ಕಳೆದ ವಾರದಲ್ಲಿ ಬಿಎಂಟಿಸಿ ಬಸ್‌ಗಳ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರು ಬೈಕ್ ಸವಾರರು ಮತ್ತು ಒಬ್ಬ ಬಿಎಂಟಿಸಿ ಪ್ರಯಾಣಿಕರು ಸಾವನ್ನಪ್ಪಿದ ಘಟನೆಗಳು ನಡೆದಿವೆ. ಚಾಲಕರ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯೇ ಅಪಘಾತಗಳಿಗೆ ಕಾರಣ ಎಂದು ಆರೋಪಿಸಲಾಗಿದೆ.

ಬೆಂಗಳೂರು (ಆ.20): ಸಿಲಿಕಾನ್ ಸಿಟಿ ಜನರಿಗೆ ಸಾರಿಗೆ ಸೇವೆ ನೀಡುವ ಬಿಎಂಟಿಸಿ ಬಸ್‌ಗಳು ಜನರನ್ನು ಹೊತ್ತೊಯ್ಯುವ ಬದಲು, ಜನ ಮೇಲೆಯ ಹತ್ತಿಕೊಡು ಹಗುತ್ತಿವೆ. ಕಳೆದೊಂದು ವಾರದಲ್ಲಿ ಬಿಎಂಟಿಸಿ ಬಸ್‌ಗಳು ಹರಿದು ಮೂವರು ಸಾವನ್ನಪ್ಪಿದ್ದಾರೆ. ಇದರಲ್ಲಿ ಇಬ್ಬರು ಬೈಕ್ ಸವಾರರಾದರೆ, ಇನ್ನೊಬ್ಬ ವ್ಯಕ್ತಿ ಬಿಎಂಟಿಸಿ ಪ್ರಯಾಣಿಕನೇ ಆಗಿದ್ದಾನೆ ಎಂಬುದು ದುರಂತದ ವಿಚಾರವಾಗಿದೆ.

ಬೆಂಗಳೂರಿನ ರೂಪೇನಾ ಅಗ್ರಹಾರ ಬಳಿ‌ ಆ.13ರ ಮಧ್ಯಾಹ್ನ 2.15ರ ಸುಮಾರಿಗೆ ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಚಂದಾಪುರದಿಂದ ಬನಶಂಕರಿಗೆ ಬರ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಡಿಪೋ ನಂಬರ್ 21ಕ್ಕೆ ಸೇರಿದ KA 57 F5778 ನಂಬರ್‌ನ ಬಸ್, 600F/14 ರೂಟ್‌ನಲ್ಲಿ ಕಾರ್ಯಚರಣೆ ಮಾಡುವ ವೇಳೆ ಈ ದುರಘಟನೆ ಸಂಭವಿಸಿದೆ. ರಸ್ತೆಯಲ್ಲಿ ಬೈಕ್ ಸವಾರ ಹೋಗುವಾಗ ಪಕ್ಕದಲ್ಲಿ ಹೋಗುತ್ತಿದ್ದ ಆಟೋಗೆ ತಗಲಿ ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ ಬೈಕ್ ಸವಾರನ ಮೇಲೆ ಬಿಎಂಟಿಸಿ ಬಸ್‌ನ ಚಕ್ರ ಹರಿದಿದೆ. ಬಿಎಂಟಿಸಿ ಬಸ್ಸಿನ ಹಿಂಬದಿ ಚಕ್ರ ಬೈಕ್ ಸವಾರನ ಮೇಲೆ ಹರಿಯುತ್ತಿದ್ದಂತೆ, ಸವಾರ ಅಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಅಪಘಾತ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಇನ್ನು ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿ ಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ಎಕ್ಸ್‌ಕ್ಲೂಸಿವ್ ಸಿಸಿಟಿವಿ ದೃಶ್ಯ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. ಈ ದೃಶ್ಯದಲ್ಲಿ ಬಿಎಂಟಿಸಿ ಚಾಲಕನ ತಪ್ಪಿಲ್ಲದಿರೋದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಬೈಕ್ ಸವಾರ ಆಟೋಗೆ ಡಿಕ್ಕಿಯಾಗಿ ಬಸ್‌ನ ಚಕ್ರದಡಿ ಬಿದ್ದಿದ್ದಾನೆ. ಆದರೆ, ತನ್ನದೇವ ವೇಗದಲ್ಲಿ ಹೋಗುತ್ತಿದ್ದ ಬಸ್ ಬೈಕ್ ಸವಾರ ಸೈಯದ್ ಜಾಫರ್ ಮೇಲೆ ಹರಿದಿದೆ. ಆಗಸ್ಟ್ 13ರಂದು ನಡೆದಿದ್ದ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಯಿಂದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ರೂಪೇನ ಅಗರಹಾರದಲ್ಲಿ ಸೈಯದ್ ಜಾಫರ್ ಸಾವಿಗೆ ಬಿಎಂಟಿಸಿ ಚಾಲಕ ಜಯರಾಮಯ್ಯ ಅವರ ನಿರ್ಲಕ್ಷ್ಯವೇ ಕಾರಣವೆಂದು ಮಡಿವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿತ್ತು. ಆದರೆ ಸಿಸಿಟಿವಿಯಲ್ಲಿ ಚಾಲಕನ ನಿರ್ಲಕ್ಷ್ಯ ಇಲ್ಲದಿರೋದು ಮೇಲ್ನೋಟಕ್ಕೆ ಬಯಲಾಗಿದೆ. ಇನ್ನು ಆಟೋ ಚಾಲಕ ಹಾಗೂ ಬೈಕ್ ಸವಾರನ ನಿರ್ಲಕ್ಷ್ಯ ಕಂಡುಬರುತ್ತಿವೆ.

ಸಂಜಯನಗರದಲ್ಲಿ ಟೆಕ್ಕಿ ಮೇಲೆ ಹರಿದ ಬಿಎಂಟಿಸಿ ಬಸ್:

ಬಿಎಂಟಿಸಿ ಬಸ್ ಹರಿದು ಟೆಕ್ಕಿ ರೋಷನ್ ಎನ್ನುವವರು ಸಾವನ್ನಪ್ಪಿದ ಘಟನೆ ಸಂಜಯ್ ನಗರದಲ್ಲಿ ನಡೆದಿದೆ. ಬೆಂಗಳೂರಿನ ಡಿಪೋ 8ಕ್ಕೆ ಸೇರಿದ KA 57 F 6468 ನಂಬರಿನ ಬಿಎಂಟಿಸಿ ಬಸ್‌ನ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಂಜಯನಗರ ನಿವಾಸಿ ರೋಷನ್ ಮೃತಪಟ್ಟಿದ್ದಾನೆ. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆಗೆ ಮಾರ್ಗಾಚರಣೆ ಮಾಡುತ್ತಿದ್ದ ಬಸ್ ಅನ್ನು ಬೈಕ್ ಸವಾರ ಓವರ್‌ಟೇಕ್ ಮಾಡಲು ಹೋಗಿ ಬಸ್ಸಿನ ಹಿಂಬದಿ ಚಕ್ರದಡಿ ಬಿದ್ದಿದ್ದಾನೆ. ಕೆಳಗೆ ಬಿದ್ದ ಸವಾರನ ಮೇಲೆ ಹರಿದ ಬಿಎಂಟಿಸಿ ಬಸ್‌ನ ಬಲಬದಿಯ ಚಕ್ರ ಹರಿದಿದೆ. ಕಡಲೇ ಬೈಕ್ ಸವಾರ ರೋಷನ್ ಮೃತಪಟ್ಟಿದ್ದಾನೆ.

ಬಿಎಂಟಿಸಿ ಬಸ್ ಹತ್ತುವಾಗ ಬಾಗಿಲು ಮುಚ್ಚಿದ ಡ್ರೈವರ್; ಹಿಂಬದಿ ಗಾಲಿಗೆ ಸಿಲುಕಿ ಪ್ರಯಾಣಿಕ ಸಾವು!

ಮತ್ತೊಂದೆಡೆ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಜಯನಗರ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಆಯ ತಪ್ಪಿ ಬಿದ್ದ ಪ್ರಯಾಣಿಕ ಬಸ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್‌ನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಂಪಂಗಿ ಎಂಬ ವ್ಯಕ್ತಿ ಮಾರ್ಕೆಟ್‌ಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ರೂಟ್ ನಂ.25A ಬಸ್ ಹತ್ತುವಾಗ ಚಾಲಕ ಬಸ್ ಅನ್ನು ದಿಢೀರನೆ ಮುಂದಕ್ಕೆ ಚಲಾಯಿಸಿದ್ದರಿಂದ ಹಾಗೂ ಬಾಗಿಲನ್ನು ಮುಚ್ಚಿದ್ದರಿಂದ ಬಸ್ ಹತ್ತುತ್ತಿದ್ದ ಪ್ರಯಾಣಿಕ ಸಂಪಂಗಿ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಬಾಗಿಲ ಬಳಿ ಬಿದ್ದ ಪ್ರಯಾಣಿಕನ ಮೇಲೆ ಹಿಂಬದಿ ಚಕ್ರ ತಲೆ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನಾ ಸ್ಥಳಕ್ಕೆ ಜಯನಗರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲಕನ ಅಜಾಗರೂಕತೆಯಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತ ಸಂಪಂಗಿ ಜಯನಗರ 4ನೇ ಬ್ಲಾಕ್ ನಿವಾಸಿಯಾಗಿದ್ದರು ಎಂದು ಗುರುತಿಸಲಾಗಿದೆ. ಬಿಎಂಟಿಸಿ ಚಾಲಕರ ಅಜಾಗರೂಕ ಚಾಲನೆಯಿಂದ ಆಗಾಗ್ಗೆ ಇಂತಹ ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.