* ಆಡಿಯೋ ಕಟೀಲ್‌ ಅವರದ್ದಲ್ಲ* ಕಟೀಲ್‌ ಅವರ ಹೆಸರಿಗೆ ಕಳಂಕ ತರುವ ಪ್ರಯತ್ನ* ಕೊರೋನಾ ಇಳಿಕೆ ಕಂಡ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಭೇಟಿಯಾದ ಬಿಎಸ್‌ವೈ

ಬೆಂಗಳೂರು(ಜು.19):ಮುಖ್ಯಮಂತ್ರಿ ಹುದ್ದೆಗೆ ಮೂವರ ಹೆಸರು ಚಾಲ್ತಿಯಲ್ಲಿದ್ದು ದೆಹಲಿಯಿಂದಲೇ ನೇಮಕವಾಗಲಿದೆ’ ಎನ್ನಲಾಗಿರುವ ಆಡಿಯೋ ನಕಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸ್ಪಷ್ಟಪಡಿಸಿದ್ದಾರೆ. 

ಈ ಬಗ್ಗೆ ‘ಕನ್ನಡಪ್ರಭ’ದ ಸೋದರ ಸಂಸ್ಥೆ ‘ಸುವರ್ಣ ನ್ಯೂಸ್‌’ ಜೊತೆ ಮಾತನಾಡಿರುವ ಅವರು, ‘ಇದೊಂದು ಫೇಕ್‌ ಆಡಿಯೋ. ಆಡಿಯೋಗೂ ನನಗೂ ಸಂಬಂಧವಿಲ್ಲ. ಇದನ್ನು ಯಾರು ಮಾಡಿದ್ದಾರೆ ಅನ್ನುವುದು ಗೊತ್ತಿಲ್ಲ. ಈ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಮನವಿ ಮಾಡುವೆ. ಇಂದು ಬೆಂಗಳೂರಿಗೆ ಹೋಗುತ್ತಿದ್ದು ಈ ಬಗ್ಗೆ ಮಾತ್ನಾಡ್ತೇನೆ’ ಎಂದರು.

'ಬಿಎಸ್‌ವೈ ಜತೆ ಈಶ್ವರಪ್ಪ ಟೀಂ ಔಟ್: ದಿಲ್ಲಿಯಲ್ಲಿರೋರಿಗೆ ರಾಜ್ಯದ ಸಿಎಂ ಗಾದಿ'

ಆಡಿಯೋ ಕಟೀಲ್‌ ಅವರದ್ದಲ್ಲ: ರವಿಕುಮಾರ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಆಡಿಯೋ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರದ್ದಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದ್ದಾರೆ. ಆಡಿಯೋ ಬಿಡುಗಡೆ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ರಾಜ್ಯಾಧ್ಯಕ್ಷರಾಗಿ ಆ ರೀತಿ ಮಾತನಾಡಲು ಸಾಧ್ಯವೇ ಇಲ್ಲ. ಅದರಲ್ಲೂ ಸಚಿವರಾದ ಕೆ.ಎಸ್‌.ಈಶ್ವರಪ್ಪ ಹಾಗೂ ಜಗದೀಶ್‌ ಶೆಟ್ಟರ್‌ ಅವರು ನಮ್ಮ ನಾಯಕರು. ವ್ಯವಸ್ಥಿತವಾಗಿ ಕಥೆ ಕಟ್ಟಿಆಡಿಯೋ ವೈರಲ್‌ ಮಾಡಲಾಗಿದೆ. ಇದು ನಕಲಿ ವಿಡಿಯೋ ಆಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆಯುತ್ತೇನೆ ಎಂಬುದಾಗಿ ನಳಿನ್‌ ಕುಮಾರ್‌ ಕಟೀಲ್‌ ಅವರು ಹೇಳಿದ್ದಾರೆ. ಬೇರೆ ಅವರ ಧ್ವನಿ ನಕಲಿ ಮಾಡಿದರೆ ದೊಡ್ಡ ಸುದ್ದಿಯಾಗುವುದಿಲ್ಲ ಎಂಬ ಕಾರಣಕ್ಕೆ ರಾಜ್ಯಾಧ್ಯಕ್ಷರ ಧ್ವನಿಯನ್ನು ನಕಲು ಮಾಡಲಾಗಿದ್ದು, ಅವರ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆದಿದೆ. ಯಡಿಯೂರಪ್ಪ ಅವರು ನಮ್ಮ ಮುಖ್ಯಮಂತ್ರಿ ಎಂದು ಕಟೀಲ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ವೈರಲ್‌ ಆಗಿರುವ ಆಡಿಯೋ ನಕಲಿ ಎಂದು ತಿಳಿಸಿದ್ದಾರೆ.

ಇನ್ನು ಕೊರೋನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಳೆದ ಆರು ತಿಂಗಳಿಂದ ದೆಹಲಿಗೆ ಭೇಟಿ ನೀಡಿರಲಿಲ್ಲ. ಇದೀಗ ಕೊರೋನಾ ಇಳಿಕೆ ಕಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾದಿಯಾಗಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.