ಶೀಘ್ರವೇ ಬಸ್ ಪ್ರಯಾಣ ದರ ಏರಿಕೆ?: ಶೇ.10ರಿಂದ 15ರಷ್ಟು ಟಿಕೆಟ್ ಹೆಚ್ಚಳ
ಲೋಕಸಭಾ ಚುನಾವಣೆ ನಂತರ ಇದೀಗ ಬೆಲೆ ಏರಿಕೆಯ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಮೊದಲಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ಚರ್ಚೆ ಆರಂಭವಾಗಿದೆ.
ಗಿರೀಶ್ ಗರಗ
ಬೆಂಗಳೂರು (ಜೂ.08): ಲೋಕಸಭಾ ಚುನಾವಣೆ ನಂತರ ಇದೀಗ ಬೆಲೆ ಏರಿಕೆಯ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಮೊದಲಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ಚರ್ಚೆ ಆರಂಭವಾಗಿದೆ. ನಾಲ್ಕೂ ನಿಗಮಗಳು ಕನಿಷ್ಠ ಶೇ.10ರಿಂದ 15ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಶೀಘ್ರವೇ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವ ಸಾಧ್ಯತೆಗಳಿವೆ. ಡೀಸೆಲ್, ಬಿಡಿ ಭಾಗಗಳ ದರ ಹೆಚ್ಚಳ, ಸಿಬ್ಬಂದಿ ವೇತನ ಹೆಚ್ಚಳ ಸೇರಿದಂತೆ ವರ್ಷದಿಂದ ವರ್ಷಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಖರ್ಚು ಹೆಚ್ಚುತ್ತಿದೆ.
ಅಲ್ಲದೆ, ಆದಾಯಕ್ಕಿಂತ ಖರ್ಚು ಹೆಚ್ಚಾದ ಪರಿಣಾಮ ಕಳೆದ 5 ವರ್ಷಗಳಲ್ಲಿ ನಿಗಮಗಳ ಸಾಲ ಮತ್ತು ಹೊಣೆಗಾರಿಕೆ 4 ಸಾವಿರ ಕೋಟಿ ರು.ಗೂ ಹೆಚ್ಚಿಗೆಯಾಗಿದೆ. ಅದರ ಜತೆಗೆ ಪ್ರಯಾಣಿಕರ ಬೇಡಿಕೆಗನುಗುಣವಾಗಿ ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ನಿಗಮಗಳ ಆದಾಯದಲ್ಲಿ ಹೆಚ್ಚಳವಾಗಿಲ್ಲ. ಹೀಗಾಗಿಯೇ ಇದೀಗ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿದ್ದು, ನಿಗಮಗಳಿಂದ ಪ್ರಸ್ತಾವನೆ ಬಂದರೆ ಪರಿಶೀಲನೆ ನಡೆಸಲು ಸರ್ಕಾರ ಕೂಡ ಚಿಂತನೆ ನಡೆಸಿದೆ.
ಮಂತ್ರಿಗಿರಿಗಾಗಿ ಬಿಜೆಪಿ ಮೇಲೆ ಒತ್ತಡ ಹೇರಿಲ್ಲ: ಎಚ್.ಡಿ.ಕುಮಾರಸ್ವಾಮಿ
ಶೇ.39 ಪ್ರಯಾಣ ದರ ಹೆಚ್ಚಳವಾಗಬೇಕಿತ್ತು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಾಲ್ಕೂ ನಿಗಮಗಳ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಬೇಕಾಗಿದೆ. ಆದರೆ, 2020ರಲ್ಲಿ ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳ ಬಸ್‌ಗಳ ಪ್ರಯಾಣ ದರವನ್ನು ಶೇ.12ರಷ್ಟು ಹೆಚ್ಚಿಸಲಾಗಿತ್ತು. ಅದನ್ನು ಬಿಟ್ಟರೆ ಆನಂತರ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರ ಮನಸ್ಸು ಮಾಡಿಲ್ಲ. ಒಂದು ವೇಳೆ ನಿಯಮದಂತೆ ಹೆಚ್ಚಳ ಮಾಡಿದ್ದರೆ ಕಳೆದ ನಾಲ್ಕು ವರ್ಷಗಳಲ್ಲಿ ಶೇ.39ರಷ್ಟು ಪ್ರಯಾಣ ದರ ಹೆಚ್ಚಿಸಬೇಕಿತ್ತು.
