ಬೆಂಗಳೂರು (ಏ.10): ಆರನೇ ವೇತನ ಆಯೋಗದ ಬೇಡಿಕೆ ಈಡೇರದೆ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ. ಏ.12ರಂದು ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸಾರಿಗೆ ನೌಕರರ ಕುಟುಂಬದ ಸದಸ್ಯರು ತಟ್ಟೆ-ಲೋಟ ಬಡಿದು ಸತ್ಯಾಗ್ರಹ ಮಾಡಲಿದ್ದಾರೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ. 
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೊಂಡು ಹಠ ಬಿಟ್ಟು ಸಾರಿಗೆ ನೌಕರರ ಬೇಡಿಕೆ ಈಡೇರಿಸಬೇಕು. ಸಾರಿಗೆ ನೌಕರರ ವಿಚಾರದಲ್ಲಿ ಮಲತಾಯಿ ಧೋರಣೆ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

KSRTC ಬಸ್‌ ಓಡಿಸಲು ಬಿಡಲ್ಲ: ಖಾಸಗಿ ಬಸ್‌ ಸಿಬ್ಬಂದಿ ಪಟ್ಟು..! ..

 ರಾಜ್ಯ ಸರ್ಕಾರ ಆರನೇ ವೇತನ ಆಯೋಗದ ಶಿಫಾರಸಿನ ಅನ್ವಯ ವೇತನ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಈ ನಿರ್ಧಾರಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವೈಜ್ಞಾನಿಕ ಕಾರಣ ನೀಡಬೇಕು. ಅದಕ್ಕೂ ಮುನ್ನ ನಮ್ಮ ಬೇಡಿಕೆ ಕೇಳಿ ಬಳಿಕ ಪ್ರತಿಕ್ರಿಯೆ ನೀಡಬೇಕು. ಸಾರಿಗೆ ನೌಕರರಿಗೆ ಯುಗಾದಿ ಹಬ್ಬಕ್ಕೆ ಬೋನಸ್‌ ಇಲ್ಲ. ಮಾಚ್‌ರ್‍ ತಿಂಗಳ ವೇತನವೂ ಇಲ್ಲ. ಹೀಗಾದರೆ ನೌಕರರು ಹಬ್ಬ ಮಾಡುವುದು ಹೇಗೆ ಪ್ರಶ್ನಿಸಿದರು.

ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಶನಿವಾರ ಬೆಳಗಾವಿ ಮತ್ತು ಕಲಬುರಗಿಯಲ್ಲಿ ಸಾರಿಗೆ ನೌಕರರ ಮುಖಂಡರ ಸಭೆ ಕರೆಯಲಾಗಿದೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಕೋಡಿಹಳ್ಳಿ ಹೇಳಿದರು.