ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ಕೋವಿಡ್‌ ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ 40,000 ಕೋಟಿ ರೂ. ಹಗರಣ ನಡೆದಿದೆ ಎಂಬ ಆರೋಪಕ್ಕೆ ಆರೋಗ್ಯ ಸಚಿವರು ಉಡಾಫೆ ಉತ್ತರ ನೀಡಿದ್ದಾರೆ.

ಬೆಂಗಳೂರು (ಡಿ.27): ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಕೋವಿಡ್‌ ಸೋಂಕು ನಿಯಂತ್ರಣ ಹಾಗೂ ನಿರ್ವಹಣಾ ಕಾರ್ಯದಲ್ಲಿ 40,000 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ ಆರೋಪಿಸಿದ್ದಾರೆ. ಈ ಬಗ್ಗೆ ಸುಳಿವು ಕೊಟ್ಟರೂ ಹಾಲಿ ಕಾಂಗ್ರೆಸ್ ಸರ್ಕಾರದ ಅಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತನಿಖೆಗೆ ವಹಿಸದೇ ಉಡಾಫೆಯಾಗಿ ಮಾತನಾಡಿದ್ದಾರೆ ಎಂಬಂತೆ ಕಂಡುಬರುತ್ತಿದೆ.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ, ಬಿಜೆಪಿ ಪಕ್ಷದ ಹಿರಿಯ ಮುಖಂಡ ಯತ್ನಾಳ್ ಅವರ ಆಪಾದನೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ದಿನೇಶ್‌ ಗುಂಡೂರಾವ್ ಅವರು, ಯಡಿಯೂರಪ್ಪ ಅವರ ಕಾಲದಲ್ಲಿ ಕೋವಿಡ್ ಹಗರಣ ಆಗಿದೆ. ಸುಮಾರು 40 ಸಾವಿರ ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪ‌ ಮಾಡಿದ್ದಾರೆ. ನನ್ನ ಬಳಿ ಸಾಕಷ್ಟು ಮಾಹಿತಿಯಿದೆ. ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೊರಟರೆ ಎಲ್ಲವೂ ಬಹಿರಂಗ ಪಡೆಸುತ್ತೇನೆ ಎಂದು ಯತ್ನಾಳ ಹೇಳಿದ್ದಾರೆ.

ಬಿಗ್‌ಬಾಸ್‌ ಪರ್ಫೆಕ್ಟ್‌ ಫ್ಯಾಮಿಲಿ ಮ್ಯಾನ್‌ ಕಾರ್ತಿಕ್‌ಗೆ ಇದೆಂಥಾ ಅನ್ಯಾಯ? ಪಾಸ್ ಕೊಟ್ಟ ಕ್ಷಣದಲ್ಲಿ ಬಂದು ಹೋದ ಅಮ್ಮ

ಕೋವಿಡ್‌ ಹಗರಣ ಯಡಿಯೂರಪ್ಪ ಅವರ ಕಾಲದಲ್ಲಿ ಆಗಿದೆ. ಆ ಸಂದರ್ಭದಲ್ಲಿ ಯಡಿಯೂರಪ್ಪ ಪುತ್ರ ಪ್ರಮುಖ ಪಾತ್ರ ವಹಿಸಿದ್ದರು. ವಿಧಾನಸೌಧದ ಕಾರಿಡಾರ್, ಗೋಡೆ ಗೋಡೆಗಳಲ್ಲಿ ವಿಜಯೇಂದ್ರ ಟ್ಯಾಕ್ಸ್ ಕೇಳಿ ಬಂದಿತ್ತು. ಎಲ್ಲವೂ ವಿಜಯೇಂದ್ರ ಮೂಲಕ ಹೋಗಬೇಕು ಎನ್ನುವ ಪರಿಸ್ಥಿತಿಯಿತ್ತು. ಆ ಸಂದರ್ಭದಲ್ಲಿ ವಿಜಯೇಂದ್ರ ಯಾವದೇ ಹುದ್ದೆಯಲ್ಲಿ ಇರಲಿಲ್ಲ. ಆ ಆರೋಪ ಬಂದಿದ್ದ ವಿಜಯೇಂದ್ರ ಅವರಿಗೆ ಹುದ್ದೆ ನೀಡಲಾಗಿದೆ. ಆದರೂ, ಯತ್ನಾಳ್ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಂಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲೂ ಆರೋಪ ಮಾಡಿದ್ದರು. ಈಗಲೂ ಆರೋಪ ಮಾಡುತ್ತಿದ್ದಾರೆ. ದಾಖಲೆಗಳು ಯತ್ನಾಳ್ ಕಡೆ ಇರುವ ಕಾರಣಕ್ಕೆ ಯಾವುದೇ ಕ್ರಮ ಆಗುತ್ತಿಲ್ಲ. ಕೇಂದ್ರದ ನಾಯಕರು ನೋಡಿಕೊಳ್ಳುತ್ತಾರೆ ಎಂದು ಯಡಿಯೂರಪ್ಪ ಹೇಳ್ತಾರೆ ಎಂದು ಉತ್ತರಿಸಿ ಹೊರಟರು. 

ಯತ್ನಾಳ್ ಆರೋಪವನ್ನಾಧರಿಸಿ ಟೀಕೆ ಮಾಡಿದ ಸಿಎಂ ಸಿದ್ದರಾಮಯ್ಯ:
ಬೆಂಗಳೂರು(ಡಿ.27):
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ ಕೊರೋನಾ ಅವಧಿಯಲ್ಲಿ 40 ಸಾವಿರ ಕೋಟಿ ರು. ಭ್ರಷ್ಟಾಚಾರ ಮಾಡಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪವನ್ನು ಅಸ್ತ್ರ ಮಾಡಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯದ್ದು 40 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂಬ ನಮ್ಮ ಆರೋಪಕ್ಕೆ ಯತ್ನಾಳ್‌ ಸಾಕ್ಷಿ ಒದಗಿಸಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ‘ಎಕ್ಸ್‌’ (ಟ್ವೀಟರ್‌) ಖಾತೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ, ಮಾಜಿ ಸಚಿವರು ಹಾಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ ಅವರು, ಈ ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ತಮ್ಮ ಬಳಿ ದಾಖಲೆಗಳು ಇದ್ದರೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್‌ ನೇತೃತ್ವದ ತನಿಖಾ ಆಯೋಗಕ್ಕೆ ಒದಗಿಸಬೇಕು. ಹಿಟ್‌ ಅಂಡ್‌ ರನ್‌ ಮಾಡಬಾರದು ಎಂದು ಯತ್ನಾಳ್‌ಗೆ ಕರೆ ನೀಡಿದ್ದಾರೆ.

ಯತ್ನಾಳ್ ಬಗ್ಗೆ ಮಾತಾಡಲ್ಲ, ದೂರು ಕೊಡಲ್ಲ: ಯಡಿಯೂರಪ್ಪ

ಕೊರೋನಾ ಚಿಕಿತ್ಸೆ ಮತ್ತು ನಿಯಂತ್ರಣದ ಹೆಸರಿನಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ಸರ್ಕಾರ ಸುಮಾರು 4 ಸಾವಿರ ಕೋಟಿ ರು. ಭ್ರಷ್ಟಾಚಾರ ಮಾಡಿದೆ ಎಂದು ಪತ್ರಿಕಾಗೋಷ್ಠಿ ಕರೆದು ದಾಖಲೆ ಸಹಿತ ನಾವು ಆರೋಪ ಮಾಡಿದ್ದೆವು. ಈಗ ಬಸನಗೌಡ ಪಾಟೀಲ್ ಯತ್ನಾಳ್‌ ಆರೋಪವನ್ನು ಗಮನಿಸಿದರೆ ನಮ್ಮ ಅಂದಾಜಿಗಿಂತಲೂ 10 ಪಟ್ಟು ಹೆಚ್ಚಿನ ಭ್ರಷ್ಟಾಚಾರ ನಡೆದಿರುವಂತೆ ಕಾಣುತ್ತಿದೆ. ನಾವು ಆರೋಪ ಮಾಡಿದಾಗ ಹೆದರಿ ಬಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಆಗಿನ ಸಚಿವರ ದಂಡು ಈಗ ಎಲ್ಲಿ ಅಡಗಿ ಕೂತಿದೆ ಎಂದೂ ಮುಖ್ಯಮಂತ್ರಿಯವರು ಪ್ರಶ್ನಿಸಿದ್ದಾರೆ.