ಬೆಂಗಳೂರು(ಆ.29): ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರಗಾಮಿ ಸಂಘಟನೆ ಸಹಾಯದಿಂದ ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬರು ಟ್ವೀಟ್‌ ಮಾಡಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳುವಂತೆ ಕೇಂದ್ರ ಗುಪ್ತದಳದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದರ ಸಂಬಂಧ ರಾಜ್ಯದ ಎಲ್ಲ ನಗರದ ಪೊಲೀಸ್‌ ಕಮಿಷನರ್‌, ಎಸ್‌ಪಿ, ರೈಲ್ವೆ ಹಾಗೂ ವಿಮಾನ ನಿಲ್ದಾಣದ ರಕ್ಷಣಾ ಪಡೆಗಳ ಅಧಿಕಾರಿಗಳಿಗೆ ತುರ್ತು ಸಂದೇಶ ಕಳುಹಿಸಲಾಗಿದೆ.

ಟೆರರರ್ ಡಾಕ್ಟರನ್ನ ಐಸಿಸ್‌ಗೆ ಸೇರಿಸಿದ್ದು ಇನ್ನೊಬ್ಬ ಡಾಕ್ಟರ್!

ಕಾಕಿನಾಡದ ಕೆವಿಸಿಯ ಸಿಇಒ ಹಾಗೂ ಸಂಸ್ಥಾಪಕ ಎನ್ನಲಾದ ಶ್ರೀಪಾದ್‌ ಎಂಬಾತ ನಿರ್ವಹಣೆ ಮಾಡುತ್ತಿರುವ ‘ಗುರುಕೇರಳ ರಾಮೇಶ್ವರ’ ಟ್ವೀಟರ್‌ ಖಾತೆಯಲ್ಲಿ ಬೆದರಿಕೆ ಟ್ವಿಟ್‌ ಇದೆ. ‘ನಾನು ಬೆಂಗಳೂರಿಗೆ ಭೇಟಿ ನೀಡುತ್ತಿದ್ದೇನೆ. ಬೆಂಗಳೂರು ಮೆಟ್ರೋ ಹಾಗೂ ಯಶವಂತಪುರದ ರೈಲ್ವೆ ನಿಲ್ದಾಣಗಳಿಗೆ ವಾರದೊಳಗೆ ಸೂಕ್ತ ಭದ್ರತೆ ಕೈಗೊಳ್ಳಿ. ಐಸಿಸ್‌ ಸಹಾಯದಿಂದ ಬಾಂಬ್‌ ಸ್ಫೋಟಿಸಿ ವಿಮಾನ ಹಾಗೂ ರೈಲ್ವೆಗಳನ್ನು ಸುಟ್ಟು ಹಾಕುತ್ತೇನೆ’ ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.

ಇದನ್ನೇ ಉಲ್ಲೇಖಿಸಿ ಗುಪ್ತದಳದ ಅಧಿಕಾರಿಗಳು ತುರ್ತು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಯಶವಂತಪುರ, ಕೇಂದ್ರ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.