ರಾಜ್ಯ ಬಿಜೆಪಿ ಕಚೇರಿ ಬ್ಲಾಸ್ಟ್‌ ಫೇಲಾಗಿದ್ದಕ್ಕೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌..!

ಆರೋಪಿಗಳು ಕಳೆದ ಜನವರಿ 22ರಂದು ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭದ ದಿನ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಬಾಂಬ್‌ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದರು. ಈ ಸಂಚು ವಿಫಲವಾದ ಹಿನ್ನೆಲೆಯಲ್ಲಿ ಆರೋಪಿಗಳು ಮತ್ತೆ ಸಂಚು ರೂಪಿಸಿ ಮಾ.1ರಂದು ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Bomb in Rameshwaram cafe because the Karnataka state BJP office failed to blast Says NIA grg

ಬೆಂಗಳೂರು(ಸೆ.10):  ನಗರದ ಐಟಿಪಿಎಲ್‌ ಬ್ರೂಕ್‌ ಫೀಲ್ಡ್‌ನ ‘ದಿ ರಾಮೇಶ್ವರಂ ಕೆಫೆ’ ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ತನಿಖೆ ನಡೆಸಿ ನಾಲ್ವರು ಆರೋಪಿಗಳ ವಿರುದ್ಧ ಸೋಮವಾರ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಆರೋಪಿಗಳು ಕಳೆದ ಜನವರಿ 22ರಂದು ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭದ ದಿನ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಬಾಂಬ್‌ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದರು. ಈ ಸಂಚು ವಿಫಲವಾದ ಹಿನ್ನೆಲೆಯಲ್ಲಿ ಆರೋಪಿಗಳು ಮತ್ತೆ ಸಂಚು ರೂಪಿಸಿ ಮಾ.1ರಂದು ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ದೇಶದಲ್ಲಿ ಮತ್ತೆ ದಾಳಿಗೆ 'ರಾಮೇಶ್ವರಂ ಕೆಫೆ ಬಾಂಬ್‌' ಸ್ಫೋಟದ ರೂವಾರಿ ಫರ್ಮಾನು: ಹಿಂದೂ ನಾಯಕರೇ ಟಾರ್ಗೆಟ್

ಆರೋಪಿಗಳಾದ ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಮುಸಾವೀರ್‌ ಹುಸೇನ್‌ ಶಾಜಿಬ್‌, ಅಬ್ದುಲ್‌ ಮತೀನ್‌ ಅಹಮ್ಮದ್‌ ತಾಹಾ, ಮಾಜ್‌ ಮುನೀರ್‌ ಅಹಮ್ಮದ್‌ ಹಾಗೂ ಮುಜಾಮಿಲ್‌ ಶರೀಫ್‌ ವಿರುದ್ಧ ಯುಎಪಿಎ ಹಾಗೂ ಪಿಡಿಎಲ್‌ಪಿ ಕಾಯ್ದೆಗಳ ವಿವಿಧ ಸೆಕ್ಷನಗಳ ಅಡಿಯಲ್ಲಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಸದ್ಯ ಈ ನಾಲ್ವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಐಟಿಪಿಎಲ್‌ ಬ್ರೂಕ್‌ಫೀಲ್ಡ್‌ನ ಕೆಫೆಯಲ್ಲಿ ಮಾ.1ರಂದು ಟಿಫನ್‌ ಬಾಕ್ಸ್‌ನಲ್ಲಿ ಸುಧಾರಿತ ಸ್ಫೋಟಕ ವಸ್ತು (ಐಇಡಿ) ಇರಿಸಿ ಸ್ಫೋಟಿಸಲಾಗಿತ್ತು. ಈ ಸ್ಫೋಟದಲ್ಲಿ ಹೋಟೆಲ್‌ ಸಿಬ್ಬಂದಿ, ಗ್ರಾಹಕರು ಸೇರಿ ಒಟ್ಟು 9 ಮಂದಿ ಗಾಯಗೊಂಡಿದ್ದರು. ಹೋಟೆಲ್‌ಗೆ ಭಾರೀ ಪ್ರಮಾಣದ ಹಾನಿಯಾಗಿತ್ತು. ಇದರ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಎನ್‌ಐಎ ಅಧಿಕಾರಿಗಳು, ಬೆಂಗಳೂರು, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳ ಸಹಕಾರದೊಂದಿಗೆ ಮಾಹಿತಿ ಪಡೆದು ತನಿಖೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

