ಹಾಸನ : ವಾಯು ದಾಳಿ ಬಳಿಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದ್ದು, ರಾಜ್ಯದಲ್ಲಿ ಬಿಜೆಪಿ 22 ಸ್ಥಾನ ಪಡೆಯುವುದು ಖಚಿತ ಎಂದು ಹೇಳಿದ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. 

ಹಾಸನದಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ಇಂತಹ ವಿಚಾರಗಳನ್ನು ಸ್ವಾರ್ಥಕ್ಕಾಗಿ ಹೇಳುತ್ತಿದ್ದಾರೆ. ಹಿಂದೆ ವಾಜಪೇಯಿ ಅವರ ಸರ್ಕಾರವಿದ್ದಾಗ ಕಾರ್ಗಿಲ್ ಯುದ್ಧ ಗೆದ್ದು ಚುನಾವಣೆಯಲ್ಲಿ ಸೋತರು. 

ಮಾತುಗಳಿಂದ ಜನರನ್ನು ಗೆಲ್ಲಲು ಆಗುವುದಿಲ್ಲ. ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿಗೂ ಅದೇ ಸ್ಥಿತಿ ಆಗಲಿದೆ ಎಂದರು.

ಇನ್ನು ಪಾಕಿಸ್ತಾನ ನಿರಂತರವಾಗಿ ಭಾರತದ ಮೇಲೆ ದಾಳಿ ಮಾಡುತ್ತಿದೆ. ಆದರೆ ಪಾಕಿಗೂ ಕೂಡ ಸಹಾಯ ಮಾಡುವ ಹೊರ ಶಕ್ತಿಗಳಿವೆ ಎನ್ನುವುದು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ತಮ್ಮ ಚುನಾವಣಾ ಸ್ಪರ್ಧೆ ಬಗ್ಗೆಯೂ ಪ್ರಸ್ತಾಪಿಸಿದ ಗೌಡರು, ಚುನಾವಣೆಯಲ್ಲಿ ನಿಲ್ಲುವುದು ದೊಡ್ಡ ವಿಚಾರವಲ್ಲ. ಹೊರಗಿದ್ದುಕೊಂಡೂ ರಾಜಕೀಯ ಮಾಡಬಹುದು ಎಂದರು.