ಕೇಂದ್ರ ಸರ್ಕಾರದಿಂದ ಶಂಕಾಸ್ಪದ ಪಟ್ಟಿಗೆ ಸೇರಿದ್ದ 7.65 ಲಕ್ಷ ಬಿಪಿಎಲ್ ಕಾರ್ಡ್‌ಗಳ ಪೈಕಿ 3.50 ಲಕ್ಷ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಜನರ ಹಿತದೃಷ್ಟಿಯಿಂದ ಉಳಿದ ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

  • ಮಾನದಂಡ ಉಲ್ಲಂಘಿಸಿ ಪಡೆದ 7.65 ಲಕ್ಷ ಪಡಿತರ ಚೀಟಿ ಶಂಕಾಸ್ಪದ ಪಟ್ಟಿಗೆ ಸೇರಿಸಿದ್ದ ಕೇಂದ್ರ
  • ಆ ಪಟ್ಟಿ ಆಧರಿಸಿ 3.50 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸಿದ್ದ ಅಧಿಕಾರಿಗಳು
  • ಉಳಿದ ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯ ಜನರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಸ್ಥಗಿತ
  • ಹಣದುಬ್ಬರ ಹಿನ್ನೆಲೆ ಹಳೆ ನಿಯಮ ಪಾಲನೆ ಕಷ್ಟ. ಈ ಬಗ್ಗೆ ಕೇಂದ್ರಕ್ಕೆ ಮಾಹಿತಿ ಸಚಿವ ರಿಜ್ವಾನ್‌

--

 ಬೆಂಗಳೂರು (ಆ.15): ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಮಾನದಂಡ ಉಲ್ಲಂಘಿಸಿ ಪಡೆಯಲಾಗಿರುವ ಬಿಪಿಎಲ್‌ ಪಡಿತರ ಚೀಟಿಗಳ ರದ್ದು ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್‌ ಅರ್ಷದ್‌ ತಿಳಿಸಿದ್ದಾರೆ.

ಜನರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಸ್ಥಗಿತ

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಮಾನದಂಡ ಉಲ್ಲಂಘಿಸಿ ಪಡೆದಿರುವ 7.65 ಲಕ್ಷ ಪಡಿತರ ಚೀಟಿಗಳನ್ನು ಶಂಕಾಸ್ಪದ ಪಟ್ಟಿಗೆ ಸೇರಿಸಿ ರಾಜ್ಯಕ್ಕೆ ಕಳುಹಿಸಿತ್ತು. ಅದರಂತೆ ರಾಜ್ಯದ ಇಲಾಖೆ ಅಧಿಕಾರಿಗಳು ಅವರುಗಳನ್ನು ಪರಿಶೀಲಿಸಿ 3.50 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸಿದ್ದಾರೆ. ಉಳಿದ ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯವನ್ನು ಜನರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಬೋಗಸ್‌ ಪಡಿತರ ಚೀಟಿ ಪತ್ತೆ ಹಾಗೂ ಪಡಿತರ ಸೋರಿಕೆ ತಡೆಗೆ ಪಡಿತರ ಚೀಟಿಗೆ ಆಧಾರ್‌ ದೃಢೀಕರಣ (ಇ-ಕೆವೈಸಿ) ಜೋಡಣೆ ಮಾಡಿಕೊಳ್ಳಬೇಕಿದೆ. ರಾಜ್ಯದ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರು ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಖರವಾಗಿ ಅನರ್ಹ ಕಾರ್ಡ್‌ಗಳ ಮಾಹಿತಿ ತಿಳಿಯಲಿದೆ. 5 ವರ್ಷಗಳ ಬಳಿಕ ಇ-ಕೆವೈಸಿ ಪ್ರಕ್ರಿಯೆ ನಡೆಯುತ್ತಿದೆ. ಪಡಿತರ ಚೀಟಿಗಳ ರದ್ದತಿ ಆಧಾರದಲ್ಲಿ ಹೊಸದಾಗಿ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ನೀಡಲಾಗುತ್ತದೆ. ಅಲ್ಲದೆ, ಹಣದುಬ್ಬರದ ಹಿನ್ನೆಲೆ ಹಳೇ ಬಿಪಿಎಲ್‌ ನಿಯಮಗಳನ್ನು ಅನುಸರಿಸುವುದು ಕಷ್ಟವಾಗುತ್ತಿದೆ. ಈ ಕುರಿತಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಆಹಾರ ಇಲಾಖೆ ನೀಡಿರುವುದು ಖುಷಿಯಿದೆ:

ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ರಿಜ್ವಾನ್‌ ಅರ್ಷದ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನನಗೆ ಮಹತ್ವದ ಇಲಾಖೆ ನೀಡಿದ್ದಾರೆ. ಬಹಳ ಸಂತಸದಿಂದ ಇಲಾಖೆ ವಹಿಸಿಕೊಂಡಿದ್ದೇನೆ. ರಾಜ್ಯದ ಶೇ. 60ರಷ್ಟು ಜನರನ್ನು ಮುಟ್ಟುವ ಇಲಾಖೆ ಇದಾಗಿದೆ. ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆಗಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಇಲಾಖೆಯನ್ನು ಕ್ರಿಯಾತ್ಮಕ ಇಲಾಖೆಯಾಗಿ ರೂಪಿಸುವ ಗುರಿಯಿದೆ ಎಂದರು.