Asianet Suvarna News Asianet Suvarna News

ಕೆಎಸ್ಆರ್‌ಟಿಸಿಗೆ ಪುರುಷರಿಂದ ಬಂಪರ್‌ ಇನ್‌ಕಮ್: ನಿಗಮದ ಆದಾಯ ಶೇ.35ರಷ್ಟು ಹೆಚ್ಚಳ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮೊದಲು ಜಾರಿಯಾದ ಮಹಿಳೆಯರ ಉಚಿತ ಬಸ್‌ ಪ್ರಯಾಣದ ‘ಶಕ್ತಿ’ ಯೋಜನೆ ಅನುಷ್ಠಾನಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು, ಈವರೆಗೆ 223 ಕೋಟಿ ಮಹಿಳಾ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. 

Bumper income from men for KSRTC 35 percent increase in corporate income gvd
Author
First Published Jun 9, 2024, 11:31 AM IST

ಗಿರೀಶ್‌ ಗರಗ

ಬೆಂಗಳೂರು (ಜೂ.09): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮೊದಲು ಜಾರಿಯಾದ ಮಹಿಳೆಯರ ಉಚಿತ ಬಸ್‌ ಪ್ರಯಾಣದ ‘ಶಕ್ತಿ’ ಯೋಜನೆ ಅನುಷ್ಠಾನಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು, ಈವರೆಗೆ 223 ಕೋಟಿ ಮಹಿಳಾ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಜತೆಗೆ ಯೋಜನೆಗಾಗಿ 5,451 ಕೋಟಿ ರು. ವ್ಯಯಿಸಲಾಗಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ನಿಂದ ಘೋಷಿಸಲಾಗಿದ್ದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಸರ್ಕಾರ ರಚನೆಯಾದ ನಂತರ ಉಳಿದೆಲ್ಲಕ್ಕಿಂತ ಮೊದಲು ಶಕ್ತಿ ಯೋಜನೆ ಜಾರಿಗೊಳಿಸಲಾಯಿತು. 

ಆರಂಭದಲ್ಲಿ ಶಕ್ತಿ ಯೋಜನೆಗೆ ಸಾಕಷ್ಟು ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾದರೂ, ಮಹಿಳೆಯರು ಯೋಜನೆಯ ಲಾಭ ಪಡೆಯುವ ಮೂಲಕ ಯೋಜನೆ ಯಶಸ್ವಿಯಾಗುವಂತಾಯಿತು. ಅಲ್ಲದೆ, ನಿಗಮಗಳಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದಲ್ಲದೆ, ಆದಾಯವೂ ವೃದ್ಧಿಯಾಯಿತು. ಅದರಲ್ಲೂ ಕೆಎಸ್ಸಾರ್ಟಿಸಿ ನೀಡಿರುವ ಮಾಹಿತಿಯಂತೆ ಶಕ್ತಿ ಯೋಜನೆ ಜಾರಿ ನಂತರ ನಿಗಮದ ಆದಾಯ ಶೇ.35ರಷ್ಟು ಹೆಚ್ಚಳವಾಗಿದೆ. ಶಕ್ತಿ ಯೋಜನೆಗೂ ಮುನ್ನ ನಿಗಮಕ್ಕೆ ಮಾಸಿಕ ಸರಾಸರಿ 250 ಕೋಟಿ ರು. ಆದಾಯ ಬರುತ್ತಿತ್ತು. ಆದರೆ, ಶಕ್ತಿ ಜಾರಿ ನಂತರ ಆದಾಯದ ಪ್ರಮಾಣ ಸರಾಸರಿ 400 ಕೋಟಿ ರು. ಮೀರಿದೆ.

ನಾಗೇಂದ್ರ ರಾಜೀನಾಮೆ ಹಿನ್ನಲೆ: ಎಸ್‌ಟಿ ಕಲ್ಯಾಣ ಖಾತೆ ಸಚಿವ ಶಿವರಾಜ್‌ ತಂಗಡಗಿ ಹೆಗಲಿಗೆ?

