ಹೊಸ ಪಡಿತರ ಚೀಟಿಗೆಂದು ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾಯುತ್ತಿರುವ ಲಕ್ಷಾಂತರ ಮಂದಿಗೆ ಈವರೆಗೂ ಪಡಿತರ ಚೀಟಿ ಸಿಕ್ಕಿಲ್ಲ. ಹೀಗಾಗಿ ಬಡ ಜನರು ಪಡಿತರ ಆಹಾರ ಧಾನ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. 

ಸಂಪತ್‌ ತರೀಕೆರೆ

ಬೆಂಗಳೂರು (ನ.08): ಹೊಸ ಪಡಿತರ ಚೀಟಿಗೆಂದು ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾಯುತ್ತಿರುವ ಲಕ್ಷಾಂತರ ಮಂದಿಗೆ ಈವರೆಗೂ ಪಡಿತರ ಚೀಟಿ ಸಿಕ್ಕಿಲ್ಲ. ಹೀಗಾಗಿ ಬಡ ಜನರು ಪಡಿತರ ಆಹಾರ ಧಾನ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ, ಪಡಿತರ ಚೀಟಿ ಆಧರಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವ ಆರೋಗ್ಯ ಸೇವೆಯಿಂದಲೂ ಕಡು ಬಡವರು ವಂಚಿತರಾಗುತ್ತಿದ್ದಾರೆ.

ಆಹಾರ ಇಲಾಖೆ ಮಾಹಿತಿ ಪ್ರಕಾರ, 2021ರಲ್ಲಿ ಆನ್‌ಲೈನ್‌ ಮೂಲಕ 7.50 ಲಕ್ಷಕ್ಕೂ ಹೆಚ್ಚು ಮಂದಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಅಧಿಕಾರಿಗಳು 5,87,269 ಅರ್ಜಿಗಳ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ 2,66,896 ಅರ್ಜಿಗಳು ಅನುಮೋದನೆಗೊಂಡಿವೆ. 1.61 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 4.28 ಲಕ್ಷ ಅರ್ಜಿಗಳನ್ನು ಇತ್ಯರ್ಥಪಡಿಸಿದ್ದು 3,35,388 ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. ಹೀಗಾಗಿ ಹಲವರು ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳಿಂದ ವಂಚಿತರಾಗಿದ್ದು, ಆಹಾರ ಇಲಾಖೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಿ.ಪಿ.ಯೋಗೇಶ್ವರ್‌

ಎಪಿಎಲ್‌ ಪಡಿತರ ಚೀಟಿ ಕೋರಿ ಸಲ್ಲಿಕೆಯಾದ 1,58,305 ಅರ್ಜಿಗಳ ಪೈಕಿ 4455 ಅರ್ಜಿಗಳನ್ನು ಹಿಂಪಡೆಯಲಾಗಿದೆ. 31,484 ಅರ್ಜಿಗಳು ಸ್ವೀಕೃತಗೊಂಡಿದ್ದು 1,09,985 ಅರ್ಜಿಗಳು ಅನುಮೋದನೆಗೊಂಡಿವೆ. 9359 ತಿರಸ್ಕೃತಗೊಂಡಿದ್ದು, 1,19,344 ಅರ್ಜಿಗಳು ವಿಲೇವಾರಿಯಾಗಿವೆ. 38954 ಅರ್ಜಿಗಳು ವಿಲೇವಾರಿಯಾಗಬೇಕಿದೆ.ಅರ್ಹತೆ ಇಲ್ಲದವರು ಬಿಪಿಎಲ್‌ ಕಾರ್ಡ್‌ಗಳನ್ನು ಪಡೆದು ಇಲಾಖೆಗೆ ವಂಚಿಸಿದ್ದರು. ಕೆಲವರು ಅನಧಿಕೃತವಾಗಿ ಪಡಿತರ ಚೀಟಿಗಳನ್ನು ಹೊಂದಿದ್ದು, ಪಡಿತರ ಆಹಾರ ಧಾನ್ಯಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ನಿಗದಿತ ಮಾನದಂಡ ಉಲ್ಲಂಘಿಸಿ ರಾಜ್ಯಾದ್ಯಂತ ಆರ್ಥಿಕ ಸಬಲರು ಪಡೆದಿದ್ದ 3,30,024 ಪಡಿತರ ಕಾರ್ಡ್‌ಗಳನ್ನು ಈ ಹಿಂದೆ ಆಹಾರ ಇಲಾಖೆ ರದ್ದು ಮಾಡಿತ್ತು.

2021ರ ಸೆಪ್ಟೆಂಬರ್‌ ವೇಳೆಗೆ ಕೊರೋನಾ ಸೋಂಕು ಇಳಿಕೆಯಾದ ಬೆನ್ನಲ್ಲೇ ಹೊಸ ಪಡಿತರ ಚೀಟಿ ವಿತರಣೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆಹಾರ ಇಲಾಖೆ ಅವಕಾಶ ನೀಡಿತ್ತು. 3ನೇ ಅಲೆಯೂ ಹೆಚ್ಚು ಬಾಧಿಸದ ಕಾರಣ ಪಡಿತರ ಚೀಟಿ ಹಂಚಿಕೆ ಮುಂದುವರೆಸಲಾಗಿತ್ತು. ಆದರೆ, ನಿಗದಿತ ಸಮಯಕ್ಕೆ ಅರ್ಜಿದಾರರಿಗೆ ಹೊಸ ಪಡಿತರ ಚೀಟಿ ಸಿಗುತ್ತಿಲ್ಲ. ಅರ್ಹರಲ್ಲದವರು ಪಡೆದ ಬಿಪಿಎಲ್‌ ಕಾರ್ಡ್‌ ಪತ್ತೆಗೆ ಹೆಚ್ಚಿನ ಆದ್ಯತೆ ನೀಡಿರುವ ಆಹಾರ ಇಲಾಖೆ, ಅದೇ ರೀತಿ ಬಡ ಜನರಿಗೆ ಪಡಿತರ ಚೀಟಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಶ್ರೀರಾಂಪುರದ ನಿವಾಸಿ ಪೆರಿಸ್ವಾಮಿ ಆರೋಪಿಸಿದ್ದಾರೆ.

