PM Modi Birthday: ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಬಿಜೆಪಿ ತೀರ್ಮಾನ
ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಕರ್ನಾಟಕ ಬಿಜೆಪಿ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಬೆಂಗಳೂರು, (ಸೆಪ್ಟೆಂಬರ್.13): ಇದೇ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಇದ್ದು, ಈ ಬಾರಿ ಅವರ ಜನ್ಮದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲು ಬಿಜೆಪಿ ಮುಂದಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ, ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರ ವರೆಗೆ ಭಾರತೀಯ ಜನತಾ ಪಾರ್ಟಿ ವತಿಯಿಂದ ದೇಶದಾದ್ಯಂತ 'ಸೇವಾ ಪಾಕ್ಷಿಕ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇತ್ತ ಕರ್ನಾಟಕ ಬಿಜೆಪಿ ಸಹ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಜನೋಪಕಾರಿ ಕಾರ್ಯಗಳನ್ನ ಮಾಡುವ ಮೂಲಕ ಮೋದಿಯವರ ಹುಟ್ಟುಹಬ್ಬ ಆಚರಣೆ ಮಾಡಲು ನಿರ್ಧರಿಸಿದೆ. ಒಂದು ವಾರ ಏನೆಲ್ಲಾ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಎನ್ನುವ ಮಾಹಿತಿಯ ಪಟ್ಟಿಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಅಧಿಕೃತ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ತಮಿಳುನಾಡಿನವರು ಮೋದಿ ಜನ್ಮದಿನಕ್ಕೆ ಕೊಟ್ಟ ಉಡುಗೊರೆಗೆ ಉಡುಪಿಯಲ್ಲಿ ನಿರಂತರ ಪೂಜೆ!
ಸೇವಾ ಪಾಕ್ಷಿಕದ ಅಂಗವಾಗಿ, ಪ್ರತಿ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರವನ್ನು ನಡೆಸಲು ನಿರ್ಧರಿಸಲಾಗಿದೆ. ಅದರ ಜೊತೆಗೆ, ಪ್ರತಿ ಜಿಲ್ಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ದಿವ್ಯಾಂಗರಿಗೆ ಕೃತಕ ಅಂಗ ಅಥವಾ ಉಪಕರಣಗಳ ವಿತರಣೆ, ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಸೇವಾ ಕಾರ್ಯ, ಪ್ರತಿ ಜಿಲ್ಲೆಗಳ ಬೂತ್ ಮಟ್ಟದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.
ಅಲ್ಲದೇ ಇವುಗಳ ಜೊತೆಗೆ ಎಲ್ಲಾ ಜಿಲ್ಲೆಯ ಮಂಡಲಗಳಲ್ಲಿ ಎರಡು ದಿನಗಳ ಸ್ವಚ್ಛತಾ ಕಾರ್ಯಕ್ರಮ, ಪ್ರತಿ ಜಿಲ್ಲೆಯಲ್ಲಿ ಜಲವೇ ಜೀವನ ಜಾಗೃತಿ ಅಭಿಯಾನ, ವೋಕಲ್ ಫಾರ್ ಲೋಕಲ್ ಗೆ ಉತ್ತೇಜನ ನೀಡಲು ಜನಜಾಗೃತಿ ಅಭಿಯಾನ ನಡೆಸಲು ತೀರ್ಮಾನಿಸಿದೆ.
ಹಾಗೇ 2025ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತ ದೇಶವನ್ನಾಗಿಸುವ ಗುರಿಯೊಂದಿಗೆ ಒಂದು ವರ್ಷ ಕಾಲ ಟಿಬಿ ರೋಗಿಗಳಿಗೆ ಆಹಾರ, ಪೋಷಣೆ ಹಾಗೂ ಜೀವನೋಪಾಯಕ್ಕೆ ಸಂಬಂಧಿಸಿದ ಸೇವಾ ಕಾರ್ಯ ಆರಂಭಿಸಲಾಗುತ್ತದೆ.
ಅಲ್ಲದೆ, ಪ್ರತಿ ಜಿಲ್ಲೆಯಲ್ಲಿ ಭಾರತದ ವಿವಿಧತೆಯಲ್ಲಿ ಏಕತೆಯ ಉತ್ಸವ ಆಯೋಜಿಸಲಾಗುತ್ತಿದ್ದು, ಏಕ್ ಭಾರತ್, ಶ್ರೇಷ್ಠ್ ಭಾರತ್ ಸಂದೇಶವನ್ನು ಸಮಾಜಕ್ಕೆ ನೀಡಲಾಗುವುದು.
ಮೋದಿ ಹುಟ್ಟುಹಬ್ಬದ ದಿನ ಅಂದ್ರೆ ಸೆಪ್ಟೆಂಬರ್ 17ರಂದು ಸೇವಾ ಪಾಕ್ಷಿಕಗೆ ಚಾಲನ ದೊರೆಯಲಿದ್ದು, ಅಕ್ಟೋಬರ್ 2ರ ವರೆಗೆ ನಡೆಸಲಾಗುತ್ತದೆ.