ರಾಜ್ಯ ಬಿಜೆಪಿ ನಾಯಕರ ಮತ್ತು ಸಂಸದರು ಬರೀ ಉತ್ತರಕುಮಾರರು ಅಷ್ಟೇ. ಅವರದ್ದು ಜೀ ಹುಜೂರ್‌ ಸಂಸ್ಕೃತಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಲೇವಡಿ ಮಾಡಿದ್ದಾರೆ.

ಬೆಂಗಳೂರು (ಜೂ.20) : ರಾಜ್ಯ ಬಿಜೆಪಿ ನಾಯಕರ ಮತ್ತು ಸಂಸದರು ಬರೀ ಉತ್ತರಕುಮಾರರು ಅಷ್ಟೇ. ಅವರದ್ದು ಜೀ ಹುಜೂರ್‌ ಸಂಸ್ಕೃತಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಲೇವಡಿ ಮಾಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮುಂದೆ ನಿಂತು ಮಾತನಾಡುವ ದಮ್ಮು, ತಾಕತ್ತು ಬಿಜೆಪಿ ನಾಯಕರಿಗೆ ಮತ್ತು ಸಂಸದರಿಗೆ ಇಲ್ಲ. ಅದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಇತ್ತು. ಅವರನ್ನು ಈಗಾಗಲೇ ಮನೆಗೆ ಕಳುಹಿಸಿದ್ದಾರೆ. ತಿರುಪತಿಗೆ ಹೋಗಿ ವೆಂಕಟೇಶ್ವರ ಸ್ವಾಮಿಗೆ ನಮಸ್ಕಾರ ಹಾಕುವ ರೀತಿಯಲ್ಲಿ ಇವರು ನರೇಂದ್ರ ಮೋದಿಯವರಿಗೆ ನಮಸ್ಕಾರ ಹಾಕಿ ಬರುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.

Bengaluru Rains: ಬಿಜೆಪಿ ಬಂದು ಬ್ರಾಂಡ್ ಬೆಂಗಳೂರು ಹೋಯ್ತು, ರಾಮಲಿಂಗಾ ರೆಡ್ಡಿ ಕಿಡಿ

ಅಕ್ಕಿ ವಿಚಾರವಾಗಿ ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದ ಸಚಿವರು, ಕಾಂಗ್ರೆಸ್‌ ಸ್ಪಷ್ಟವಾಗಿ 10 ಕೆಜಿ ಕೊಡುತ್ತೇವೆ ಎಂದು ಹೇಳಿದ್ದು, ನಾವು ನೀಡುತ್ತೇವೆ. ಬಿಜೆಪಿಯವರು ಅಧಿಕಾರಕ್ಕೆ ಬಂದಾಗ ನಾಲ್ಕು ಕೆಜಿಗೆ ಇಳಿಸಿದ್ದರು. ಅವರಿಗೆ ಬಿಪಿಎಲ್‌ ಕಾರ್ಡ್‌ದಾರರ ಮೇಲೆ ಅನುಕಂಪ ಇರಲಿಲ್ಲ. ಇನ್ನು, ಗ್ಯಾರಂಟಿ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರ ಕೇಳಿ ಘೋಷಣೆ ಮಾಡಲಾಗಿದೆಯೇ ಎಂದು ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಬಿಜೆಪಿದಾ? ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಆಡಳಿತ ಮಾಡುತ್ತಿದೆ ಅಷ್ಟೇ. 135 ಕೋಟಿ ಜನರ ಸರ್ಕಾರ ಅದು. ಪುಕ್ಕಟ್ಟೆಯಾಗಿ ಅಕ್ಕಿ ಕೊಡುತ್ತಾರಾ? ರಾಜ್ಯದಿಂದ 4.70 ಲಕ್ಷ ಕೋಟಿ ತೆರಿಗೆ ಪಾವತಿಸಲಾಗುತ್ತಿದ್ದು, ನಮಗೆ 37 ಸಾವಿರ ಕೋಟಿ ರು. ಮಾತ್ರ ಜಿಎಸ್‌ಟಿ ಪರಿಹಾರ ನೀಡಲಾಗುತ್ತದೆ. ನಾವು ಮಾರುಕಟ್ಟೆಯಿಂದ ಅಕ್ಕಿ ತಂದು ಕೊಡುತ್ತೇವೆ. ಮಾತಿಗೆ ತಪ್ಪಲು ನಾವೇನು ಬಿಜೆಪಿಯವರಾ? ರಾಜ್ಯದಲ್ಲಿರುವ ದೊಡ್ಡ ದೊಡ್ಡ ಬಿಜೆಪಿ ನಾಯಕರು ಕೇಂದ್ರ ಸರ್ಕಾರಕ್ಕೆ ಕೊಡಿ ಎಂದು ಹೇಳಬೇಕಲ್ಲವೇ? ಎಂದು ಟೀಕಾಪ್ರಹಾರ ನಡೆಸಿದರು.;

ಸಿಎಂ ಅವಧಿ ಬಗ್ಗೆ ಮಹದೇವಪ್ಪ, ಎಂ.ಬಿ.ಪಾಟಿಲ್‌ ಮಾತು ತಪ್ಪು

ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah CM) ಅವರ ಅವಧಿ ಎಷ್ಟುಎಂಬುದೆಲ್ಲಾ ಹೈಕಮಾಂಡ್‌ನಲ್ಲಿ ಚರ್ಚೆಯಾಗಿದ್ದು, ನಮಗೂ ಗೊತ್ತಿಲ್ಲ. ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು. ಸಚಿವರಾದ ಎಚ್‌.ಸಿ.ಮಹದೇವಪ್ಪರಾಗಲಿ, ಎಂ.ಬಿ.ಪಾಟೀಲ್‌ ಅವರಾಗಲಿ ಮಾತನಾಡಬಾರದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಮುಖ್ಯಮಂತ್ರಿ ವಿಚಾರ ನಮ್ಮ ಆಂತರಿಕ ವಲಯಕ್ಕೆ ಸೀಮಿತವಾಗಿದ್ದು, ಅದರ ಬಗ್ಗೆ ಬಿಜೆಪಿಯವರು ತಲೆಕೆಡಿಸಿಕೊಳ್ಳುವುದು ಬೇಡ. ನಮ್ಮ ಮನೆಗೆ ಬಗ್ಗೆ ಬಿಜೆಪಿಯವರಿಗೆ ಯಾಕೆ ಇಷ್ಟುಚಿಂತೆ? ನಾವು ಯಾರನ್ನಾದರೂ ಮಾಡಿಕೊಳ್ಳುತ್ತೇವೆ. ನ್ನು, ನಮ್ಮ ಪಕ್ಷದವರು ಸಹ ನಾಲ್ಕು ಗೋಡೆಗಳ ನಡುವೆ ಮಾತನಾಡಬೇಕು. ಬಹಿರಂಗವಾಗಿ ಮಾತನಾಡಬಾರದು ಎಂದರು.

'ಬಿಜೆಪಿ ವಿನಾಕಾರಣ ವಿಷಯಾಂತರ ಮಾಡುವ ಕೆಲಸ ಮಾಡುತ್ತಿದೆ'