ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್ ಮಹೇಶ್‌ಗೆ ಅನ್ಯಾಯ? ಪಾಜ್ ಕೊಟ್ಟ ಕ್ಷಣದಲ್ಲಿ ಬಂದು ಹೋದ ಅಮ್ಮ!
ಬೆಂಗಳೂರು (ಡಿ.27): ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಪರ್ಫೆಟಕ್ಟ್ ಫ್ಯಾಮಿಲಿ ಮ್ಯಾನ್ ಯಾರೆಂದು ಮಾಡಿದ ಸಮೀಕ್ಷೆಯಲ್ಲಿ ಕಾರ್ತಿಕ್ ಅವರನ್ನು ಜನರೇ ಆಯ್ಕೆ ಮಾಡಿದ್ದಾರೆ. ಆದರೆ, ಇಂತಹ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಕಾರ್ತಿಕ್ ಅವರ ತಾಯಿ ಮನೆಗೆ ಬಂದಾಗ ಪಾಸ್ ಕೊಟ್ಟು ಮಾತನಾಡುವುದಕ್ಕೂ ಅವಕಾಶ ಕೊಡದೇ ವಾಪಸ್ ಕಳಿಸಿದ್ದಾರೆ. ಈ ಬಗ್ಗೆ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಿಗ್‌ಬಾಸ್ ಮನೆಯ ಅತ್ಯಂತ ಸ್ಟ್ರಾಂಗ್ ಕಂಟೆಸ್ಟಂಟ್‌ಗಳಲ್ಲಿ ಕಾರ್ತಿಕ್ ಮಹೇಶ್ ಕೂಡ ಒಬ್ಬರಾಗಿದ್ದಾರೆ. ಅವರ ಆಟವನ್ನು ನೋಡಿ ಸಾಕಷ್ಟು ಅಭಿಮಾನಿಗಳು ಕೂಡ ಹುಟ್ಟಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬಿಗ್‌ಬಾಸ್ ಅಪ್ಡೇಟ್ ಮಾಹಿತಿ ನೀಡುತ್ತಿರುವ ಖಾಸಗಿ ಖಾತೆಯೊಂದರಲ್ಲಿ ಬಿಗ್‌ಬಾಸ್ ಮನೆಯಲ್ಲಿರುವ ನಾಲ್ಕು ಸದಸ್ಯರನ್ನು (ಕಾರ್ತಿಕ್, ತನಿಶಾ, ನಮ್ರತಾಗೌಡ ಮತ್ತು ಸಂಗೀತಾ) ಸೂಚಿಸಿ ಅದರಲ್ಲಿ ಒಬ್ಬರನ್ನು ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಯಾರೆಂದು ಸಮೀಕ್ಷೆ ಮಾಡಲಾಗಿದೆ.
ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಎಂದು ಆಯ್ಕೆ ಮಾಡುವಾಗ ಬಿಗ್‌ಬಾಸ್ ಸ್ಪರ್ಧಿಗಳ ನಡವಳಿಕೆ, ಜವಾಬ್ದಾರಿ, ಸಹ ಸ್ಪರ್ಧಿಗಳ ಮೇಲಿನ ಕಾಳಜಿ, ಅವರ ನಿಲುವು, ಮನರಂಜನೆ ನೀಡುವುದು, ಆಟ ಇತರೆ ಅಂಶಗಳನ್ನು ಪರಿಗಣಿಸುವಂತೆ ಸೂಚಿಸಲಾಗಿತ್ತು.
ಸಾಮಾಜಿಕ ಜಾಲತಾಣದ ಸಮೀಕ್ಷೆಯಲ್ಲಿ ಸುಮಾರು 4,200 ಜನರು ಪಾಲ್ಗೊಂಡು ಮತವನ್ನು ಚಲಾವಣೆ ಮಾಡಿದ್ದಾರೆ. ಅದರಲ್ಲಿ ಶೇ.52 ರಷ್ಟು ಮತಗಳನ್ನು ಕಾರ್ತಿಕ್ ಮಹೇಶ್ ಅವರು ಪಡೆದಿದ್ದಾರೆ.
