ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕರಿಗೆ ಹೊಸ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಎರಡು ಬಾರಿ ಅಪಘಾತಕ್ಕೆ ಕಾರಣರಾದ ಚಾಲಕರನ್ನು ವಜಾ ಮಾಡಲಾಗುತ್ತದೆ ಮತ್ತು ಚಾಲನೆ ವೇಳೆ ಮೊಬೈಲ್ ಬಳಕೆಗೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚುವರಿ ತರಬೇತಿಯನ್ನೂ ನೀಡಲಾಗುವುದು.

ಬೆಂಗಳೂರು (ಆ.22): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಗಳನ್ನು ಬಳಸುವ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ತನ್ನ ಚಾಲಕರಿಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳ ಪ್ರಕಾರ, ನಗರದಲ್ಲಿ 2 ಬಾರಿ ಅಪಘಾತಕ್ಕೆ ಕಾರಣರಾದ ಚಾಲಕರನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ ಮತ್ತು ಚಾಲನೆ ಮಾಡುವಾಗ ಮೊಬೈಲ್ ಬಳಸಿದರೆ ಕೂಡಲೇ ಅಮಾನತು ಮಾಡಲಾಗುತ್ತದೆ ಎಂದು ಆದೇಶ ಹೊರಡಿಸಿದೆ.

ಅಪಘಾತಗಳಿಗೆ ಹೊಸ ಶಿಕ್ಷಾ ಕ್ರಮ:

  • ಮೊದಲ ಅಪಘಾತ: ಚಾಲಕನ ನಿರ್ಲಕ್ಷ್ಯದಿಂದ ಮೊದಲ ಬಾರಿಗೆ ಅಪಘಾತ ಸಂಭವಿಸಿದರೆ, 6 ತಿಂಗಳ ಕಾಲ ಅಮಾನತುಗೊಳಿಸಲಾಗುತ್ತದೆ. ಈ ಅವಧಿಯಲ್ಲಿ 3 ಇನ್‌ಕ್ರಿಮೆಂಟ್‌ಗಳನ್ನು ಕಡಿತಗೊಳಿಸಲಾಗುತ್ತದೆ. ಇನ್ನು ಅಮಾನತು ಅವಧಿ ಮುಗಿದ ನಂತರ, ಚಾಲಕರಿಗೆ ಮತ್ತೆ ವಿಶೇಷ ತರಬೇತಿ ನೀಡಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ.
  • ಎರಡನೇ ಅಪಘಾತ: ಒಂದು ವೇಳೆ ಚಾಲಕ ಎರಡನೇ ಬಾರಿಯೂ ಅಪಘಾತಕ್ಕೆ ಕಾರಣನಾದರೆ ಮತ್ತು ಅದರಲ್ಲಿ ಆತನ ತಪ್ಪು ಸಾಬೀತಾದರೆ, ಆತನನ್ನು ಬಿಎಂಟಿಸಿ ಸೇವೆಯಿಂದ ಸಂಪೂರ್ಣವಾಗಿ ವಜಾ ಮಾಡಲಾಗುತ್ತದೆ.
  • ಪ್ರಾಣಹಾನಿ ಸಂಭವಿಸಿದರೆ: ಒಂದು ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಹಾನಿಯಾದರೆ, ಅದು ಮೊದಲ ಅಪಘಾತವಾಗಿದ್ದರೂ ಸಹ, ಚಾಲಕನನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಲಾಗುತ್ತದೆ. ಜಯನಗರದಲ್ಲಿ ಇತ್ತೀಚೆಗೆ ನಡೆದ ವಿದ್ಯುತ್ ಬಸ್ ಅಪಘಾತದಲ್ಲಿ ಮಧುರಾಜ್ ಎಂಬ ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕರು ಸಾವನ್ನಪ್ಪಿದ್ದ ಕಾರಣ ಅವರನ್ನು ವಜಾ ಮಾಡಲಾಗಿದೆ.
  • ಮೊಬೈಲ್ ಬಳಕೆಗೆ ಕಟ್ಟುನಿಟ್ಟಿನ ನಿಷೇಧ: ಇನ್ನು ಬಿಎಂಟಿಸಿ ಬಸ್ ಚಾಲಕರು ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಕೂಡಲೇ ಅಂತಹ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗುತ್ತದೆ ಎಂದು ತಿಳಿಸಿದೆ.
  • ವಿದ್ಯುತ್ ಬಸ್ ಚಾಲಕರು: ಡ್ಯೂಟಿ ವೇಳೆ ಮೊಬೈಲ್ ಬಳಸಿದರೆ ಕಂಪನಿಗೆ ₹5,000 ದಂಡ ಮತ್ತು ಚಾಲಕರಿಗೆ 15 ದಿನಗಳ ಅಮಾನತು ಶಿಕ್ಷೆ ವಿಧಿಸಲಾಗುತ್ತದೆ. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಚಾಲಕರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳುತ್ತಾರೆ ಮತ್ತು ಅವರನ್ನು ಮತ್ತೊಂದು ಘಟಕಕ್ಕೆ ವರ್ಗಾಯಿಸುತ್ತಾರೆ.

ಹೆಚ್ಚುವರಿ ಕ್ರಮಗಳು:

ಬೆಂಗಳೂರಿನಲ್ಲಿ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಎಂಟಿಸಿ ಚಾಲಕರಿಗೆ ಸೋಮವಾರದಿಂದ ವಿಶೇಷ ತರಬೇತಿ ನೀಡಲಾಗುತ್ತದೆ. ಈ ತರಬೇತಿಯಲ್ಲಿ ಯೋಗ ಮತ್ತು ಅಪಘಾತಗಳನ್ನು ತಡೆಯುವ ಬಗ್ಗೆ ಪರಿಣತರಿಂದ ಮಾರ್ಗದರ್ಶನ ನೀಡಲಾಗುತ್ತದೆ. ಅಲ್ಲದೆ, ಮದ್ಯಪಾನ ಮಾಡಿ ಬಸ್ ಚಲಾಯಿಸುವುದು ಮತ್ತು ಟಿಕೆಟ್ ನೀಡದೆ ಸಿಕ್ಕಿಬೀಳುವುದು ಮುಂತಾದ ಕರ್ತವ್ಯ ಲೋಪಗಳಿಗೂ ಕಠಿಣ ಅಮಾನತು ಕ್ರಮ ಜರುಗಿಸಲಾಗುವುದು ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ. ಈ ಹೊಸ ನಿಯಮಗಳು ರಸ್ತೆ ಸುರಕ್ಷತೆ ಮತ್ತು ಚಾಲಕರ ಜವಾಬ್ದಾರಿಯನ್ನು ಹೆಚ್ಚಿಸುವ ಗುರಿ ಹೊಂದಿವೆ.

ದಿನಕ್ಕೊಂದು ಬಲಿ ಪಡೆದ ಬಿಎಂಟಿಸಿ ಬಸ್:

ಇನ್ನು ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಲ್ಲಿ ದಿನಕ್ಕೊಬ್ಬರಂತೆ ಪಕ್ಕದಲ್ಲಿ ಬರುವ ವಾಹನ ಸವಾರರು ಹಾಗೂ ಪ್ರಯಾಣಿಕರನ್ನು ಬಿಎಂಟಿಸಿ ಬಸ್‌ಗಳು ಬಲಿ ಪಡೆದಿದ್ದವು. ಕಳೆದ 15 ದಿನಗಳಲ್ಲಿ ನಾಲ್ವರ ಮೇಲೆ ಬಿಎಂಟಿಸಿ ಬಸ್ ಹರಿದು ಪ್ರಾಣ ಕಸಿದಿವೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಚಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಲು ಮುಂದಾಗಿದೆ. ಮೂರು ಪ್ರಕರಣಗಳಲ್ಲಿ ಬೈಕ್ ಸವಾರರು ಕೆಳಗೆ ಬಿದ್ದಾಕ್ಷಣ ಅವರ ಮೇಲೆ ಬಿಎಂಟಿಸಿ ಬಸ್ ಹರಿದು ಸಾವನ್ನಪ್ಪಿದರೆ, ಮತ್ತೊಂದು ಪ್ರಕರಣದಲ್ಲಿ ಬಿಎಂಟಿಸಿ ಬಸ್‌ಗೆ ಪ್ರಯಾಣಿಕ ಹತ್ತುವಾಗ ಬಾಗಿಲು ಮುಚ್ಚಿದ್ದು, ನಿಯಂತ್ರಣ ಸಿಗದ ಪ್ರಯಾಣಿಕನ ಮೇಲೆ ಬಸ್ ಹತ್ತಿ ಸಾವು ಸಂಭವಿಸಿತ್ತು. ಈ ಘಟನೆ ಜಯನಗರದಲ್ಲಿ ನಡೆದಿದ್ದು, ಸಂಬಂಧಿತ ಬಸ್ ಚಾಲಕನನ್ನು ಸೇವೆಯಿಂದ ವಜಾ ಮಾಡಲಾಗಿದೆ.