ದಾವಣಗೆರೆ(ಜು.30): ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುಂದುವರಿಯುವುದೂ ಅಷ್ಟೇ ಸತ್ಯ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ಮುಂದಿನ 3 ವರ್ಷವೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ. ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಅಲ್ಲದೇ, ಯಡಿಯೂರಪ್ಪ ಯಾವುದೇ ಕಾರಣಕ್ಕೂ ಏಕಾಂಗಿಯಾಗಿಲ್ಲ. ಬಿಎಸ್‌ವೈ ನಮ್ಮ ನಾಯಕರು ಎಂದು ಅವರು ಸ್ಪಷ್ಟಪಡಿಸಿದರು.

ಹೊನ್ನಾಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ವಿಚಾರದಲ್ಲಿ ಯಾರೋ ಊಹಾಪೋಹ ಹರಡುತ್ತಿದ್ದಾರಷ್ಟೇ. ಬಿಜೆಪಿ ಸರ್ಕಾರವು ಯಡಿಯೂರಪ್ಪ ಸಾರಥ್ಯದಲ್ಲೇ ಮುಂದಿನ 3 ವರ್ಷವನ್ನೂ ಪೂರ್ಣಗೊಳಿಸಲಿದೆ ಎಂದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಗಲೀ, ಸಚಿವೆ ಶಶಿಕಲಾ ಜೊಲ್ಲೆಯವರಾಗಲೀ ದೆಹಲಿಗೆ ಭೇಟಿ ನೀಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ವೈಯಕ್ತಿಕ ಕೆಲಸಗಳಿಗೆಂದು ಹೋಗಿರಬಹುದು. ದೆಹಲಿಗೆ ಹೋದ ಮಾತ್ರಕ್ಕೆ ಅದಕ್ಕೆ ಸ್ಥಾನಮಾನ ಕೇಳಲೆಂದೇ ಹೋಗಿದ್ದಾರೆಂದು ಅರ್ಥವಲ್ಲ ಎಂದು ತಿಳಿಸಿದರು.

'ಬಿಜೆಪಿ ಸರ್ಕಾರಕ್ಕೆ ಕುಮಾರಸ್ವಾಮಿ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ'

ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲಿ ಸಚಿವ ಸ್ಥಾನ ಕೇಳುವುದು ತಪ್ಪು. ಸಚಿವ ಸ್ಥಾನವನ್ನು ನೀಡುವಂತೆ ನಾನು ಕೇಳಿಲ್ಲ. ಅಲ್ಲದೇ, ಹಾದಿ ಬೀದಿಯಲ್ಲಿ ಸಚಿವ ಸ್ಥಾನ ನೀಡುವಂತೆ ನಾನು ಕೇಳುವುದಿಲ್ಲ. ಸಮಯ, ಸಂದರ್ಭ ಬಂದಾಗ ನಮ್ಮ ಪಕ್ಷದ ವರಿಷ್ಟರಿಗೆ ಮನವಿ ಮಾಡುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷ ಸ್ಥಾನವನ್ನು ನೀಡಿದ್ದರೂ ಕೆಲವರು ತಮಗೆ ಅಧ್ಯಕ್ಷ ಸ್ಥಾನ ಬೇಡವೆಂದು ಅದನ್ನು ವಾಪಾಸ್ಸು ನೀಡುವ ಮಾತುಗಳನ್ನಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲರನ್ನೂ ಸಮಾನವಾಗಿ ಕಾಣುವಂತಹ ನಾಯಕ. ಎಲ್ಲಾದರೂ ಲೋಪವಾಗಿದ್ದರೆ ಅದನ್ನು ಸರಿಪಡಿಸುತ್ತೇವೆ ಎಂದು ಅವರು ಹೇಳಿದರು.