬಂಧ, ಎಚ್ಚರಿಕೆ ಇಲ್ಲದಿದ್ದರೆ ವೈರಸ್‌ ಸ್ಫೋಟ

By April 27 More Than 20000 Covid Cases Will Report Eeryday in Karnataka Says Study pod

ಬೆಂಗಳೂರು(ಏ.11): ರಾಜ್ಯ ಸರ್ಕಾರವು ಕಠಿಣ ನಿರ್ಬಂಧ ಹೇರದಿದ್ದರೆ ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಂಡು ನಿಯಮ ಪಾಲಿಸದಿದ್ದರೆ ಏಪ್ರಿಲ್‌ 27ರ ವೇಳೆಗೆ ರಾಜ್ಯದಲ್ಲಿ ನಿತ್ಯ 20 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣ ವರದಿಯಾಗಲಿವೆ ಎಂದು ಅಧ್ಯಯನವೊಂದು ಎಚ್ಚರಿಸಿದೆ.

ಕೇಂದ್ರ ಆರೋಗ್ಯ ಇಲಾಖೆಯ ತಜ್ಞರ ಸಹಯೋಗದೊಂದಿಗೆ ಕೋವಿಡ್‌ ಇಂಡಿಯಾ-19 ಸ್ಟಡಿ ಗ್ರೂಪ್‌ ವತಿಯಿಂದ ನಡೆಸಿದ ಅಧ್ಯಯನದಲ್ಲಿ ಈ ವಿಷಯ ತಿಳಿದು ಬಂದಿದ್ದು, ಏಪ್ರಿಲ್‌ 27ರ ವೇಳೆಗೆ ನಿತ್ಯ 20,359 ಹಾಗೂ 29ರ ವೇಳೆಗೆ ನಿತ್ಯ 25,264 ಪ್ರಕರಣಗಳು ವರದಿಯಾಗಲಿವೆ ಎಂದು ಅಂದಾಜಿಸಲಾಗಿದೆ.

ಏ.6ರವರೆಗಿನ ರಾಜ್ಯದಲ್ಲಿನ ಸೋಂಕು ಪರೀಕ್ಷೆ, ಪ್ರಕರಣ ಹಾಗೂ ಚೇತರಿಕೆ ಆಧರಿಸಿ, ಯಾವುದೇ ಕಠಿಣ ಕ್ರಮ ಕೈಗೊಳ್ಳದಿದ್ದರೆ ಏ.27ರ ವೇಳೆಗೆ ರಾಜ್ಯದಲ್ಲಿ ಎಷ್ಟುಪ್ರಕರಣ ವರದಿಯಾಗಬಹುದು ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಪ್ರಕಟಿಸಲಾಗಿದೆ.

ವರದಿ ಪ್ರಕಾರ, ಏ.6ರ ವೇಳೆಗೆ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.33.42ರಷ್ಟುಮಂದಿಗೆ ರಾಜ್ಯ ಸರ್ಕಾರವು ಕೊರೋನಾ ಪರೀಕ್ಷೆ ನಡೆಸಿದೆ. ಏ.6ರಂದು 6,976 ಪ್ರಕರಣ ರಾಜ್ಯದಲ್ಲಿ ವರದಿಯಾಗಿದ್ದು, ಒಟ್ಟು ಸೋಂಕು ಏ.6ರವರೆಗೆ 10,33,560 (10.33 ಲಕ್ಷ)ಕ್ಕೆ ತಲುಪಿತ್ತು. ಇದೀಗ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದ್ದು ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಏ.27ರ ವೇಳೆಗೆ ಒಟ್ಟು ಸೋಂಕು 12.58 ಲಕ್ಷಕ್ಕೆ ಹೆಚ್ಚಾಗಲಿದೆ. ಏ.29ರ ವೇಳೆಗೆ 13,27,356ಕ್ಕೆ (13.27 ಲಕ್ಷ) ತಲುಪಲಿದೆ ಎಂದು ಹೇಳಿದೆ. ಈ ಮೂಲಕ ಏ.6 ರಿಂದ ಏ.29ರ ವೇಳೆಗೆ 23 ದಿನಗಳ ಅವಧಿಯಲ್ಲಿ ಬರೋಬ್ಬರಿ 2.94 ಲಕ್ಷ ಪ್ರಕರಣಗಳು ವರದಿಯಾಗಲಿವೆ ಎಂದು ಭ್ರಮರ್‌ ಮುಖರ್ಜಿ ತಂಡದ ಅಧ್ಯಯನ ವರದಿ ತಿಳಿಸಿದೆ.

