ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಮೈಸೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು, ಶಾಲಿನಿ ರಜನೀಶ್ ವಿವಾದ, ಕೇರಳ ಸರ್ಕಾರದ ಆಹ್ವಾನ, ತಮ್ಮ ಬರವಣಿಗೆಯ ವೈಶಾಲ್ಯತೆ ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಕುರಿತು ಮಾತನಾಡಿದರು.
ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ, ನಾಡಿನ ಹಿರಿಯ ಸಾಹಿತಿ ಬಾನು ಮುಷ್ತಾಕ್ ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಡೆದ ಮಾಧ್ಯಮ ಸಂವಾದದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಉಪಾಧ್ಯಕ್ಷ ರವಿ ಪಾಂಡವಪುರ ಮತ್ತು ಗ್ರಾಮಾಂತರ ಕಾರ್ಯದರ್ಶಿ ದಾ. ರಾ. ಮಹೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಏನಂದ್ರು?
ಮಹಿಳಾ ಅಧಿಕಾರಿ ಶಾಲಿನಿ ರಜನೀಶ್ ಬಗ್ಗೆ ಎಂಎಲ್‌ಸಿ ರವಿಕುಮಾರ್ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾನು ಮುಷ್ತಾಕ್ , “ಈ ಹಿಂದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಎಂಎಲ್‌ಸಿ ಸಿ.ಟಿ. ರವಿ ಕೂಡಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆಗ ಲಕ್ಷ್ಮಿ ಹೆಬ್ಬಾಳ್ಕರ್ ಕಣ್ಣೀರು ಹಾಕಿದ ದೃಶ್ಯ ನೆನಪಿಗೆ ಬರುತ್ತದೆ. ಅದೇ ವೇಳೆ ನಾನು ಸರ್ಕಾರಕ್ಕೆ ಪತ್ರ ಬರೆದು, ಮಹಿಳೆಯರ ಅವಮಾನಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದೆ. ಸರ್ಕಾರ ಬದಲಾಗಿದೆ ಆದರೆ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳ ಪ್ರಮಾಣ ಕಡಿಮೆಯಾಗಿಲ್ಲ. ಹಾಗಾಗಿ ಈಗಲೂ ನಾನು ಅದೇ ಒತ್ತಾಯವನ್ನು ಪುನರಾವೃತ್ತಿ ಮಾಡುತ್ತೇನೆ. ಮಹಿಳೆಯರ ಗೌರವಕ್ಕೆ ಧಕ್ಕೆಯುಂಟು ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾಯ್ದೆ ತರಬೇಕಾಗಿದೆ,” ಎಂದು ಹೇಳಿದರು.
“ನಾನು ಕಮ್ಯುನಿಸ್ಟ್ ಅಲ್ಲ, ಆದರೆ ಕೇರಳ ಸರ್ಕಾರ ನನ್ನನ್ನು ಆಹ್ವಾನಿಸಿತು”
ತಮ್ಮ ಬೂಕರ್ ಪ್ರಶಸ್ತಿ ಬಳಿಕ ಕೇರಳ ಸರ್ಕಾರದಿಂದ ಪಡೆದ ಆಹ್ವಾನ ಕುರಿತು ಮಾತನಾಡಿದ ಬಾನು ಮುಷ್ತಾಕ್ “ನಾನು ಕಮ್ಯುನಿಸ್ಟ್ ಅಲ್ಲ. ಆದರೂ, ಬೂಕರ್ ಪ್ರಶಸ್ತಿ ಪಡೆದ ನಂತರ ಕೇರಳ ಸರ್ಕಾರ ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿತು. ಕೇರಳದ ಜನತೆಗೆ ನನ್ನ ಬರಹ ಇಷ್ಟವಾಗಿದೆ. ಅದಕ್ಕಾಗಿ ಕೇರಳ ಸರ್ಕಾರ ನನಗೆ ಆಹ್ವಾನ ನೀಡಿರಬಹುದು,” ಎಂದು ತಿಳಿಸಿದರು.
“ನಾನು ಕೇವಲ ಮುಸ್ಲಿಂ ಮಹಿಳೆಯರ ವಿಷಯದಲ್ಲಿ ಮಾತ್ರ ಬರೆಯುವುದಿಲ್ಲ”
ತಮ್ಮ ಸಾಹಿತ್ಯದ ವಿಷಯಗಳ ಬಗ್ಗೆ ಮಾತನಾಡಿದ ಬಾನು ಮುಷ್ತಾಕ್, “ನಾನು ಕೇವಲ ಮುಸ್ಲಿಂ ಮಹಿಳೆಯರ ಸಮಸ್ಯೆಗಳ ಕುರಿತೇ ಬರೆಯುವುದಿಲ್ಲ. ನಾನು ಮುಸ್ಲಿಂ ಮಹಿಳೆಯಾದರೂ, ಮುಸ್ಲಿಂ ಸಮುದಾಯದಷ್ಟೇ ಅಲ್ಲದೆ ಇಡೀ ಮಹಿಳಾ ಸಮುದಾಯದ ಬದುಕಿನ ಸಂಗತಿಗಳನ್ನು ಬರೆಯುತ್ತಾ ಬಂದಿದ್ದೇನೆ. ನನ್ನ ಬರಹಕ್ಕಾಗಿ ನನಗೆ ಮುಸ್ಲಿಂ ಸಮುದಾಯದೊಳಗೇ ಕೂಡ ಕೆಲವು ವಿರೋಧಗಳನ್ನೂ ಎದುರಿಸಬೇಕಾಯಿತು. ಆದರೂ ಎಲ್ಲ ಆಕ್ಷೇಪಗಳನ್ನು ಎದುರಿಸಿ ನಾನು ಮುಂದೆ ಬಂದಿದ್ದೇನೆ,” ಎಂದರು.
ಪ್ರಶಸ್ತಿ ನಂತರ ದೇಶ-ವಿದೇಶದಿಂದ ಆಹ್ವಾನ
ಬೂಕರ್ ಪ್ರಶಸ್ತಿಯ ಪರಿಣಾಮವಾಗಿ ತನ್ನ ಜೀವನದಲ್ಲಿ ಆಗಿರುವ ಬದಲಾವಣೆಗಳನ್ನು ವಿವರಿಸಿದ ಅವರು, “ಈ ಪ್ರಶಸ್ತಿಯ ನಂತರ ನನಗೆ ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳು, ದೇಶ-ವಿದೇಶಗಳಿಂದ ಆಹ್ವಾನಗಳ ಸುರಿಮಳೆ ಬಂದಿದೆ. ಬೂಕರ್ ಪ್ರಶಸ್ತಿ ಮೂಲಕ ವಿದೇಶಿ ಪ್ರಕಾಶಕರೊಂದಿಗೆ ಕೂಡ ಸಂಪರ್ಕ ಸಾಧಿಸಲು ಸಾಧ್ಯವಾಯಿತು. ಕೆಲವೆಡೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆದರೆ ತಿಂಗಳಿಗೆ ಐದು-ಆರು ಕಾರ್ಯಕ್ರಮಗಳಿಗೆ ಆಹ್ವಾನಗಳು ಬರುತ್ತಿವೆ. ಬೂಕರ್ ಪ್ರಶಸ್ತಿ ಬರುವ ಮೂಲಕ ಇಡೀ ಭಾರತವೇ ಖುಷಿಪಟ್ಟಿದೆ. ಇದು ನನ್ನನ್ನು ತುಂಬಾ ಹೆಮ್ಮೆಯಿಂದ ಕೂಡಿಸಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಕುರಿತು ತೀರ್ಮಾನ ಇನ್ನೂ ಬಾಕಿ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸುವ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಬಾನು ಮುಷ್ತಾಕ್, “ಇನ್ನು ಸಾಕಷ್ಟು ಸಮಯ ಬಾಕಿಯಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ವಿಚಾರದಲ್ಲಿ ಸರ್ಕಾರ ತನಿಖೆಗೆ ಆದೇಶಿಸಿದೆ. ಪರಿಷತ್ ಅಧ್ಯಕ್ಷರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಸಾಹಿತ್ಯ ಪರಿಷತ್ತಿನಲ್ಲಿ ರಾಜ್ಯಾಧ್ಯಕ್ಷರೊಬ್ಬರೇ ಎಲ್ಲವೂ ಅಲ್ಲ. ಪರಿಷತ್ತಿನಲ್ಲಿ ಎಲ್ಲಾ ಜಿಲ್ಲೆಗಳ ಅಧ್ಯಕ್ಷರೂ ಸೇರಿದ್ದಾರೆ. ಹಾಗಾಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ನಿರ್ಧಾರ ಮಾಡುತ್ತೇನೆ,” ಎಂದು ಹೇಳಿದರು.