ಇಬ್ಬರೇ ಸ್ಫೋಟದ ಮಾಸ್ಟರ್‌ ಮೈಂಡ್‌:

ಅಂದು ಮುಸಾವೀರ್‌ ಹುಸೇನ್‌ ಶಾಜೀಬ್‌ ಗ್ರಾಹಕರ ಸೋಗಿನಲ್ಲಿ ಕೆಫೆಗೆ ಬಂದು ಕೈ ತೊಳೆಯುವ ಸ್ಥಳದಲ್ಲಿ ಐಇಡಿ ಬಾಂಬ್‌ ಇದ್ದ ಟಿಫನ್‌ ಬಾಕ್ಸ್‌ ಇರಿಸಿ ಪರಾರಿಯಾಗಿದ್ದ. ಬಳಿಕ ಆ ಬಾಂಬ್‌ ಸ್ಫೋಟಗೊಂಡಿತ್ತು. ಈ ಸ್ಫೋಟಕ್ಕೆ ಆರೋಪಿ ಅಬ್ದುಲ್‌ ಮತೀನ್‌ ತಾಹಾ ಸಾಥ್‌ ನೀಡಿದ್ದ. ಈ ಇಬ್ಬರೇ ಕೆಫೆ ಬಾಂಬ್‌ ಸ್ಫೋಟದ ಮಾಸ್ಟರ್‌ ಮೈಂಡ್‌ಗಳು ಎಂಬುದು ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ.

ಆರೋಪಿಗಳಾದ ಮುಸಾವೀರ್ ಹುಸೇನ್‌ ಮತ್ತು ಅಬ್ದುಲ್‌ ಮತೀನ್‌ ತಾಹಾ ಈ ಹಿಂದೆ ಐಸಿಸ್‌ ಉಗ್ರ ಸಂಘಟನೆಯ ಅಲ್‌ ಹಿಂದ್‌ ಮಾಡ್ಯೂಲ್‌ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದು, 2020ರಿಂದ ತಲೆಮರೆಸಿಕೊಂಡಿದ್ದರು. ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ 42 ದಿನಗಳ ಬಳಿಕ ಎನ್‌ಐಎ ಅಧಿಕಾರಿಗಳು ಪಶ್ಚಿಮ ಬಂಗಾಳದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದರು.

ಮುಸ್ಲಿಂ ಯುವಕರಿಗೆ ಐಸಿಸ್‌ನತ್ತ ಸೆಳೆತ:

ಈ ಇಬ್ಬರು ಆರೋಪಿಗಳು ಐಸಿಎಸ್‌ ಉಗ್ರ ಸಂಘಟನೆಯ ಮೂಲಭೂತವಾದಿಗಳಾಗಿದ್ದಾರೆ. ಈ ಹಿಂದೆ ಸಿರಿಯಾದ ಐಸಿಸ್‌ ಪ್ರಾಂತ್ಯಗಳಲ್ಲಿ ಬಾಂಬ್‌ ಸ್ಫೋಟಿಸಲು ಸಂಚು ರೂಪಿಸಿದ್ದರು. ಅಮಾಯಕ ಮುಸ್ಲಿಂ ಯುವಕರನ್ನು ಸೆಳೆದು ಐಸಿಸ್‌ ಸಿದ್ಧಾಂತ ಬೋಧಿಸಿ ಅವರನ್ನು ಉಗ್ರರಾಗಿ ರೂಪಿಸುವಲ್ಲಿ ತೊಡಗಿಸಿಕೊಂಡಿದ್ದರು. ಆರೋಪಿಗಳಾದ ಮಾಜ್‌ ಮುನೀರ್‌ ಅಹಮ್ಮದ್‌ ಮತ್ತು ಮುಜಾಮಿಲ್‌ ಶರೀಫ್‌ನನ್ನು ಐಸಿಎಸ್‌ ಸಿದ್ಧಾಂತಕ್ಕೆ ಸೆಳೆಯುವಲ್ಲಿ ಸಫಲರಾಗಿದ್ದರು ಎಂಬುದು ಎನ್‌ಐಎ ತನಿಖೆಯಲ್ಲಿ ತಿಳಿದು ಬಂದಿದೆ.