ಎಚ್ಚೆತ್ತುಕೊಳ್ಳದಿದ್ದರೆ ಸ್ಫೋಟ ಖಚಿತ:

ಈ ಬಗ್ಗೆ ರಾಜ್ಯ ಸರ್ಕಾರದ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ್‌ ಬಾಬು ಪ್ರತಿಕ್ರಿಯಿಸಿದ್ದು, ಕೇಂದ್ರ ಕೊರೋನಾ ತಜ್ಞರ ತಂಡದ ಸಹಯೋಗದೊಂದಿಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಆಧರಿಸಿ ಕೋವಿಡ್‌ 19 ಸ್ಟಡಿ ಗ್ರೂಪ್‌ನವರು ಈ ಅಧ್ಯಯನ ನಡೆಸಿದ್ದಾರೆ. ಖಾಸಗಿ ಹಾಗೂ ಸರ್ಕಾರ ಸಹಭಾಗಿತ್ವದಲ್ಲಿ ನಡೆಸಿರುವ ಅಧ್ಯಯನದ ಪ್ರಕಾರ ಏ.27ರ ವೇಳೆಗೆ ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರ ಮಟ್ಟದಲ್ಲಿ ಹೆಚ್ಚಾಗಲಿದೆ. ಹೀಗಾಗಿ ಸರ್ಕಾರವು ಕೂಡಲೇ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಿ ಕೊರೋನಾ ನಿಯಂತ್ರಿಸಬೇಕು. ಹೆಚ್ಚೆಚ್ಚು ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು. ಸೋಂಕಿತರನ್ನು ಪ್ರತ್ಯೇಕವಾಗಿಟ್ಟು ಬೇರೆಯವರಿಗೆ ಹರಡದಂತೆ ತಡೆಯಬೇಕು. ಮತ್ತೊಂದು ಲಾಕ್ಡೌನ್‌ ಬೇಡ ಎನ್ನುವುದಾದರೆ ಸಾರ್ವಜನಿಕರು ಕೊರೋನಾ ನಿಯಮಾವಳಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಮನವಿ ಮಾಡಿದರು.

ವರದಿಯಲ್ಲಿ ಏನಿದೆ?

- ರಾಜ್ಯ ಸರ್ಕಾರ ಕಠಿಣ ನಿರ್ಬಂಧ ಹೇರದಿದ್ದರೆ ಮತ್ತು ಜನರು ಕೊರೋನಾ ನಿಯಮ ಪಾಲಿಸದಿದ್ದರೆ ಕೇಸು ಹೆಚ್ಚಳ

- ಏ.27ರ ವೇಳೆಗೆ ನಿತ್ಯ 20,359 ಹಾಗೂ ಏ.29ರ ವೇಳೆಗೆ ನಿತ್ಯ 25,264 ಪ್ರಕರಣಗಳು ವರದಿಯಾಗಲಿವೆ

- ಈ ತಿಂಗಳಾಂತ್ಯದ ಒಳಗೆ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 13.27 ಲಕ್ಷಕ್ಕೆ ಏರಿಕೆಯಾಗಲಿದೆ

- ಸೋಂಕು ಹೆಚ್ಚಳ ತಡೆಯಲು ಸರ್ಕಾರ ಹೆಚ್ಚೆಚ್ಚು ಪರೀಕ್ಷೆ ನಡೆಸಿ, ಸೋಂಕಿತರನ್ನು ಐಸೋಲೇಟ್‌ ಮಾಡಬೇಕು

Latest Videos
Follow Us:
Download App:
  • android
  • ios