ಮಾರ್ಗಸೂಚಿ ದರ ಶೇ.25ರಷ್ಟು ಹೆಚ್ಚಳಕ್ಕೆ ಮುದ್ರಾಂಕ ಇಲಾಖೆ ಪ್ರಸ್ತಾವ ರೆಡಿ, 4 ವರ್ಷಗಳ ಬಳಿಕ ಮಾರ್ಗಸೂಚಿ ಬೆಲೆ ಏರಿಕೆಗೆ ಸಿದ್ಧತೆ, ಸರ್ಕಾರ ಒಪ್ಪುತ್ತಾ?.
ಬೆಂಗಳೂರು(ಜೂ.13): ರಾಜ್ಯಾದ್ಯಂತ ಆಸ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ಹಾಲಿ ಇರುವ ಭೂಮಿಯ ಮಾರ್ಗಸೂಚಿ ಬೆಲೆಯನ್ನು ಶೇ.20ರಿಂದ 25ರಷ್ಟು ಹೆಚ್ಚಳ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಶೀಘ್ರದಲ್ಲೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಇಲಾಖೆಯ ಅಧಿಕಾರಿಗಳು ಸಜ್ಜಾಗಿದ್ದಾರೆ. ಇದಕ್ಕೆ ಸರ್ಕಾರವೇನಾದರೂ ಒಪ್ಪಿ ಮಾರ್ಗಸೂಚಿ ಬೆಲೆ ಹೆಚ್ಚಾದರೆ ಸಹಜವಾಗಿಯೇ ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳು ಏರಿಕೆ ಕಾಣಲಿವೆ. ಇದರಿಂದ ರಾಜ್ಯದಲ್ಲಿ ಯಾವುದೇ ರೀತಿಯ ಜಮೀನು, ನಿವೇಶನ, ಮನೆ, ಕಟ್ಟಡಗಳ ಖರೀದಿ ಇನ್ನಷ್ಟು ದುಬಾರಿಯಾಗುವುದು ನಿಶ್ಚಿತ.
ವಿದ್ಯುತ್ ಬಿಲ್ ಡಬಲ್: ಹಣ ಕಟ್ಟದಿರಲು ಜನರ ನಿರ್ಧಾರ
ನೋಂದಣಿ ಮತ್ತು ಮುದ್ರಾಂಕ ನಿಯಮಗಳ ಪ್ರಕಾರ, ಪ್ರತಿ ವರ್ಷ ಭೂಮಿಯ ಮಾರ್ಗಸೂಚಿ ದರ ಹೆಚ್ಚಳ ಮಾಡಲು ಅವಕಾಶವಿದೆ. ಆದರೆ, ಕೋವಿಡ್ ಕಾರಣದಿಂದ 2019ರಿಂದ ಮಾರ್ಗಸೂಚಿ ದರ ಹೆಚ್ಚಳ ಮಾಡಿಲ್ಲ. ಕೋವಿಡ್ ಅವಧಿಯಲ್ಲಿ ಆಸ್ತಿ ನೋಂದಣಿ ಕುಸಿದಿದ್ದರಿಂದ ಹಿಂದಿನ ಸರ್ಕಾರ ಕಳೆದ ಎರಡು ವರ್ಷಗಳ ಕಾಲ ಮಾರ್ಗಸೂಚಿ ದರ ಕಡಿಮೆ ಮಾಡಿತ್ತು. ಈಗ ಸಮಾಜ ಕೋವಿಡ್‌ನಿಂದ ಸಾಮಾನ್ಯ ಸ್ಥಿತಿಗೆ ಮರಳಿದೆ. ಹಾಗಾಗಿ ಈ ವರ್ಷ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಪ್ರಸ್ತಾವನೆಯನ್ನು ಸರ್ಕಾರ ಒಪ್ಪಬಹುದು, ಬಿಡಬಹುದು. ಅಂತಿಮ ತೀರ್ಮಾನವನ್ನು ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿ ಅವರು ತೆಗೆದುಕೊಳ್ಳುತ್ತಾರೆ ಎಂದು ಇಲಾಖೆಯ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಚುನಾವಣೆಗೆ ಮುನ್ನ ನೀಡಿದ್ದ ಐದೂ ಭರವಸೆಗಳನ್ನು ಅನುಷ್ಠಾನಗೊಳಿಸಿ ಆದೇಶಿಸಿರುವುದರಿಂದ ಸುಮಾರು 60 ಸಾವಿರ ಕೋಟಿ ರು.ಗಳಷ್ಟುಅನುದಾನ ಈ ಯೋಜನೆಗಳಿಗೆ ಬೇಕಾಗುತ್ತದೆ. ಹಾಗಾಗಿ ಆಸ್ತಿ ನೋಂದಣಿ, ಕಂದಾಯ, ಅಬಕಾರಿ ಸೇರಿದಂತೆ ಬೇರೆ ಬೇರೆ ಮೂಲಗಳಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಇಲಾಖೆ ಸಲ್ಲಿಸಲಿರುವ ಮಾರ್ಗಸೂಚಿ ದರ ಹೆಚ್ಚಳದ ಪ್ರಸ್ತಾವನೆಗೆ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು.
ವಿದ್ಯುತ್ ಬಿಲ್ ಕಟ್ಟಬೇಡಿ, ಸಂಪರ್ಕ ಕಡಿತಗೊಳಿಸಿದ್ರೆ ನಾವಿದ್ದೇವೆ: ನಳಿನ್ ಕುಮಾರ್ ಕಟೀಲ್
ನಿಯಮಗಳ ಪ್ರಕಾರ, ಪ್ರತಿವರ್ಷ ಮಾರ್ಗಸೂಚಿ ಬೆಲೆ ಶೇ.15ರಷ್ಟು ಹೆಚ್ಚಿಸಲು ಅವಕಾಶವಿದೆ. ಆದರೆ, ಕೆಲವು ಸಂದರ್ಭದಲ್ಲಿ ಸರ್ಕಾರದ ವಿವೇಚನೆಯಂತೆ ಹೆಚ್ಚು ಅಥವಾ ಕಡಿಮೆ ಮಾಡುವ ಇಲ್ಲವೇ ಮಾಡದಿರುವ ಬಗ್ಗೆ ನಿರ್ಧಾರವಾಗುತ್ತದೆ. ಆದರೆ, ಮಾರ್ಗಸೂಚಿ ಬೆಲೆ 2019ರಿಂದ ಜಾಸ್ತಿಯಾಗಿಲ್ಲ. ಹಾಗಾಗಿ ಈ ಬಾರಿ ಹೆಚ್ಚಳ ಮಾಡಲು ಸರ್ಕಾರವನ್ನು ಕೋರಲು ಪ್ರಸ್ತಾವನೆ ಸಿದ್ಧಪಡಿಸಿದ್ದೇವೆ. ಅಂತಿಮ ತೀರ್ಮಾನ ಸರ್ಕಾರಕ್ಕೆ ಬಿಟ್ಟಿದ್ದು ಎನ್ನುವುದು
ಅಧಿಕಾರಿಗಳ ಉವಾಚ.
ರಾಜ್ಯದಲ್ಲಿ ಸದ್ಯ 255 ಉಪ ನೋಂದಣಿ ಕಚೇರಿಗಳಿವೆ. ಅವುಗಳ ಪೈಕಿ ಶೇ.10 ರಷ್ಟುಕಚೇರಿಗಳ ವ್ಯಾಪ್ತಿಯಲ್ಲಿ ಮಾತ್ರ ಮಾರ್ಗಸೂಚಿ ಬೆಲೆ ಅತ್ಯಂತ ಕಡಿಮೆ ಇದೆ. ಪ್ರಸ್ತಾವನೆಗೆ ಒಪ್ಪಿಗೆ ದೊರೆತರೆ ಮುಂದೆ ಎಲ್ಲ ಕಡೆಯೂ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
