ನಬಾರ್ಡ್‌ನಿಂದ ಕೃಷಿ ಕಡಿತ; ರೈತರ ಪರ ಎನ್ನುವ ಕುಮಾರಸ್ವಾಮಿ ಈಗ್ಯಾಕೆ ಬಾಯಿಬಿಡುತ್ತಿಲ್: ಚಲುವರಾಯಸ್ವಾಮಿ ಕಿಡಿ
ಕೃಷಿ ಸಾಲಕ್ಕಾಗಿ ನಬಾರ್ಡ್ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ಆರ್ಥಿಕ ಸೌಲಭ್ಯದಲ್ಲಿ ಕಡಿತವಾಗಿರುವ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ನ.20): ಕೃಷಿ ಸಾಲಕ್ಕಾಗಿ ನಬಾರ್ಡ್ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ಆರ್ಥಿಕ ಸೌಲಭ್ಯದಲ್ಲಿ ಕಡಿತವಾಗಿರುವ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ನಡೆದ ಜಂಟಿ ಪತ್ರಿಕೋಷ್ಠಿಯಲ್ಲಿ ಮಾತನಾಡಿದ ಅವರು, ನಬಾರ್ಡ್‌ನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ. ಕಳೆದ ಬಾರಿ ರಾಜ್ಯಕ್ಕೆ 5,600 ಕೋಟಿ ರು. ಸಾಲ ನೀಡಿದ್ದ ನಬಾರ್ಡ್, ಈ ವರ್ಷ 2,340 ಕೋಟಿ ರು. ಸಾಲ ನೀಡಿದೆ. ಸಾಲದ ಪ್ರಮಾಣ ಶೇ.58 ರಷ್ಟು ಕಡಿತ ಮಾಡಲಾಗಿದೆ. ಕೃಷಿ ಸಾಲದ ಬಾಬ್ತಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.
ನಬಾರ್ಡ್‌ನಿಂದಲೂ ಕರ್ನಾಟಕಕ್ಕೆ ಘೋರ ಅನ್ಯಾಯ: ಸಚಿವ ಡಿ.ಸುಧಾಕರ್
ಸಚಿವ ರಾಜಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರೈತರು ಆರ್ಥಿಕವಾಗಿ ಮುಂದುವರೆಯಬೇಕು ಎಂಬ ಕಾರಣಕ್ಕಾಗಿ ಪ್ರತಿ ವರ್ಷ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ರಿಯಾಯಿತಿ ಬಡ್ಡಿ ದರದ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದಕ್ಕಾಗಿ ನಬಾರ್ಡ್, ರಾಜ್ಯ ಸರ್ಕಾರಕ್ಕೆ ಶೇ.4.5ರ ಬಡ್ಡಿದರದಲ್ಲಿ ಸಾಲ ರೂಪದ ಆರ್ಥಿಕ ನೆರವು ನೀಡುತ್ತಿತ್ತು. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಮತ್ತು ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡಿ ಕೃಷಿ ಚಟುವಟಿಕೆಗಳನ್ನು ಬಲವರ್ಧನೆಗೊಳಿಸಲಾಗುತ್ತಿತ್ತು ಎಂದು ವಿವರಿಸಿದರು.
ಆದರೆ ಈಗ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ ಹೊರತಾಗಿಯೂ ಸಾಲದ ಪ್ರಮಾಣವನ್ನು ಕಡಿತ ಮಾಡಲಾಗಿದೆ. ಈ ಕ್ರಮದಿಂದ ರೈತರಿಗೆ ಕೃಷಿ ಸಾಲ ನೀಡಲು ಕಷ್ಟವಾಗುತ್ತಿದೆ. ಸಹಕಾರ ವ್ಯವಸ್ಥೆಯಲ್ಲಿ ಸಾಲ ದೊರೆಯದೇ ಇದ್ದರೆ ರೈತರು ಖಾಸಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗುತ್ತಾರೆ ಹಾಗೂ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಹೇಳಿದರು.
ರೈತರು ಆರ್ಥಿಕವಾಗಿ ಸದೃಢವಾಗಬೇಕಾದರೆ ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗಬೇಕು. ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗಳು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 2024-25ನೇ ಸಾಲಿಗೆ 35 ಲಕ್ಷ ರೈತರಿಗೆ 25 ಸಾವಿರ ಕೋಟಿ ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ 2023-24ನೇ ಸಾಲಿಗೆ ಅಲ್ಪಾವಧಿ ಕೃಷಿ ಪತ್ತಿನ ಸಂಸ್ಥೆಗಳ ಮೂಲಕ 22,902 ಕೋಟಿ ರು. ಅಲ್ಪಾವಧಿ ಸಾಲ ವಿತರಿಸಲಾಗಿತ್ತು. ರಾಜ್ಯ ಅಪೆಕ್ಸ್ ಬ್ಯಾಂಕ್ 2024-25ನೇ ಸಾಲಿಗೆ 9,162 ಕೋಟಿ ರು.ಗಳ ರಿಯಾಯಿತಿ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಮಂಜೂರು ಮಾಡಲು ಕೋರಲಾಗಿದೆ. ಆದರೆ, ನಬಾರ್ಡ್ ಪತ್ರದಲ್ಲಿ ರಾಜ್ಯಕ್ಕೆ 2,340 ಕೋಟಿ ರು. ಮಂಜೂರು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಹಿರಂಗವಾಗಿ ಹಣ ಹಂಚುವ ಕಾಂಗ್ರೆಸ್‌ಗೆ ಸಾಕ್ಷಿಗುಡ್ಡೆ ಬೇಕಾ?: ಅಶೋಕ್ ಕಿಡಿ
ಎಚ್‌ಡಿಕೆ ಯಾಕೆ ಬಾಯಿ ಬಿಡುತ್ತಿಲ್ಲ?:
ಸಚಿವ ಚಲುವರಾಯಸ್ವಾಮಿ ಮಾತನಾಡಿ, ರೈತರಿಗೆ ಶಕ್ತಿ ತುಂಬಲು ಸಹಕಾರ ಸಂಘಗಳಿದ್ದು, ಇವುಗಳಿಗೆ ಬಲ ತುಂಬಲು ನಬಾರ್ಡ್ ಇದೆ. 2020-21 ರಲ್ಲಿ 5500 ಕೋಟಿ ರು. ಸಾಲ ಬಂದಿದೆ. 2021-22 ರಲ್ಲಿ 5483 ಕೋಟಿ ರು., 2022-23 ರಲ್ಲಿ 5550 ಕೋಟಿ ರು. ಮತ್ತು 2023-24 ರಲ್ಲಿ 5600 ಕೋಟಿ ರು. ಬಂದಿದೆ. ಆದರೆ, ಈ ಬಾರಿ ಕೇವಲ 2340 ಕೋಟಿ ರು. ಬಂದಿದೆ. ರಾಜ್ಯದಲ್ಲಿ ಮೂವರು ಕೇಂದ್ರ ಸಚಿವರಿದ್ದಾರೆ. ರೈತರ ಪರ ಎನ್ನುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಇದ್ದಾರೆ. ಯಾಕೆ ಇದರ ಬಗ್ಗೆ ಅವರು ಬಾಯಿ ಬಿಡುತ್ತಿಲ್ಲ ಎಂದು ಕಿಡಿಕಾರಿದರು.