ಭ್ರಷ್ಟಾಚಾರ ಪ್ರಕರಣದಲ್ಲಿ ತಾವು ಖಾಸಗಿ ವ್ಯಕ್ತಿ, ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿಲ್ಲ ಎಂಬ ಕಾರಣ ನೀಡಿ ತನಿಖೆ ರದ್ದು ಕೋರಿದ್ದ ಅರ್ಜಿ a ಹೈಕೋರ್ಟ್ ವಜಾ. ಸರ್ಕಾರಿ ನೌಕರನಲ್ಲದಿದ್ದರೂ, ಲಂಚದ ಹಣ ಸಂಗ್ರಹಕ್ಕೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದರೆ ಭ್ರಷ್ಟಾಚಾರ ಪ್ರಕರಣದ ತನಿಖೆ.

ಬೆಂಗಳೂರು (ಮೇ.20): ಭ್ರಷ್ಟಾಚಾರ ಪ್ರಕರಣದ‌ಲ್ಲಿ ಆರೋಪಿತರು ಸರ್ಕಾರಿ ಸೇವಕನಲ್ಲ. ಬದಲಾಗಿ ಖಾಸಗಿ ವ್ಯಕ್ತಿಯಾಗಿದ್ದು, ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿಲ್ಲ ಹಾಗೂ ಲಂಚದ ಹಣ ವಶಕ್ಕೆ ಪಡೆದುಕೊಂಡಿಲ್ಲ ಎಂಬ ಕಾರಣ ಮುದ್ದಿಟ್ಟುಕೊಂಡು ಭಷ್ಟಾಚಾರ ಪ್ರಕರಣದ ತನಿಖೆ ರದ್ದುಪಡಿಸಲಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

Add Asianetnews Kannada as a Preferred SourcegooglePreferred

ಅಧಿಕಾರಿಗಳಿಗೆ ನೀಡಬೇಕಾದ ಲಂಚದ ಹಣವನ್ನು ಸಂಗ್ರಹಿಸಿ ಮತ್ತೊಬ್ಬರಿಗೆ ತಲುಪಿಸುವಂತೆ ವ್ಯಕ್ತಿಯೊಬ್ಬರಿಗೆ ನಿರ್ದೇಶನ ನೀಡಿದ್ದ ಆರೋಪ ಎದುರಿಸುತ್ತಿರುವ ಬಸವೇಶ್ವರ ನಗರದ ಕೆ.ಎಸ್.ಗಂಗಾಧರಯ್ಯ ಎಂಬುವರು ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಭ್ರಷ್ಟಚಾರ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಅಧಿಕಾರಿಗಳಿಗೆ ಲಂಚ ಸಂಗ್ರಹ ಪ್ರಕ್ರಿಯೆಗೆ ಮಧ್ಯವರ್ತಿಯಾಗಿದ್ದ ವ್ಯಕ್ತಿ ವಿರುದ್ಧದ ಭ್ರಷ್ಟಾಚಾರ ಪ್ರಕರಣ ರದ್ದುಪಡಿಸಲು ನಿರಾಕರಿಸಿ ಆದೇಶಿಸಿದೆ.

ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆ ಸೆಕ್ಷನ್ 8ರ ಪ್ರಕಾರ, ಸರ್ಕಾರಿ ಅಧಿಕಾರಿಗೆ ಲಂಚ ನೀಡುವ ವ್ಯಕ್ತಿ, ಸೆಕ್ಷನ್ 9ರ ಪ್ರಕಾರ ವಾಣಿಜ್ಯ ಸಂಸ್ಥೆ, ಸೆಕ್ಷನ್ 10ರ ಪ್ರಕಾರ ಅಂಥ ವಾಣಿಜ್ಯ ಸಂಸ್ಥೆ ಉಸ್ತುವಾರಿ ವ್ಯಕ್ತಿಯನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಪಡಿಸುವುದಕ್ಕೆ ಅವಕಾಶವಿರಲಿದೆ, ಈ ಪ್ರಕರಣದಲ್ಲಿ ಅರ್ಜಿದಾರರು ದಿ ಟ್ರಾನ್ಸ್ ಪೋರ್ಟ್‌ ಎಂಬ ಕಂಪೆನಿ ನಡೆಸುತ್ತಿದ್ದಾರೆ.‌ ಅವರು ಸರ್ಕಾರಿ ನೌಕರನಿಗೆ ಹಣ ತಲುಪಿಸುವ ಹೊಣೆ ಮತ್ತೊಬ್ಬ ವ್ಯಕ್ತಿಗೆ ವಹಿಸಿಕೊಡುವ ಮೂಲಕ ಭ್ರಷ್ಟಾಚಾರದ ಜಾಲವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಪೀಠ ಹೇಳಿದೆ.