ಆರೋಗ್ಯ ಸೇವೆಗೂ ಅಡ್ಡಿ: ಅನರ್ಹರು ಪಡೆದ ಪಡಿತರ ಚೀಟಿ ರದ್ದುಗೊಳಿಸಲು 2017ರಲ್ಲಿ ಆಹಾರ ಇಲಾಖೆ ಹೊಸ ಅರ್ಜಿಗಳ ವಿಲೇವಾರಿ ತಡೆ ಹಿಡಿದಿತ್ತು. ಜೊತೆಗೆ ಇಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿತ್ತು. ಈ ನಡುವೆ 2019-20ರ ಸಾಲಿನಲ್ಲಿ ಕೋವಿಡ್‌ ಹಿನ್ನೆಲೆಯಲ್ಲಿ ಪಡಿತರ ಚೀಟಿ ವಿತರಣೆ ಸ್ಥಗಿತಗೊಂಡಿತ್ತು. ಆ ನಂತರ ಕಳೆದ ಮೂರು ವರ್ಷಗಳಿಂದ ಪಡಿತರ ಚೀಟಿ ಸಿಗದೆ, ಜೊತೆಗೆ ಪಡಿತರ ಆಹಾರ ಧಾನ್ಯವೂ ಸಿಗದೆ ಹಲವು ಮಂದಿ ಬಡವರು ಪರಿತಪಿಸುತ್ತಿದ್ದಾರೆ. ಬಿಪಿಎಲ್‌ ಕಾರ್ಡುದಾರರಲ್ಲಿ ಬಹುತೇಕರು ಪಡಿತರ ಆಹಾರ ಧಾನ್ಯ ಪಡೆಯುವುದಕ್ಕಿಂತ ಹೆಚ್ಚಾಗಿ ಇದನ್ನು ಆರೋಗ್ಯ ಸೌಲಭ್ಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. 

ಬಿಪಿಎಲ್‌ ಕಾರ್ಡು ಇದ್ದಲ್ಲಿ ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ರಿಯಾಯಿತಿ ಕೂಡ ಲಭ್ಯವಿದೆ. ಅರ್ಜಿ ಸಲ್ಲಿಸಿ ಮೂರ್ನಾಲ್ಕು ವರ್ಷವಾದರೂ ಪಡಿತರ ಚೀಟಿ ಸಿಗದಿದ್ದರಿಂದ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಆನ್‌ಲೈನ್‌ ಮೂಲಕ 2019-20ರಲ್ಲಿ ಅರ್ಜಿ ಸಲ್ಲಿಸಿದ್ದವರ ಪೈಕಿ 10,664 ಅರ್ಜಿಗಳು ಇನ್ನೂ ವಿಲೇವಾರಿಗೆ ಬಾಕಿ ಇವೆ. 2021ರಲ್ಲಿ 3,35,388 ಅರ್ಜಿಗಳು ವಿಲೇವಾರಿಯಾಗಿಲ್ಲ. ಶೀಘ್ರವೇ ಹೊಸ ಪಡಿತರ ಚೀಟಿ ಹಂಚಿಕೆ ಕುರಿತು ಆಹಾರ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ: ನಿಖಿಲ್‌ ಕುಮಾರಸ್ವಾಮಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿವೆ. ಇನ್ನೂ ಹೊಸ ಪಡಿತರ ಚೀಟಿ ಬಂದಿಲ್ಲ. ಹೀಗಾಗಿ ಅನ್ನಭಾಗ್ಯದ ಅಕ್ಕಿ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಗರೀಬ್‌ ಕಲ್ಯಾಣ ಯೋಜನೆಯಲ್ಲಿ ಕೊಡುತ್ತಿರುವ ಅಕ್ಕಿ ಡಿಸೆಂಬರ್‌ಗೆ ಅಂತ್ಯವಾಗಲಿದೆ. ಬಡವರ ಬಗ್ಗೆ ಸರ್ಕಾರ ಸ್ಪಲ್ಪ ಕನಿಕರ ತೋರಿಸಿ ಬೇಗ ಪಡಿತರ ಚೀಟಿ ಕೊಟ್ಟರೆ ಅನುಕೂಲವಾಗುತ್ತದೆ. ಇಲಾಖೆಗೆ ಸಚಿವರೇ ಇಲ್ಲ. ಮುಖ್ಯಮಂತ್ರಿಯವರ ಸುಪರ್ದಿಯಲ್ಲಿ ಇಲಾಖೆಯಿದೆ. ಆದ್ದರಿಂದ ಕೆಲಸವೂ ನಡೆಯುತ್ತಿಲ್ಲ
- ಕೆ.ವಿ.ಸುರೇಶ್‌ ನಾಯ್ಕ, ಬಿಳೇಕಹಳ್ಳಿ, ಬೆಂಗಳೂರು