ವಾರ್ಷಿಕ 1 ಸಾವಿರ ಕೋಟಿ ರು. ಹೆಚ್ಚುವರಿ ವೆಚ್ಚ: 2020ರ ವೇಳೆಗೆ ಡೀಸೆಲ್ ಬೆಲೆ ಪ್ರತಿ ಲೀ.ಗೆ 61 ರು. ಆಸುಪಾಸಿನಲ್ಲಿತ್ತು. ಈಗ ಪ್ರತಿ ಲೀ.ಗೆ 88 ರು.ಗೆ ತಲುಪಿದೆ. ಅಂದರೆ ನಾಲ್ಕು ವರ್ಷಗಳಲ್ಲಿ 27 ರು. ಹೆಚ್ಚಳವಾದಂತಾಗಿದೆ. ಅಲ್ಲದೆ, ಸಿಬ್ಬಂದಿ ವೇತನ ಸೇರಿದಂತೆ ಇನ್ನಿತರ ಭತ್ಯೆ ಶೇ.20ರಷ್ಟು ಹೆಚ್ಚಳವಾಗಿದೆ. ಹಾಗೆಯೇ, ಬಿಡಿ ಭಾಗಗಳ ದರ ಹೆಚ್ಚಳ, ಟೋಲ್ ಶುಲ್ಕಗಳ ಹೆಚ್ಚಳ ಹೀಗೆ ಬೆಲೆ ಏರಿಕೆಯು ನಿಗಮಗಳನ್ನು ಆರ್ಥಿಕವಾಗಿ ಕುಗ್ಗಿಸುತ್ತಿವೆ. ಬೆಲೆ ಏರಿಕೆಗಳಿಂದಾಗಿ ಕೆಎಸ್ಸಾರ್ಟಿಸಿ ಒಂದರಲ್ಲೇ 2020ರಲ್ಲಿ ಡೀಸೆಲ್‌ಗೆ ಪ್ರತಿದಿನ 3.10 ಕೋಟಿ ರು. ಖರ್ಚಾಗುತ್ತಿತ್ತು. ಈಗ ಅದು 5.30 ಕೋಟಿ ರು.ಗೆ ಹೆಚ್ಚಳವಾಗಿದೆ. ಅಲ್ಲದೆ, ನಿಗಮದ ಆದಾಯದ ಶೇ.45ರಷ್ಟನ್ನು ಡೀಸೆಲ್‌ಗಾಗಿಯೇ ವ್ಯಯಿಸುವಂತಾಗಿದೆ. ಹಾಗೆಯೇ, ಸಿಬ್ಬಂದಿ ವೇತನಕ್ಕೆ ವಾರ್ಷಿಕ 300 ಕೋಟಿ ರು. ಹೆಚ್ಚಿನ ವೆಚ್ಚ ಮಾಡುವಂತಾಗಿದೆ. ಒಟ್ಟಾರೆ ಕೆಎಸ್ಸಾರ್ಟಿಸಿ ಒಂದು ನಿಗಮಕ್ಕೇ ವಾರ್ಷಿಕ 1 ಸಾವಿರ ಕೋಟಿ ರು. ಹೆಚ್ಚುವರಿ ವೆಚ್ಚವುಂಟಾಗುತ್ತಿದೆ.
ನಾನು ಈಗ 24*7 ರಾಜಕಾರಣಿ, ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ: ನಿಖಿಲ್ ಕುಮಾರಸ್ವಾಮಿ
ನಿಗಮಗಳು ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲನೆ: ಶಕ್ತಿ ಯೋಜನೆ ಜಾರಿ ನಂತರದಿಂದ ನಾಲ್ಕೂ ಸಾರಿಗೆ ನಿಗಮಗಳ ಆದಾಯದಲ್ಲಿ ಹೆಚ್ಚಳವಾಗಿದೆ. ಆದರೆ, ಅದು ನಿಗಮಗಳ ನಷ್ಟ ತಗ್ಗಿಸುವುದು ಅಥವಾ ನಿಗಮಗಳ ವೆಚ್ಚವನ್ನು ಸರಿದೂಗಿಸುವಂತಿಲ್ಲ. ಅದಕ್ಕೆ ಪ್ರಯಾಣ ದರ ಹೆಚ್ಚಳವೇ ಪರಿಹಾರವಾಗಿದೆ. ಹೀಗಾಗಿ ನಿಗಮಗಳ ಆಡಳಿತ ಮಂಡಳಿಗಳು ಸಭೆ ನಡೆಸಿ, ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರ ಪರಿಶೀಲಿಸಿ ತೀರ್ಮಾನಿಸಲಿದೆ. ನಿಗಮಗಳು ಶೇ.25ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದರೂ, ಅಂತಿಮವಾಗಿ ಶೇ.10ರಿಂದ 12ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರ ಅನುಮತಿಸಬಹುದು ಎಂದು ಮೂಲಗಳು ತಿಳಿಸಿವೆ.