ಬೆಂಗಳೂರು(ನ.16): ದೀಪಾವಳಿ ಹಬ್ಬದ ಮೊದಲ ದಿನವಾದ ಶನಿವಾರದಂದು ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮಾರುಕಟ್ಟೆಯಲ್ಲಿ ಗ್ರಾಹಕರು ಮುಗಿಬಿದ್ದು ವಸ್ತುಗಳನ್ನು ಖರೀದಿಸಿದ್ದರೆ, ಭಾನುವಾರದಂದು ಮಾತ್ರ ಬಹುತೇಕ ಮಾರುಕಟ್ಟೆಗಳು ಗ್ರಾಹಕರಿಲ್ಲದೆ ಮಂಕಾಗಿದ್ದವು.

ಕೊರೋನಾದಿಂದಾಗಿ ಸಂತೆ ಮಾರುಕಟ್ಟೆಗಳಲ್ಲಿ ವಹಿವಾಟು ಕುಸಿತವಾಗಿದೆ. ಹೂವು-ತರಕಾರಿ ಬೆಲೆ ಏರಿಕೆ ಗ್ರಾಹಕರನ್ನು ಕಂಗೆಡಿಸಿದ್ದು ಎಲ್ಲೂ ಹಬ್ಬದ ವ್ಯಾಪಾರದ ಸಡಗರವೂ ಕಂಡುಬಂದಿಲ್ಲ. ಸಿಹಿ ತಿಂಡಿಗಳ ಮಾರಾಟ ಮಾತ್ರ ಸಮಾಧಾನಕರವಾಗಿದ್ದು, ಕಳೆದ ಬಾರಿಯಂತೆಯೇ ಬೇಡಿಕೆ ಇದೆ.

ಮಹಾಮಾರಿ ಕೊರೋನಾ ಮರೆತು ಶಾಪಿಂಗ್‌ನಲ್ಲಿ ಗ್ರಾಹಕರು ಬ್ಯುಸಿ...!

ಧಾರವಾಡ, ಉತ್ತರಕನ್ನಡ, ಗದಗ, ಹಾವೇರಿಗಳ ಮಾರುಕಟ್ಟೆಯಲ್ಲಿ ಜನಜಂಗುಳಿ ಇದ್ದರೆ, ಬಳ್ಳಾರಿ, ಕೊಪ್ಪಳಗಳಲ್ಲಿ ಮಾರುಕಟ್ಟೆನೀರಸವಾಗಿತ್ತು. ಬೀದರ್‌ನಲ್ಲಿ ದಸರಾ ಸಂದರ್ಭದಲ್ಲಿ ಆಗಿರುವಷ್ಟೂವ್ಯಾಪಾರ ನಡೆದಿಲ್ಲ ಎಂದು ಹೂವುಹಣ್ಣಿನ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ರಾಯಚೂರಿನಲ್ಲಿ ಪೂಜಾ ಸಾಮಗ್ರಿಗಳು, ಹಣ್ಣು, ಹೂವು ಖರೀದಿಯು ಜೋರಾಗಿ ನಡೆಯಿತು. ದಾವಣಗೆರೆ, ಯಲ್ಲಿ ಜನರು ಕೊರೋನಾ ವೈರಸ್‌ ಭೀತಿ ಇಲ್ಲದೆ ವ್ಯವಹರಿಸುತ್ತಿದ್ದರು. ಮಾಸ್ಕ್‌ ಇಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನರು ಹಬ್ಬದ ಖರೀದಿಯಲ್ಲಿ ತೊಡಗಿದ್ದು ಸಾಮಾನ್ಯವಾಗಿತ್ತು. ಇನ್ನುಳಿದಂತೆ ಚಿತ್ರದುರ್ಗ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಮಂಡ್ಯ, ಕೋಲಾರ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿನ ವ್ಯಾಪಾರ ವಹಿವಾಟು ಅಷ್ಟಾಗಿ ನಡೆದಿಲ್ಲ ಎಂದು ವರದಿಯಾಗಿದೆ.

ಯಾರಿಗಂತ ದಂಡ ಹಾಕಬೇಕು?: ಅಧಿಕಾರಿ ಅಳಲು

ಧಾರವಾಡದ ಮಾರುಕಟ್ಟೆಯಲ್ಲಿ ದೀಪಾವಳಿ ಸಮಯದಲ್ಲಿ ಯಾರೊಬ್ಬರೂ ಕೋವಿಡ್‌ ನಿಯಮ ಪಾಲಿಸಲಿಲ್ಲ. ಜಿಲ್ಲಾಡಳಿತ ಕಡ್ಡಾಯ ಮಾಸ್ಕ್‌ ಧರಿಸಲು ಆದೇಶ ಮಾಡಿದರೂ ಯಾರೂ ಪಾಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಯೊಬ್ಬರು ‘ಹಬ್ಬದ ನಿಮಿತ್ತ ಲಕ್ಷಾಂತರ ಜನರು ಓಡಾಟದ ಸಂದರ್ಭದಲ್ಲಿ ಯಾರಿಗಂತ ದಂಡ ಹಾಕಬೇಕು? ಜನರೇ ತಿಳಿದುಕೊಳ್ಳಬೇಕು’ ಎಂದು ತಮ್ಮ ಅಳಲು ತೋಡಿಕೊಂಡರು.