ಡಾರ್ಕ್‌ ವೆಬ್‌ನಲ್ಲಿ ದಾಖಲೆ ಡೌನ್‌ಲೋಡ್‌:

ಈ ಇಬ್ಬರು ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಭಾರತೀಯ ಸಿಮ್‌ ಕಾರ್ಡ್‌ಗಳು ಹಾಗೂ ಬ್ಯಾಂಕ್‌ ಖಾತೆಗಳನ್ನು ತೆರೆದು ಬಳಸುತ್ತಿದ್ದರು. ಡಾರ್ಕ್‌ ವೆಬ್‌ನಿಂದ ಭಾರತ ಮತ್ತು ಬಾಂಗ್ಲಾದೇಶದ ವಿವಿಧ ವ್ಯಕ್ತಿಗಳ ಗುರುತಿನ ದಾಖಲೆಗಳನ್ನು ಡೌನ್‌ಲೋಡ್‌ ಮಾಡಿ ಬಳಸುತ್ತಿದ್ದರು. ಈ ಹಿಂದೆ ಬೆಂಗಳೂರಿನಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಲಷ್ಕರ್‌- ಎ-ತೋಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಸದಸ್ಯ ಮೊಹಮ್ಮದ್‌ ಶಹೀದ್‌ ಫೈಸಲ್‌ಗೆ ಮಾಜಿ ಅಪರಾಧಿ ಶೋಯೆಬ್‌ ಅಹಮ್ಮದ್‌ ಮಿರ್ಜಾ, ಅಬ್ದುಲ್‌ ಮತೀನ್ ತಾಹಾನನ್ನು ಪರಿಚಯಿಸಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಮುಸಾವೀರ್ ಪ್ರಕ್ರಿಯೆ ಮರುಸೃಷ್ಟಿ, ಬಟ್ಟೆ ಬದಲಿಸಿದ ಮಸೀದಿಯ ಮಹಜರ್!

ಬಳಿಕ ಅಬ್ದುಲ್‌ ಮತೀನ್ ತಾಹಾ, ಎಲ್‌ಇಟಿ ಹ್ಯಾಂಡ್ಲರ್‌ ಶಹೀದ್‌ ಫೈಸಲ್‌ನನ್ನು ಅಲ್‌ ಹಿಂದ್ ಐಸಿಸ್‌ ಮಾಡ್ಯೂಲ್‌ ಪ್ರಕರಣದ ಆರೋಪಿ ಮೆಹಬೂಬ್‌ ಪಾಷಾ ಮತ್ತು ಐಸಿಸ್‌ ದಕ್ಷಿಣ ಭಾರತದ ಹ್ಯಾಂಡ್ಲರ್‌ ಅಮೀರ್‌ ಖಾಜಾ ಮೊಹಿದ್ದೀನ್‌ ಹಾಗೂ ಮಾಜ್‌ ಮುನೀರ್‌ಗೆ ಪರಿಚಯಿಸಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪೂರೈಕೆ:

ದಕ್ಷಿಣ ಭಾರತದ ಐಸಿಸ್‌ ಹ್ಯಾಂಡ್ಲರ್‌ ಅಮೀರ್‌ ಖಾಜಾ ಮೊಹಿದ್ದೀನ್‌, ಆರೋಪಿಗಳಾದ ಮುಸಾವೀರ್‌ ಹುಸೇನ್‌ ಶಾಜಿಬ್‌ ಮತ್ತು ಅಬ್ದುಲ್‌ ಮತೀನ್‌ ಅಹಮ್ಮದ್‌ ತಾಹಾಗೆ ಕ್ರಿಪ್ಟೋ ಕರೆನ್ಸಿಗಳ ಮೂಲಕ ಹಣ ಪೂರೈಸುತ್ತಿದ್ದ. ಬಳಿಕ ಆರೋಪಿಗಳು ವಿವಿಧ ಟೆಲಿಗ್ರಾಮ್‌ ಆಧಾರಿತ ಪಿಟುಪಿ ಪ್ಲಾಟ್‌ಫಾರ್ಮ್‌ಗಳ ಸಹಾಯದಿಂದ ನಗದು ರೂಪದಲ್ಲಿ ಹಣ ಪಡೆದು ಬೆಂಗಳೂರಿನಲ್ಲಿ ಹಿಂಸಾಚಾರ ನಡೆಸಲು ಬಳಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಎನ್‌ಐಎ ತಿಳಿಸಿದೆ.

Latest Videos
Follow Us:
Download App:
  • android
  • ios