ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಸಿ.ಡಿ. ಬಹಿರಂಗ ಪ್ರಕರಣ ಹೈ ಕೋರ್ಟ್ ಮೆಟ್ಟಿಲೇರಿದ ಸಂತ್ರಸ್ಥ ಯುವತಿ ಸದಾಶಿವನಗರ ಠಾಣೆಯಲ್ಲಿ ದಾಖಲಿಸಿರುವ ದೂರು ಪ್ರಶ್ನಿಸಿ ಕೋರ್ಟ್‌ಗೆ

ಬೆಂಗಳೂರು (ಜೂ.15): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಸಿ.ಡಿ. ಬಹಿರಂಗ ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ದೂರು ಪ್ರಶ್ನಿಸಿ ಸಂತ್ರಸ್ತ ಯುವತಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 

ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿರುವ ಯುವತಿ, ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ 2021ರ ಮಾ.13ರಂದು ರಮೇಶ್‌ ಜಾರಕಿಹೊಳಿ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ದೂರು ಹಾಗೂ ಅದನ್ನು ಆಧರಿಸಿ ದಾಖಲಿಸಿದ ಎಫ್‌ಐಆರ್‌ ಮತ್ತು ನಡೆಸಿರುವ ತನಿಖೆ ರದ್ದುಪಡಿಸುವಂತೆ ಕೋರಿದ್ದಾರೆ. ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮತ್ತು ರಮೇಶ್‌ ಜಾರಕಿಹೊಳಿಗೆ ತುರ್ತು ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಜೂನ್‌ 21ಕ್ಕೆ ಮುಂದೂಡಿದರು. ಸಿ.ಡಿ.ಯಲ್ಲಿರುವ ಯುವತಿಗೂ ತಮಗೂ ಸಂಬಂಧವೇ ಇಲ್ಲ ಎಂದು ಮೊದಲು ತಿಳಿಸಿದ್ದ ರಮೇಶ್‌ ಜಾರಕಿಹೊಳಿ, ಪ್ರಕರಣದ ತನಿಖೆ ನಡೆಸುವಂತೆ ಕೋರಿದ್ದರು. ಬಳಿಕ ಎಸ್‌ಐಟಿ ರಚನೆಯಾಯಿತು. ಈ ಬೆಳವಣಿಗೆ ನೋಡಿದರೆ ರಮೇಶ್‌ ಜಾರಕಿಹೊಳಿ ಪ್ರಭಾವ ಎಷ್ಟಿದೆ ಹಾಗೂ ತನಿಖಾ ತಂಡವು ಅವರ ಪ್ರಭಾವಕ್ಕೆ ಒಳಗಾಗಿದೆ ಎನ್ನುವುದು ಕಾಣುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಜಾರಕಿಹೊಳಿ ಸಿಡಿ ಪ್ರಕರಣ; ತನಿಖಾಧಿಕಾರಿ ಮುಂದೆ ಹೊಸ ಕತೆ ಹೇಳಿದ ಶಂಕಿತ ಸಿಡಿ ಕಿಂಗ್ ಪಿನ್! .

2021ರ ಮಾ.9ಕ್ಕೆ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಅದನ್ನು ಆಧರಿಸಿ ಗೃಹ ಸಚಿವರು ನೀಡಿದ ಸೂಚನೆಯಂತೆ ನಗರ ಪೊಲೀಸ್‌ ಆಯುಕ್ತರು ಪ್ರಕರಣದ ತನಿಖೆಗೆ ಮಾ.11ರಂದು ಎಸ್‌ಐಟಿ ರಚಿಸಿದ್ದರು. .

ಅಷ್ಟೇ ಅಲ್ಲ ದೂರಿನಲ್ಲಿ ಪ್ರಕರಣ ಸಂಬಂಧ ನನ್ನ ವಿರುದ್ಧ ಮೂರು ನಾಲ್ಕು ತಿಂಗಳಿಂದ ಪಿತೂರಿ ನಡೆಸಲಾಗಿತ್ತು. ಹಣ ವಸೂಲಿ ಮಾಡಲು ಪ್ರಯತ್ನಿಸಲಾಗಿದೆ ಎಂಬುದಾಗಿ ಆರೋಪಿಸಿದ್ದರು. ಆದರೂ ದೂರು ದಾಖಲಿಸಲು ಮೂರು ನಾಲ್ಕು ತಿಂಗಳು ಏಕೆ ವಿಳಂಬ ಮಾಡಿದರು ಎನ್ನುವುದಕ್ಕೆ ಸೂಕ್ತ ವಿವರಣೆ ನೀಡಿಲ್ಲ. ಎಷ್ಟುಹಣಕ್ಕೆ ಬೇಡಿಕೆ ಇಡಲಾಗಿತ್ತು? ಎಲ್ಲಿ ಅಪರಾಧ ಕೃತ್ಯ ನಡೆದಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ದೂರು ದಾಖಲಿಸಿದ 70 ದಿನಗಳ ನಂತರ ಎಸ್‌ಐಟಿ ವಿಚಾರಣೆ ವೇಳೆ ಸಿ.ಡಿ.ಯಲ್ಲಿರುವುದು ನಾನೇ ಮತ್ತು ಆ ದೃಶ್ಯಗಳು ವಾಸ್ತವತೆಯಿಂದ ಕೂಡಿವೆ, ಯುವತಿಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆ ನಡೆಸಲಾಗಿದೆ ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಹೇಳಿಕೆಯು ಮೊದಲು ನೀಡಿದ ಹೇಳಿಕೆಗೆ ತದ್ವಿರುದ್ಧವಾಗಿದೆ. ಯುವತಿಯು ಇತರೆ ಆರೋಪಿಗಳೊಂದಿಗೆ ಸೇರಿ ಹಣ ವಸೂಲಿ ಮಾಡಿದ್ದಾರೆ ಎಂದು ಮತ್ತೊಂದು ಕಥೆ ಹೇಳುತ್ತಾರೆ. ಆ ಮೂಲಕ ಅತ್ಯಾಚಾರದಂತಹ ಗಂಭೀರ ಪ್ರಕರಣದ ತನಿಖೆಯಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ಕಥೆ ಹೇಳಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.