ಶಕ್ತಿಯೇತರ ಆದಾಯವೇ ಹೆಚ್ಚು: ಶಕ್ತಿ ಯೋಜನೆ ಜಾರಿ ನಂತರದಿಂದ ನಿಗಮಗಳ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಭಾರೀ ಹೆಚ್ಚಳವಾಗಿದೆ. ಪ್ರಯಾಣಿಕರ ಸಂಖ್ಯೆಯ ಶೇ.60ರಿಂದ 70ರಷ್ಟು ಪ್ರಯಾಣಿಕರು ಮಹಿಳೆಯರಾಗಿದ್ದಾರೆ. ಆದರೆ, ಶಕ್ತಿಯಿಂದ ಬರುತ್ತಿರುವ ಆದಾಯಕ್ಕಿಂತ ಶಕ್ತಿಯೇತರ ಪ್ರಯಾಣಿಕರಿಂದ ಬರುವ ಆದಾಯವೇ ಹೆಚ್ಚಿದೆ. ಕೆಎಸ್ಸಾರ್ಟಿಸಿ ನಿಗಮದಲ್ಲಿ ಯೋಜನೆ ಜಾರಿ ನಂತರದಿಂದ ಈವರೆಗೆ ಅಂದರೆ 2023ರ ಜೂನ್‌ನಿಂದ 2024ರ ಮೇವರೆಗೆ ಶಕ್ತಿಯ ಆದಾಯ 2,044.59 ಕೋಟಿ ರು.ಗಳಾಗಿದ್ದರೆ, ಶಕ್ತಿಯೇತರ ಪ್ರಯಾಣಿಕರಿಂದ 2,764.67 ಕೋಟಿ ರು.ಗಳಾಗಿದೆ. ಅದರಂತೆ ಶಕ್ತಿಯಿಂದ ಬಂದ ಆದಾಯ ಶೇ.42.5ರಷ್ಟಿದ್ದರೆ, ಶಕ್ತಿಯೇತರ ಆದಾಯ ಶೇ.57.5ರಷ್ಟಿದೆ.

ಡಲ್‌ ಡೇಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕೂ ನಿಗಮಗಳ ಮಟ್ಟಿಗೆ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ಡಲ್‌ ಡೇಗಳೆಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಿರುತ್ತಿತ್ತು ಹಾಗೂ ಬಸ್‌ಗಳು ಶೇ.65ರಷ್ಟು ಮಾತ್ರ ಭರ್ತಿಯಾಗುತ್ತಿದ್ದವು. ಆದರೆ, ಈಗ ಎಲ್ಲ ದಿನಗಳು ಶೇ.85ರವರೆಗೆ ಭರ್ತಿಯಾಗುತ್ತಿದೆ. ಅಲ್ಲದೆ ಈ ಹಿಂದೆ ಪೀಕ್ ಅವರ್‌ ಅಂದರೆ ಬೆಳಗಿನ ಹೊತ್ತು ಹಾಗೂ ರಾತ್ರಿ ವೇಳೆಯಲ್ಲಿ ಮಾತ್ರ ಬಸ್‌ಗಳು ಶೇ.85ರಿಂದ 100ರಷ್ಟು ಭರ್ತಿಯಾಗುತ್ತಿದ್ದವು ಹಾಗೂ ಉಳಿದ ಅವಧಿಯಲ್ಲಿ ಶೇ.60ಕ್ಕಿಂತ ಕಡಿಮೆ ಪ್ರಯಾಣಿಕರಿರುತ್ತಿದ್ದರು. ಆದರೀಗ ಎಲ್ಲ ಅವಧಿಯಲ್ಲೂ ಶೇ.60ಕ್ಕಿಂತ ಹೆಚ್ಚಿನ ಪ್ರಯಾಣಿಕರು ಬಸ್‌ಗಳಲ್ಲಿರುತ್ತಿದ್ದಾರೆ.

