ಅಹಮದಾಬಾದ್‌[ಡಿ.05]: ಬೆಂಗಳೂರು ಮೂಲದ ಸಹೋದರಿಯರಿಬ್ಬರ ಅಪಹರಣ, ಅಕ್ರಮ ಬಂಧನ ಆರೋಪ ಎದುರಿಸುತ್ತಿರುವ ಬಿಡದಿಯ ಧ್ಯಾನಪೀಠದ ವಿವಾದಿತ ಸ್ವಾಮೀಜಿ ನಿತ್ಯಾನಂದ ವಿರುದ್ಧ ಜಾಗತಿಕ ಪೊಲೀಸ್‌ ಸಂಸ್ಥೆ ಇಂಟರ್‌ಪೋಲ್‌ ಮೂಲಕ ಬ್ಲೂಕಾರ್ನರ್‌ ನೋಟಿಸ್‌ ಹೊರಡಿಸಲು ಗುಜರಾತ್‌ ಪೊಲೀಸರು ಪ್ರಕ್ರಿಯೆ ಆರಂಭಿಸಿದ್ದಾರೆ.

ಅಹಮದಾಬಾದ್‌ ಪೊಲೀಸರು ಈ ಸಂಬಂಧ ಈಗಾಗಲೇ ರಾಜ್ಯ ಸಿಐಡಿಗೆ ಮನವಿ ಸಲ್ಲಿಸಿದ್ದಾರೆ. ಆ ಕೋರಿಕೆಯನ್ನು ಸಿಬಿಐಗೆ ಸಿಐಡಿ ವರ್ಗಾಯಿಸಬೇಕಾಗಿದೆ. ತದನಂತರದಲ್ಲಿ ಸಿಬಿಐ ಅಧಿಕೃತವಾಗಿ ಇಂಟರ್‌ಪೋಲ್‌ಗೆ ಮನವಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಇಬ್ಬರು ಪುತ್ರಿಯರನ್ನು ನಿತ್ಯಾನಂದ ಅಪಹರಿಸಿ, ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾನೆ ಎಂದು ಬೆಂಗಳೂರಿನ ಗಜಾನನ ಶರ್ಮಾ ಎಂಬುವರು ದೂರು ನೀಡಿದ್ದರು. ಈ ಸಂಬಂಧ ನಿತ್ಯಾನಂದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಗುಜರಾತ್‌ ಪೊಲೀಸರಿಗೆ ನಿತ್ಯಾನಂದ ಹಾಗೂ ಆತನ ಜತೆ ಇದ್ದಾರೆ ಎನ್ನಲಾದ ಗಜಾನನ ಶರ್ಮಾ ಅವರ ಪುತ್ರಿಯರ ಸುಳಿವು ಸಿಗುತ್ತಿಲ್ಲ. ಹೀಗಾಗಿ ಮೂವರನ್ನೂ ಪತ್ತೆ ಹಚ್ಚಲು ಪೊಲೀಸರು ಬ್ಲೂಕಾರ್ನರ್‌ ನೋಟಿಸ್‌ ಮೊರೆ ಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.

ಕೆಲವು ತಿಂಗಳ ಹಿಂದೆಯೇ ಭಾರತದಿಂದ ಪರಾರಿಯಾಗಿರುವ ನಿತ್ಯಾನಂದ ಸದ್ಯ ಟ್ರಿನಿಡಾಡ್‌ ಮತ್ತು ಟೊಬಾಗೋದಲ್ಲಿ ಅಡಗಿದ್ದಾನೆ ಎಂದು ಹೇಳಲಾಗಿದೆ. ಈ ನಡುವೆ, ಆತ ಈಕ್ವೆಡಾರ್‌ ಬಳಿಯ ದ್ವೀಪವೊಂದರಲ್ಲಿ ಪ್ರತ್ಯೇಕ ದೇಶವನ್ನೂ ಹುಟ್ಟುಹಾಕಿರುವ ವರದಿಗಳು ಸಂಚಲನ ಮೂಡಿಸಿವೆ. ಈ ಸಂದರ್ಭದಲ್ಲೇ ಆತನ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಹೊರಡಿಸಲು ಅಹಮದಾಬಾದ್‌ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಗಜಾನನ ಶರ್ಮಾ ಅವರ ಪುತ್ರಿಯರನ್ನು ಡಿ.10ರೊಳಗೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಗುಜರಾತ್‌ ಹೈಕೋರ್ಟ್‌ ನ.26ರಂದು ಆದೇಶಿಸಿದೆ. ಈ ಸಂಬಂಧ ವಿದೇಶಾಂಗ ಸಚಿವಾಲಯದ ನೆರವನ್ನೂ ಪಡೆಯಲು ಸೂಚನೆ ನೀಡಿದೆ. ನ್ಯಾಯಾಲಯ ನೀಡಿರುವ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಬ್ಲೂ ಕಾರ್ನರ್‌ ನೋಟಿಸ್‌ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ.

ಏನಿದು ಬ್ಲೂಕಾರ್ನರ್‌?

ಜಾಗತಿಕ ಪೊಲೀಸ್‌ ಸಂಘಟನೆ ಇಂಟರ್‌ಪೋಲ್‌ ಮೂಲಕ ಸದಸ್ಯ ರಾಷ್ಟ್ರಗಳಿಗೆ ಹೊರಡಿಸಲಾಗುವ ನೋಟಿಸ್‌ ಇದು. ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿ ತಮ್ಮ ದೇಶದಲ್ಲಿ ಇದ್ದರೆ ಆ ಕುರಿತ ಮಾಹಿತಿಯನ್ನು ಸಂಬಂಧಿಸಿದ ರಾಷ್ಟ್ರಗಳು ನೀಡಬೇಕು. ಇದು ರೆಡ್‌ಕಾರ್ನರ್‌ ನೋಟಿಸ್‌ಗಿಂತ ಭಿನ್ನ. ರೆಡ್‌ ಕಾರ್ನರ್‌ ನೋಟಿಸ್‌ ಜಾರಿಯಾದರೆ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ.