Asianet Suvarna News Asianet Suvarna News

ಎಲ್ಲಾ ಸರ್ಕಾರಿ ಯೋಜನೆಗಳನ್ನೂ ಡಿಬಿಟಿ ವ್ಯಾಪ್ತಿಗೆ ತನ್ನಿ: ಸಿಎಂ ಬೊಮ್ಮಾಯಿ

ಗ್ರಾಮ ಪಂಚಾಯತ್‌ ಮಟ್ಟದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸಲು ಪ್ರಾರಂಭಿಸಲಾಗಿರುವ ‘ಗ್ರಾಮ ಒನ್‌’ ಕೇಂದ್ರಗಳನ್ನು ಬಲಪಡಿಸಲು ಇನ್ನಷ್ಟು ಸೇವೆಗಳನ್ನು ಗ್ರಾಮ ಒನ್‌ ಅಡಿ ಸೇರ್ಪಡೆಗೊಳಿಸುವಂತೆ ಸಿಎಂ ಸೂಚನೆ

Bring All Government Schemes Under DBT Says CM Basavaraj Bommai grg
Author
Bengaluru, First Published Aug 18, 2022, 6:41 AM IST

ಬೆಂಗಳೂರು(ಆ.18):   ರಾಜ್ಯದಲ್ಲಿ ಸರ್ಕಾರದ ಯೋಜನೆಗಳನ್ನು ನೇರವಾಗಿ ಫಲಾನುಭವಿಗೆ ತಲುಪಿಸುವ ನೇರ ನಗದು ವರ್ಗಾವಣೆ (ಡಿಬಿಟಿ) ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ಈ ವೇದಿಕೆಯನ್ನು ಇನ್ನಷ್ಟುಬಲಪಡಿಸಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾಧ್ಯವಿರುವ ಎಲ್ಲ ಯೋಜನೆಗಳನ್ನೂ ಡಿಬಿಟಿ ವ್ಯಾಪ್ತಿಗೆ ತರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದೇ ವೇಳೆ ಗ್ರಾಮ ಪಂಚಾಯತ್‌ ಮಟ್ಟದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸಲು ಪ್ರಾರಂಭಿಸಲಾಗಿರುವ ‘ಗ್ರಾಮ ಒನ್‌’ ಕೇಂದ್ರಗಳನ್ನು ಬಲಪಡಿಸಲು ಇನ್ನಷ್ಟು ಸೇವೆಗಳನ್ನು ಗ್ರಾಮ ಒನ್‌ ಅಡಿ ಸೇರ್ಪಡೆಗೊಳಿಸುವಂತೆ ಸೂಚಿಸಿದರು.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಇ-ಆಡಳಿತ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಡಿ.ಬಿ.ಟಿ. ವೇದಿಕೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. 2021-22 ರಲ್ಲಿ 1.76 ಕೋಟಿ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ 3.53 ಕೋಟಿ ವ್ಯವಹಾರ (ಟ್ರಾನ್ಸಾಕ್ಷನ್ಸ್‌) ಮಾಡಿದ್ದು, 11,708.75 ಕೋಟಿ ರು. ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ. 2022-23ನೇ ಸಾಲಿನಲ್ಲಿ ಈ ವರೆಗೆ 62.87 ಲಕ್ಷ ಫಲಾನುಭವಿಗಳಿಗೆ 3114.55 ಕೋಟಿ ರು. ವರ್ಗಾಯಿಸಲಾಗಿದೆ.

ಎಲ್ಲ ಇಲಾಖೆಯಲ್ಲೂ ಕ್ರೀಡಾ ಮೀಸಲು: ಸಿಎಂ ಬೊಮ್ಮಾಯಿ

ಡಿಬಿಟಿ ವೇದಿಕೆಯನ್ನು ಇನ್ನಷ್ಟುಬಲಪಡಿಸಿ, ಇತ್ತೀಚೆಗೆ ನೇಕಾರರ ಮಕ್ಕಳಿಗೂ ವಿಸ್ತರಿಸಿರುವ ವಿದ್ಯಾನಿಧಿ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾಧ್ಯವಿರುವ ಎಲ್ಲ ಯೋಜನೆಗಳನ್ನು ಡಿಬಿಟಿ ವ್ಯಾಪ್ತಿಗೆ ತರುವಂತೆ ಸೂಚಿಸಿದರು.

‘ಗ್ರಾಮ ಒನ್‌’ ಸೇವೆಗಳನ್ನು ವಿಸ್ತರಿಸಲು ಸೂಚನೆ:

ಗ್ರಾಮ ಒನ್‌ ಕೇಂದ್ರಗಳ ಮೂಲಕ ಒದಗಿಸಬಹುದಾದ ಸೇವೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಹೋಬಳಿ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಟಲ್‌ ಜನಸ್ನೇಹಿ ಕೇಂದ್ರಗಳ ಸೇವೆಯನ್ನು ಗ್ರಾಮ ಒನ್‌ ಮೂಲಕವೂ ಒದಗಿಸುವ ಬಗ್ಗೆ ಪ್ರಾಯೋಗಿಕವಾಗಿ ಕೆಲವು ಕೇಂದ್ರಗಳಲ್ಲಿ ಪ್ರಾರಂಭಿಸಬೇಕು. ಜತೆಗೆ ಮೈಕ್ರೋ ಬ್ಯಾಂಕಿಂಗ್‌, ಎಲ್‌ಪಿಜಿ ಬುಕ್ಕಿಂಗ್‌ ಮತ್ತಿತರ ಸೇವೆಗಳನ್ನು ಒದಗಿಸಲು ಅವಕಾಶ ಕಲ್ಪಿಸಬಹುದು ಎಂದರು.

ಈ ವೇಳೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈವರೆಗೆ ಒಟ್ಟು 7274 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, 2022ರ ಜನವರಿಯಲ್ಲಿ 65,520 ವ್ಯವಹಾರ (ಟ್ರಾನ್ಸಾಕ್ಷನ್ಸ್‌) ನಡೆದಿವೆ. ಜೂನ್‌ ತಿಂಗಳಲ್ಲಿ 10,36,542 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜನೋತ್ಸವ ಮತ್ತೆ ಮುಂದೂಡಿಕೆ: ಗಣೇಶ ಹಬ್ಬದ ಬಳಿಕ ಆಚರಣೆಗೆ ಪಕ್ಷದ ನಿರ್ಧಾರ

ಹೊಸ ಡಾಟಾ ಸೆಂಟರ್‌:

ರಾಜ್ಯದಲ್ಲಿ ಹೊಸ ಡಾಟಾ ಸೆಂಟರ್‌ ಪ್ರಾರಂಭಿಸುವ ಕುರಿತು ಸಹ ಸಭೆಯಲ್ಲಿ ಚರ್ಚಿಸಲಾಯಿತು. ಹೊಸ ಡಾಟಾ ಸೆಂಟರ್‌ ಸ್ಥಾಪನೆಗೆ ಸೂಕ್ತ ಸ್ಥಳ ನಿಗದಿಪಡಿಸುವಂತೆ ಮುಖ್ಯಮಂತ್ರಿಯವರು ಸೂಚಿಸಿದರು. ಖಾಸಗಿ ಕಂಪೆನಿಗಳೂ ಡಾಟಾ ಸೆಂಟರ್‌ ಪ್ರಾರಂಭಿಸಲು ಮುಂದೆ ಬರುತ್ತಿದ್ದು, ಸರ್ಕಾರವೂ ಇವುಗಳ ಸೇವೆ ಪಡೆದುಕೊಳ್ಳುವ ಬಗ್ಗೆ ಸೂಕ್ತ ನೀತಿಯನ್ನು ರೂಪಿಸಿ. ಜತೆಗೆ ಪಿಎಂ ಗತಿಶಕ್ತಿ ಯೋಜನೆಯಡಿ ರಾಜ್ಯದಲ್ಲಿ 25 ಕೋಟಿ ರು. ವೆಚ್ಚದಲ್ಲಿ ಡ್ರೋನ್‌ ಸ್ಕೂಲ್‌ ಪ್ರಾರಂಭಿಸಲು ಸಿದ್ಧತೆ ನಡೆಸಿ ಎಂದು ಹೇಳಿದರು.

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಐ.ಎಸ್‌.ಎನ್‌. ಪ್ರಸಾದ್‌, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಸೇರಿದಂತೆ ಹಲವರು ಹಾಜರಿದ್ದರು.
 

Follow Us:
Download App:
  • android
  • ios