ಎಲ್ಲ ಇಲಾಖೆಯಲ್ಲೂ ಕ್ರೀಡಾ ಮೀಸಲು: ಸಿಎಂ ಬೊಮ್ಮಾಯಿ
* ಕಾಮನ್‌ವೆಲ್ತ್ ಗೇಮ್ಸ್ ಸಾಧಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸನ್ಮಾನ
* ಪದಕ ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಿದ ಸಿಎಂ
* ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಕ್ರೀಡಾ ಕೋಟಾ ವಿಸ್ತರಣೆಗೆ ಚಿಂತನೆ
ಬೆಂಗಳೂರು(ಆ.17): ಸರ್ಕಾರವು ಕ್ರೀಡಾಪಟುಗಳಿಗೆ ಶೇ.2ರಷ್ಟುಮೀಸಲಾತಿಯನ್ನು ಈಗಾಗಲೇ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಮೀಸಲಿಟ್ಟಿದ್ದು, ಅದನ್ನು ಇತರೆ ಇಲಾಖೆಗಳಿಗೂ ವಿಸ್ತರಣೆ ಮಾಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದ್ದಾರೆ. ಬರ್ಮಿಂಗ್‌ಹ್ಯಾಂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳಿಗೆ ಮತ್ತು ಅಮೃತ ಕ್ರೀಡಾ ದತ್ತು ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ 75 ಕ್ರೀಡಾಪಟುಗಳಿಗೆ ಮಂಗಳವಾರ ವಿಧಾನಸೌಧದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಕ್ರೀಡಾಪಟುಗಳ ಜೀವನಕ್ಕೆ ಭದ್ರತೆ ಬೇಕು ಎನ್ನುವುದನ್ನು ಸರ್ಕಾರ ಮನಗಂಡಿದೆ. ನನಗೋಸ್ಕರ ಮತ್ತು ದೇಶಕ್ಕಾಗಿ ಪದಕ ಗೆಲ್ಲಲು ಕ್ರೀಡೆ ಆಡುತ್ತಿದ್ದೇನೆ ಎನ್ನುವುದನ್ನು ಮಾತ್ರ ಕ್ರೀಡಾಪಟುಗಳು ಮರೆಯಬಾರದು. ಉಳಿದಿದ್ದನ್ನು ಸರ್ಕಾರಕ್ಕೆ ಬಿಡಿ, ಸಾಧನೆಗಳಿಗೆ ತಕ್ಕಂತೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
‘ಕ್ರೀಡಾ ದತ್ತು ಯೋಜನೆ ಜಾರಿಯಲ್ಲಿರುವ ಮೊಟ್ಟಮೊದಲ ರಾಜ್ಯ ಕರ್ನಾಟಕವಾಗಿದೆ. ಕ್ರೀಡಾಂಗಣಗಳ ಅಭಿವೃದ್ಧಿಯನ್ನೂ ಮಾಡಲಾಗುತ್ತಿದೆ. ಬಾಸ್ಕೆಟ್‌ಬಾಲ್ ರಾಜ್ಯದ ಕ್ರೀಡೆ ಎಂದು ಅಳವಡಿಸಿಕೊಳ್ಳುತ್ತಿದ್ದೇವೆ. ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಎರಡು ತಿಂಗಳೊಳಗೆ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗುತ್ತದೆ. ನಮ್ಮ ಸರ್ಕಾರವು ಕ್ರೀಡೆ ಮತ್ತು ಕ್ರೀಡಾಪಟುಗಳ ಕಲ್ಯಾಣಕ್ಕೆ ಆದ್ಯತೆಯನ್ನು ನೀಡಿದೆ. ಕ್ರೀಡಾ ಮನೋಭಾವ ಬಹಳ ಮುಖ್ಯವಾಗಿದ್ದು, ಇದರಿಂದ ಶಿಸ್ತು, ಸಂಯಮ ಮತ್ತು ಹೆಚ್ಚು ಸಾಧಿಸುವ ಶಕ್ತಿ ಬರುತ್ತದೆ. ಪ್ರಾಮಾಣಿಕ ಮತ್ತು ಸಮರ್ಪಣಾ ಭಾವದ ಕ್ರೀಡಾಪಟುವಿಗೆ ಸಚ್ಚಾರಿತ್ರ್ಯವಿರುತ್ತದೆ. ಆಗ ಜೀವನದಲ್ಲಿ ಸಾಧನೆಗಳನ್ನು ಮಾಡಬಹುದಾಗಿದೆ’ ಎಂದು ಹೇಳಿದರು.
ಪಾರದರ್ಶಕ ಆಯ್ಕೆಯಿಂದಾಗಿ ಕ್ರೀಡಾ ಯಶಸ್ಸಿಗೆ ಕಾರಣ: ಪ್ರಧಾನಿ ನರೇಂದ್ರ ಮೋದಿ
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮೂವರು ಕ್ರೀಡಾಪಟುಗಳು ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ವೈಯುಕ್ತಿಕ ವಿಭಾಗದಲ್ಲಿ ಗುರುರಾಜ ಪೂಜಾರಿ ಪದಕ ಜಯಿಸಿದರೇ, ತಂಡ ವಿಭಾಗದಲ್ಲಿ ರಾಜೇಶ್ವರಿ ಗಾಯಕ್ವಾಡ್ ಹಾಗೂ ಅಶ್ವಿನಿ ಪೊನ್ನಪ್ಪ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕುಂದಾಪುರ ಮೂಲದ ಗುರುರಾಜ ಪೂಜಾರಿ ಕಂಚಿನ ಪದಕ ಜಯಿಸಿದ್ದರು. ಭಾರತ ಮಹಿಳಾ ಕ್ರಿಕೆಟ್ ತಂಡವು ಬೆಳ್ಳಿ ಪದಕ ಜಯಿಸಿತ್ತು. ಈ ತಂಡದಲ್ಲಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಸ್ಥಾನ ಪಡೆದಿದ್ದರು. ಇನ್ನು ಭಾರತ ಮಿಶ್ರ ಬ್ಯಾಡ್ಮಿಂಟನ್ ತಂಡ ಕೂಡಾ ಬೆಳ್ಳಿ ಪದಕ ಜಯಿಸಿತ್ತು. ಕಂಚಿನ ಪದಕ ಜಯಿಸಿದ ಗುರುರಾಜ ಪೂಜಾರಿ 8 ಲಕ್ಷ ರುಪಾಯಿ ಬಹುಮಾನ ಪಡೆದರೇ, ಬೆಳ್ಳಿ ಪದಕ ಜಯಿಸಿದ ರಾಜೇಶ್ವರಿ ಗಾಯಕ್ವಾಡ್ ಹಾಗೂ ಅಶ್ವಿನಿ ಪೊನ್ನಪ್ಪ ತಲಾ 15 ಲಕ್ಷ ರುಪಾಯಿ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ನಾರಾಯಣ ಗೌಡ, ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ ಇತರರು ಉಪಸ್ಥಿತರಿದ್ದರು.