ಉಳಿದಂತೆ ಸಂಗೀತಾ ಶೃಂಗೇರಿ ಶೇ.31, ತನಿಶಾ ಶೇ.8.2 ಹಾಗೂ ನಮ್ರತಾಗೌಡ ಶೇ.8.8 ಮತಗಳನ್ನು ಪಡೆದಿದ್ದಾರೆ. ಅಂದರೆ, ಮೂವರು ಸ್ಪರ್ಧಿಗಳು ಪಡೆದಷ್ಟು ಮತವನ್ನು ಕಾರ್ತಿಕ್ ಒಬ್ಬರೇ ಪಡೆದಿದ್ದಾರೆ.
ಆದರೆ, ಜನರೇ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಎಂದು ಆಯ್ಕೆ ಮಾಡಿದ ಕಾರ್ತಿಕ್ ಮಹೇಶ್ ಅವರಿಗೆ ಅವರ ಮನೆಯವರು ಬಂದು ಭೇಟಿ ಮಾಡಿವ ವಿಚಾರದಲ್ಲಿ ಅನ್ಯಾಯವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂಬ ಮಾತು ಕೇಳಿಬಂದಿದೆ.
ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಈ ಪ್ರೋಮೋದಲ್ಲಿ ಕಾರ್ತಿಕ್ ಮಹೇಶ್ ಅವರ ತಾಯಿ ಮನೆಗೆ ಬಂದಾಗ ಎಲ್ಲರಿಗೂ ಪಾಸ್ ಕೊಟ್ಟಿರುತ್ತಾರೆ. ಆಗ, ಅವರ ತಾಯಿ ಬಂದು ಕಾರ್ತಿಕ್ ಕೆನ್ನೆ ಸವರಿ, ‘ನಾವೆಲ್ಲರೂ ಚೆನ್ನಾಗಿದೀವಿ. ಅಳಬೇಡ ನೀನು’ ಎಂದಷ್ಟೇ ಹೇಳಿ ಹೊರಟು ಹೋಗಿದ್ದಾರೆ.
ಕಾರ್ತಿಕ್ ಕಣ್ಣಲ್ಲಿ ನೀರು ಸುರಿಯುತ್ತಿದ್ದರೂ ಹೆತ್ತಮ್ಮನನ್ನು ತಬ್ಬಿಕೊಳ್ಳಲು, ಅವರೊಡನೆ ಮಾತಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಅಸಹಾಯಕತೆ ಕಂಡುಬಂದಿರುವುದು ನೋಡುಗರ ಹೃದಯ ಕರಗಿಸುವಂತಿದೆ.
ಕೆಲವೇ ಕ್ಷಣದಲ್ಲಿ ಕಾರ್ತಿಕ್ ಅವರ ಅಮ್ಮ ಬಿಗ್‌ಬಾಸ್ ಮನೆಯ ತೆರೆದ ಬಾಗಿಲಿನಿಂದ ಹೊರಗೆ ಹೋಗಿದ್ದಾರೆ. ಬಾಗಿಲು ಹಾಕಿಕೊಂಡಿದೆ. ಪಾಸ್ ಬಿಟ್ಟ ನಂತರ ಕಾರ್ತಿಕ್ ಅಮ್ಮ.. ಅಮ್ಮಾ... ಎಂದು ಕರೆದರೂ ಅಮ್ಮನಿಗೆ ಕಾರ್ತಿಕ್‌ನ ಕೂಗು ಕೇಳಿಸದಂತಾಗಿದೆ.
ಇನ್ನು ನಮ್ರತಾಗೌಡ, ಮೈಕೆಲ್ ಹಾಗೂ ಹಳ್ಳಿಕಾರ್ ಒಡೆಯ ಖ್ಯಾತಿಯ ವರ್ತೂರು ಸಂತೋಷ್ ಅವರ ತಾಯಿ ಬಂದು ತುಂಬಾ ಹೊತ್ತು ಇದ್ದು, ಮಕ್ಕಳೊಂದಿಗೆ ಕೆಲವು ಕ್ಷಣಗಳನ್ನು ಕಳೆದು ಹೋಗಿದ್ದಾರೆ. ಇದನ್ನು ನೆನೆದು ಕಾರ್ತಿಕ್ ಕಣ್ಣೀರು ಹಾಕುವುದು ಬಿಟ್ಟು ಬೇರೇನೂ ಮಾಡಲು ಸಾಧ್ಯವಾಗಿಲ್ಲ.