ಸರ್ಕಾರದಿಂದ ಮೊದಲೇ ಹಣ ಪಾವತಿ: ಶಕ್ತಿ ಯೋಜನೆ ಯಶಸ್ಸನ್ನು ಗಮನಿಸಿರುವ ರಾಜ್ಯ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದಿಂದ ನಿಗಮಗಳಿಗೆ ಹಣ ಪಾವತಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ನಿಗಮಗಳ ಬೇಡಿಕೆಯಂತೆ ಶಕ್ತಿ ಯೋಜನೆಯ ಮೊತ್ತವನ್ನು ಮುಂಗಡವಾಗಿ ನಿಗಮಗಳಿಗೆ ಪಾವತಿಸಲಾಗುತ್ತಿದೆ. ಕಳೆದ ಏಪ್ರಿಲ್‌ನಿಂದ ಈ ವ್ಯವಸ್ಥೆ ಜಾರಿಯಾದ ಕಾರಣ, ನಿಗಮಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತಾಗಿದೆ.

ಶಕ್ತಿ ಯೋಜನೆ ಫಲಾನುಭವಿಗಳು, ವೆಚ್ಚದ ವಿವರ (ಜೂ.7ರವರೆಗಿನ ಮಾಹಿತಿ)
ನಿಗಮ ಒಟ್ಟು ಪ್ರಯಾಣಿಕರು ಮಹಿಳಾ ಪ್ರಯಾಣಿಕರು ಶಕ್ತಿ ಟಿಕೆಟ್‌ ಮೊತ್ತ

ಕೆಎಸ್ಸಾರ್ಟಿಸಿ 117.10 ಕೋಟಿ 67.84 ಕೋಟಿ 2,058.44 ಕೋಟಿ ರು.
ಬಿಎಂಟಿಸಿ 123.86 ಕೋಟಿ 71.12 ಕೋಟಿ 932.24 ಕೋಟಿ ರು.
ಎನ್‌ಡಬ್ಲ್ಯೂಕೆಆರ್‌ಟಿಸಿ 86.40 ಕೋಟಿ 51.87 ಕೋಟಿ 1,345.66 ಕೋಟಿ ರು.
ಕೆಕೆಆರ್‌ಟಿಸಿ 61.27 ಕೋಟಿ 33.11 ಕೋಟಿ 1,114.65 ಕೋಟಿ ರು.
ಒಟ್ಟು 388.55 ಕೋಟಿ 223.97 ಕೋಟಿ 5,451.01 ಕೋಟಿ ರು.

ರಾಜ್ಯದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಜವಾಬ್ದಾರಿ ನಿಖಿಲ್‌ ಕುಮಾರಸ್ವಾಮಿ ಹೆಗಲಿಗೆ?

ಶಕ್ತಿ ಯೋಜನೆ ಜಾರಿ ನಂತರದಿಂದ ನಿಗಮಗಳ ಆದಾಯದಲ್ಲಿ ಭಾರೀ ಹೆಚ್ಚಳವಾಗಿದೆ. ಅದರಲ್ಲೂ ಶಕ್ತಿ ಆದಾಯಕ್ಕಿಂತ ಶಕ್ತಿಯೇತರ ಆದಾಯದಲ್ಲಿ ಏರಿಕೆಯಾಗಿದೆ. ಒಟ್ಟು ಪ್ರಯಾಣಿಕರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರೂ ಶಕ್ತಿ ಯೋಜನೆಯಿಂದ ಬರುತ್ತಿರುವ ಆದಾಯ ಶೇ.42.5ರಷ್ಟಿದ್ದರೆ, ಶಕ್ತಿಯೇತರ ಆದಾಯ ಶೇ.57.5ರಷ್ಟಾಗಿದೆ. 
-ಅನ್ಬುಕುಮಾರ್‌, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ

Latest Videos
Follow Us:
Download App:
  • android
  • ios