ಜತೆಗೆ, ಲೋಕಾಯುಕ್ತ ಪೊಲೀಸರ ದಾಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಮನೋಜ್ (ಹಣ ಸಂಗ್ರಹಿಸಲು ಅರ್ಜಿದಾರರ ಸೂಚಿಸಿದ್ದ ವ್ಯಕ್ತಿ) ಎಂಬುವರು ನೀಡಿರುವ ಹೇಳಿಕೆಯಿಂದ ಅರ್ಜಿದಾರರು ಹಣವನ್ನು ಉಸ್ಮಾನ್ ಎಂಬುವರಿಂದ ಸಂಗ್ರಹಿಸಲು ಸೂಚನೆ ನೀಡಿದ್ದಾರೆ ಎಂಬ ಅಂಶ ಗೊತ್ತಾಗಲಿದೆ. ಇಂತಹ ಸಂದರ್ಭದಲ್ಲಿ ಅವರು ಸರ್ಕಾರಿ ಸೇವಕನಲ್ಲ. ಬದಲಾಗಿ ಖಾಸಗಿ ವ್ಯಕ್ತಿಯಾಗಿದ್ದಾರೆ. ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿಲ್ಲ. ಲಂಚದ ಹಣ ವಶಕ್ಕೆ ಪಡೆದುಕೊಂಡಿಲ್ಲ ಎಂಬ ಕಾರಣ ನೀಡಿ ಪ್ರಕರಣದ ತನಿಖೆ ರದ್ದುಗೊಳಿಸಲಾಗದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು?:

ದೆಹಲಿಯಿಂದ ಬೆಂಗಳೂರಿಗೆ ಪಾನ್ ಮಸಾಲ, ಕಬ್ಬಿಣ, ಉಕ್ಕು ಮತ್ತು ಸ್ಕ್ರಾಪ್ ವಸ್ತುಗಳನ್ನು ರವಾನಿಸುವ ಜಾಲದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದು, ಸರ್ಕಾರದ ಖಜಾನೆಗೆ ಭಾರಿ ನಷ್ಟವನ್ನುಂಟು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಪ್ರಕರಣದ ಪ್ರಾಥಮಿಕ ವಿಚಾರಣೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೊದಲ ಆರೋಪಿ ಎಂ.ಆರ್. ನಿಜಾನಂದಮೂರ್ತಿ ಅವರು ತಮ್ಮ ಅಧೀನದ ಇತರೆ ಅಧಿಕಾರಿಗಳು ಸೇರಿ ದಿ ಟ್ರಾನ್ಸ್ ಪೋರ್ಟ್‌ ಎಂಬ ಕಂಪೆನಿ ಮಾಲೀಕರಾದ ಅರ್ಜಿದಾರ ಗಂಗಾಧರಯ್ಯ ಅವರ ಮೂಲಕ ಹಣ ಸಂಗ್ರಹಿಸುತ್ತಿರುವ ಕುರಿತು ಮಾಹಿತಿ ಲಭ್ಯವಾಗಿತ್ತು.

ಅರ್ಜಿದಾರ ಸೂಚನೆ ಮೇರೆಗೆ ಮನೋಜ್ ಎಂಬುವರು 2025 ಏ.23ರಂದು ವಿವಿಧ ಕಂಪೆನಿಗಳಿಂದ 20 ಲಕ್ಷ ರು.ಗಳನ್ನು ಪಡೆದು ಅಧಿಕಾರಿಗಳಿಗೆ ತಲುಪಿಸಲು ಮುಂದಾಗಿದ್ದರು. ಈ ವೇಳೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಹಣ ಪಡೆಯುವ ಅಧಿಕಾರಿ ನಿಜಾನಂದಮೂರ್ತಿ ಮತ್ತು ಮನೋಜ್ ಎಂಬುವರನ್ನು ಬಂಧಿಸಿದ್ದರು.

ಬಳಿಕ ನಿಜಾನಂದ ಮೂರ್ತಿ ಅವರ ಫೋನ್ ವಶಕ್ಕೆ ಪಡೆದು, ಫೋನ್ ಪರಿಶೀಲಿಸಿದಾಗ, ಅರ್ಜಿದಾರರಾಗಿರುವ ಗಂಗಾಧರಯ್ಯ ಎಂಬುವರ ನಡುವೆ ಸಂಭಾಷಣೆ ನಡೆದಿರುವ ಅಂಶ ಬೆಳಕಿಗೆ ಬಂದಿತ್ತು. ಬಳಿಕ ವಿಚಾರಣಾ ನ್ಯಾಯಾಲಯದ ಅನಮುಮತಿ ಪಡೆದು ಗಂಗಾಧರಯ್ಯ ಅವರನ್ನು ಎರಡನೇ ಆರೋಪಿಯನ್ನಾಗಿಸಲಾಗಿತ್ತು. ಇದನ್ನು ಪ್ರಶ್ನಿಸಿ ಗಂಗಾಧರಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದಾರೆ. ಸರ್ಕಾರಿ ನೌಕರರಲ್ಲ. ಘಟನೆ ನಡೆದ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ಹಣವಿದ್ದ ಬ್ಯಾಗನ್ನು ಅರ್ಜಿದಾರರ ಕೈಯಿಂದ ವಶಪಡಿಸಿಕೊಂಡಿಲ್ಲ ಯಾರೋ‌ ಒಬ್ಬರು‌ ಅರ್ಜಿದಾರರ ಹೆಸರು ಹೇಳಿದ ಮಾತ್ರಕ್ಕೆ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗದು. ಹಾಗಾಗಿ, ಅರ್ಜಿದಾರರ ವಿರುದ್ಧ ಭ್ರಷ್ಟಾಚಾರ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು